ಬೆಂಗಳೂರು: ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ (Congress Guarantee) ಯೋಜನೆ ಜಾರಿ ಮಾಡಲು ಸಿದ್ದರಾಮಯ್ಯ (Siddaramaiah) ಸರ್ಕಾರಕ್ಕೆ ಅಂಕಿಅಂಶಗಳು ಶಾಕ್ ಕೊಟ್ಟಿದೆ.
5 ಗ್ಯಾರಂಟಿಗಳ ಅನುಷ್ಠಾನಕ್ಕೆ ಫಲಾನುಭವಿಗಳ ಅಂಕಿಅಂಶಗಳೇ ಘನ ಸರ್ಕಾರದ ಬಳಿ ಇಲ್ಲ. ಅಂಕಿ ಅಂಶಗಳು ಇಲ್ಲದೇ ಇದ್ದರೂ ಮುಂದಿನ ಕ್ಯಾಬಿನೆಟ್‌ನಲ್ಲಿ ಜಾರಿ ಮಾಡಲಾಗುವುದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಒಂದು ವಾರದಲ್ಲಿ ಅಂಕಿಅಂಶ ಸಂಗ್ರಹ ಮಾಡುವುದು ಕಷ್ಟವಾಗಿದ್ದು, ಶೀಘ್ರವೇ ಗ್ಯಾರಂಟಿ ಘೋಷಣೆ ಜಾರಿ ಅನುಮಾನವಾಗಿದೆ.
Advertisement
Advertisement
Advertisement
ಸರ್ಕಾರಕ್ಕೆ `ಗ್ಯಾರಂಟಿ’ ಸಂಕಷ್ಟ
5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳಿಗೆ ಫಲಾನುಭವಿಗಳ ಅಂಕಿಅಂಶ ಅಗತ್ಯವಿದೆ. 10 ಕೆ.ಜಿ ಅಕ್ಕಿ ಗ್ಯಾರಂಟಿಯನ್ನು ಬಿಪಿಎಲ್ ಕಾರ್ಡ್‍ದಾರರಿಗೆ ಕೊಟ್ಟು ನಿಭಾಯಿಸಬಹುದು. ಆದರೆ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆ ಜಾರಿಗೆ ಸರಿಯಾದ ಅಂಕಿಅಂಶಗಳು ಬೇಕು.
Advertisement
200 ಯೂನಿಟ್ ಉಚಿತ ವಿದ್ಯುತ್‍ಗೆ (Free Electricity) ಎಷ್ಟು ಫಲಾನುಭವಿಗಳು ಇದ್ದಾರೆ ಎಂಬ ಮಾಹಿತಿ ಇಲ್ಲ. ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumar) ತಮ್ಮ ಪ್ರಚಾರ ಭಾಷಣದಲ್ಲಿ ಜನರಿಗೆ, ಸರ್ಕಾರಿ ನೌಕರರಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ. ಜೂನ್ ತಿಂಗಳಿನಿಂದ ಯಾರೂ ವಿದ್ಯುತ್ ಬಿಲ್ ಪಾವತಿಸಬೇಡಿ ಎಂದು ಘೋಷಣೆ ಮಾಡಿದ್ದರು. ಈ 200 ಯೂನಿಟ್ ಫ್ರೀ ವಿದ್ಯುತ್‍ಗೆ 1,200 ಕೋಟಿ ರೂ. ತಗಲಬಹುದು ಎಂದು ಸರ್ಕಾರ ಅಂದಾಜು ಮಾಡಿದೆ. ಇದನ್ನೂ ಓದಿ: ಮಧ್ಯರಾತ್ರಿ ಕರೆ – ಸ್ಪೀಕರ್ ಆಗಲಿದ್ದಾರೆ ಯುಟಿ ಖಾದರ್
ಗೃಹಲಕ್ಷ್ಮಿ ಫಲಾನುಭವಿಗಳ ಮಾಹಿತಿಯೂ ಇಲ್ಲ. ಫಲಾನುಭವಿಗಳ ಬ್ಯಾಂಕ್ ಖಾತೆ ವಿವರವೂ ಇಲ್ಲ. ಉಚಿತ ಬಸ್ ಪಾಸ್ ಎಷ್ಟು ಜನರಿಗೆ ಕೊಡಬೇಕು ಎಂಬ ಅಂಕಿಅಂಶಗಳು ಇಲ್ಲ. ಮೊದಲ ಕ್ಯಾಬಿನೆಟ್‌ನಲ್ಲಿ ಕರ್ನಾಟಕದ ಮಹಿಳೆಯರಿಗೆ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದರು. ಪ್ರಚಾರ ಭಾಷಣದಲ್ಲಿ ಡಿಕೆ ಶಿವಕುಮಾರ್ ರಾಜ್ಯದ ಎಲ್ಲಾ ಕಡೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಬಹುದು ಎಂದು ಭರವಸೆ ನೀಡಿದ್ದರು.
ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನೀಡುವ ಯುವ ನಿಧಿ ಭತ್ಯೆಗೆ ಫಲಾನುಭವಿಗಳ ಸಂಖ್ಯೆ ಕಂಡುಹಿಡಿಯುವುದು ಹೇಳಿದಷ್ಟು ಸುಲಭವಿಲ್ಲ. ಕೇಂದ್ರ ಸರ್ಕಾರ ರೈತರಿಗೆ ನೀಡುವ ಕೃಷಿ ಸಮ್ಮಾನ್ ಯೋಜನೆಯಲ್ಲಿ ರೈತರ ಕೃಷಿ ಭೂಮಿ ಲಿಂಕ್ ಆಗಿರುತ್ತದೆ. ಈ ಕಾರಣಕ್ಕೆ ಭೂಮಿ ಹೊಂದಿರುವ ರೈತರ ಖಾತೆಗಳಿಗೆ ಮಾತ್ರ ಹಣ ಜಮೆ ಆಗುತ್ತದೆ. ಆದರೆ ಇಲ್ಲಿ ನಿರುದ್ಯೋಗಿ ಎಂದು ಕಂಡು ಹಿಡಿಯುವುದು ಹೇಗೆ? ಮಾನದಂಡ ಏನು ಎನ್ನುವುದೇ ಸದ್ಯದ ಕುತೂಹಲ.
.
ಸರ್ಕಾರ ಈ 5 ಯೋಜನೆಗಳಿಗೆ 50 ಸಾವಿರ ಕೋಟಿ ರೂ. ತಗಲಬಹುದು ಎಂದು ಅಂದಾಜಿಸಿದೆ. ಆದರೆ ಬಿಪಿಎಲ್ ಕಾರ್ಡ್‌ದಾರರ ಮಾಹಿತಿ ಹೊರತು ಪಡಿಸಿ ಉಳಿದ 4 ಯೋಜನೆಗಳಿಗೆ ಎಷ್ಟು ಖರ್ಚಾಗಬಹುದು ಎಂಬ ಮಾಹಿತಿಯೇ ಸರ್ಕಾರದ ಬಳಿ ಇಲ್ಲ. ಈ ಎಲ್ಲಾ ಕಾರಣಗಳಿಂದ ಶೀಘ್ರವೇ ಈ ಯೋಜನೆ ಜಾರಿ ಮಾಡುವುದು ಅನುಮಾನ.
ತಮ್ಮ ಪ್ರಚಾರ ಭಾಷಣದಲ್ಲಿ ನಾಯಕರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಮೊದಲ ಕ್ಯಾಬಿನೆಟ್‌ನಲ್ಲಿ 5 ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಕೇವಲ ತಾತ್ವಿಕ ಒಪ್ಪಿಗೆ ನೀಡಲಾಗಿದೆ.