ಡಬಲ್ ಇಂಜನ್ನಿನ ಮಜವೇ ಬೇರೆ!

Public TV
2 Min Read
DOUBLE ENGINE 1

– ನಗುವಿನೊಂದಿಗೆ ಗಾಢ ಕುತೂಹಲಗಳ ನಾಕಾಬಂಧಿ!

ರೇಟಿಂಗ್: 4/5 
ಬೆಂಗಳೂರು: ನೋಡುಗರನ್ನೆಲ್ಲ ಟ್ರೈಲರ್ ಮೂಲಕವೇ ತುದಿಗಾಲಲ್ಲಿ ನಿಲ್ಲಿಸಿದ್ದ ಚಂದ್ರ ಮೋಹನ್ ನಿರ್ದೇಶನದ ‘ಡಬಲ್ ಇಂಜಿನ್’ ಚಿತ್ರ ಬಿಡುಗಡೆಯಾಗಿದೆ. ತೆಳುವಾದ ಡಬಲ್ ಮೀನಿಂಗ್ ಡೈಲಾಗುಗಳ ಮೂಲಕವೇ ಕಚಗುಳಿ ಇಟ್ಟಿದ್ದರಿಂದ ಅಂಥಾ ನಿರೀಕ್ಷೆಯಿಟ್ಟುಕೊಂಡು ಬಂದವರನ್ನೂ ಮತ್ತೊಂದು ಜಗತ್ತಿಗೆ ಕರೆದೊಯ್ದು ಭರಪೂರ ನಗುವಿನ ಜೊತೆಗೇ ಗಂಭೀರ ವಿಚಾರಗಳನ್ನೂ ಪ್ರಸ್ತುತ ಪಡಿಸೋದು ಈ ಚಿತ್ರದ ನಿಜವಾದ ಸ್ಪೆಷಾಲಿಟಿ!

ಭರಪೂರ ಹಾಸ್ಯದ ಮೂಲಕವೇ ಅತ್ಯಂತ ಗಂಭೀರ ವಿಚಾರವೊಂದನ್ನು ಹೇಳೋದು ಸವಾಲಿನ ವಿಚಾರ. ಆದರೆ ಅಂಥಾ ಕಲೆಯನ್ನು ಕರತಲಾಮಲಕ ಮಾಡಿಕೊಂಡಿರುವ ಚಂದ್ರಮೋಹನ್ ಅದರಲ್ಲಿ ಗೆದ್ದಿದ್ದಾರೆ. ಪ್ರತೀ ಹಳ್ಳಿಗಳಲ್ಲಿಯೂ ಸಾಮಾನ್ಯವಾಗಿ ಇರುವ ಪಡ್ಡೆಗಳಂಥಾದ್ದೇ ವ್ಯಕ್ತಿತ್ವ ಹೊಂದಿರುವ ಮೂವರು ಹುಡುಗರು. ತಲತಲಾಂತರಗಳಿಂದ ಮಾಡಿಕೊಂಡು ಬಂದರೆ ಹೊಲದ ಮಣ್ಣು ಬಾಯಿಗೆ ಬೀಳಬಹುದೇ ಹೊರತು ಕೈ ತುಂಬಾ ಕಾಸು ಮಾಡಲಾಗೋದಿಲ್ಲ ಎಂಬುದನ್ನು ಬಲವಾಗಿ ನಂಬಿ ಅಡ್ಡಾಡಿಕೊಂಡಿರೋ ಆ ಮೂವರು ಊರವರ ಕಣ್ಣಲ್ಲಿ ಕೆಲಸಕ್ಕೆ ಬಾರದವರು. ಇಂಥಾ ಮೂವರು ಹುಡುಗರೂ ಇದ್ದಕ್ಕಿದ್ದಂತೆ ಒಂದೇ ಏಟಿಗೆ ಕೋಟಿ ಕೋಟಿ ಕಾಸು ಮಾಡೋ ಆಸೆಯೊಂದಿಗೆ ಚಕ್ರಸುಳಿಯೊಂದಕ್ಕೆ ಪ್ರವೇಶ ಮಾಡುತ್ತಾರೆ.

