ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ ಮದುವೆಯಾದ ಮೂರು ತಿಂಗಳಲ್ಲೇ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಲಾಲಗುಡದಲ್ಲಿ ನಡೆದಿದೆ.
ಮಮತಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪತಿ ವೆಂಕಟೇಶ್ವರ ಲಾಲಗುಡದ ರೈಲ್ವೆ ಕ್ವಾರ್ಟರ್ಸ್ ನಲ್ಲಿ ಟೆಕ್ನಿಶೀಯನ್ ಆಗಿ ಕೆಲಸ ಮಾಡುತ್ತಿದ್ದನು. ಈತ ಮೂರು ತಿಂಗಳ ಹಿಂದೆ ಮಮತಾಳನ್ನು ವಿವಾಹವಾಗಿದ್ದನು. ಇವರ ಮದುವೆ ಸಂದರ್ಭದಲ್ಲಿ 3 ಲಕ್ಷ ರೂ.ಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯಾದ ಸ್ವಲ್ಪ ದಿನ ಇಬ್ಬರು ಸಂತೋಷದಿಂದ ಸಂಸಾರ ಮಾಡುತ್ತಿದ್ದರು.
ದಿನಕಳೆದಂತೆ ಪತಿ, ಅತ್ತೆ ಮತ್ತು ನಾದಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮಮತಾ ತುಂಬಾ ಖಿನ್ನತೆಗೆ ಒಳಗಾಗಿದ್ದಳು. ಕೊನೆಗೆ ಕಿರುಕುಳವನ್ನು ಸಹಿಸಲಾಗದೇ ಪತಿ ಟಿಫನ್ ತರಲು ಮನೆಯಿಂದ ಹೋದಾಗ ಮಮತಾ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಕ್ಷಣ ಮನೆಯವರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಮಮತಾ ಮೃತಪಟ್ಟಿದ್ದಳು. ಸದ್ಯಕ್ಕೆ ಪೊಲೀಸರು ಮೃತ ಮಮತಾ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ.