ಶಿವಮೊಗ್ಗ: ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಗೃಹಿಣಿಯನ್ನು ದೀಪ (25) ಎಂದು ಗುರುತಿಸಲಾಗಿದೆ. ಚನ್ನಗಿರಿ ತಾಲೂಕು ಕತ್ತಲಗೆರೆಯ ದೀಪ ಹಾಗೂ ಭದ್ರಾವತಿ ತಾಲೂಕು ಮೈದೊಳಲು ಗ್ರಾಮದ ಪ್ರದೀಪ್ ಜೊತೆ ಕಳೆದ 5 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.
ಮದುವೆಯಾದ ಆರಂಭದಲ್ಲಿ ಇಬ್ಬರ ಸಂಸರ ಚನ್ನಾಗಿಯೇ ಇತ್ತು. ಆದರೆ ವರ್ಷ ಕಳೆದಂತೆ ದೀಪಾಳಿಗೆ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದರು ಎಂದು ದೀಪ ಕುಟುಂಬಸ್ಥರು ಆರೋಪಿಸಿದ್ದಾರೆ.
ದೀಪ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹುಡುಗಿಯಲ್ಲ. ಆಕೆಯನ್ನು ಶುಕ್ರವಾರ ಮಧ್ಯರಾತ್ರಿ ಗಂಡ, ಅತ್ತೆ ಮಾವ ಸೇರಿಕೊಂಡು ಹೊಡೆದು ನೇಣು ಹಾಕಿದ್ದಾರೆ ಎಂದು ಮೃತ ದೀಪ ಕುಟುಂಬದವರ ಆರೋಪವಾಗಿದೆ. ಈ ಘಟನೆ ನಂತರ ಪತಿ, ಅತ್ತೆ – ಮಾವ ಪರಾರಿಯಾಗಿದ್ದಾರೆ.
ಸದ್ಯ ಈ ವಿಷಯ ತಿಳಿದ ಹೊಳೆಹೊನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.