DOUBLE ENGINE

ಹೀಗೆಂದಾಕ್ಷಣ ಆ ಮೂವರು ಕೊಲೆ, ಸುಲಿಗೆ ಕಳ್ಳತನದಂಥಾ ಮಾಮೂಲಿ ಅನಾಹುತಕ್ಕೆ ಕೈ ಹಾಕುತ್ತಾರೆಂದುಕೊಂಡರೆ ಅದನ್ನು ಈ ಚಿತ್ರ ಸುಳ್ಳು ಮಾಡುತ್ತದೆ. ಈ ಹುಡುಗರು ತಕ್ಷಣಕ್ಕೆ ಊಹಿಸಲಾಗದಂಥಾದ್ದೊಂದು ಕೆಲಸಕ್ಕೆ ಕೈ ಹಾಕುತ್ತಾರೆ. ಅದುವೇ ಇಡೀ ಚಿತ್ರದ ಅಸಲೀ ಶಕ್ತಿ. ಡಬಲ್ ಎಂಜಿನ್ ಚಿತ್ರದಲ್ಲಿ ಕ್ಷಣ ಕ್ಷಣಕ್ಕೂ ಕುತೂಹಹಲವಿದೆ, ಯಾರೂ ಊಹಿಸಲು ಸಾಧ್ಯವಾಗದಂಥಾ ತಿರುವುಗಳಿವೆ. ಆದರೆ ಕಥೆ ಅದೆಷ್ಟೇ ಗಂಭೀರವಾಗಿ ಸಾಗಿದರೂ ಪ್ರತೀ ಕ್ಷಣವೂ ನಗುವಿಗೇನೂ ಕೊರತೆ ಇಲ್ಲ. ಮೂವರು ಹುಡುಗರ ಜೊತೆಗೊಬ್ಬಳು ಸುಂದರಾಂಗಿ, ಅವರ ಜೊತೆಗೆ ಪೊಲೀಸ್ ಅಧಿಕಾರಿಗಳು, ಪ್ರೀತಿಯನ್ನು ದಕ್ಕಿಸಿಕೊಳ್ಳುವ ಪಡಿಪಾಟಲು, ಯಾರನ್ನೋ ತೃಪ್ತಿಪಡಿಸುವ ಪ್ರಾಮಾಣಿಕತೆ, ಹೃದಯ ಮಿಡಿಯುವ ಸನ್ನಿವೇಶ ಎಲ್ಲವೂ ಇದೆ. ಅದೆಲ್ಲ ಇದ್ದರೂ ಎಲ್ಲಿಯೂ ಗೊಂದಲ ಕಾಡದಂತೆ, ಒಂದರೆ ಕ್ಷಣವೂ ಕಥೆಯನ್ನು ಸಡಿಲ ಬಿಡದಂತೆ ನಗುವಿನ ಜೊತೆಗೇ ರೋಚಕವಾಗಿ ಕಟ್ಟಿ ಕೊಡಲಾಗಿದೆ.

ಮಗನ ಏಳಿಗೆಯನ್ನೇ ಏದುರು ನೋಡುವ ತಾಯಿ, ಒಂಟಿ ಹೆಣ್ಣನ್ನು ಬೇರೆಯದ್ದೇ ದೃಷ್ಟಿಯಿಂದ ಅಳೆಯೋ ಸಮಾಜ, ಹೆಣ್ಣೊಬ್ಬಳು ಸಿಕ್ಕರೆ ಬೇರೆಯದ್ದೇ ದಂಧೆಗಿಳಿಸಲು ಹಾತೊರೆಯೋ ದುಷ್ಟತನ… ಇದೆಲ್ಲವೂ ಡಬಲ್ ಎಂಜಿನ್‍ನಲ್ಲಿದೆ. ಡಬಲ್ ಮೀನಿಂಗಿನಾಚೆಗೆ ಸಮಾಜದ ಅಂಕುಡೊಂಕುಗಳಿಗೂ ಹಾಸ್ಯದ ಮೂಲಕವೇ ಕಣ್ಣಾಗಿರೋ ಈ ಚಿತ್ರ ಬಹುಶಃ ಎಷ್ಟು ಸಲ ನೋಡಿದರೂ ಒಂದು ಕುತೂಹಲವನ್ನು ಖಂಡಿತಾ ಉಳಿಸಿಕೊಳ್ಳುತ್ತದೆ!

double engine

Share This Article