ಬೆಂಗಳೂರು: ಚಂದ್ರಮೋಹನ್ ನಿರ್ದೇಶನದ ಡಬ್ಬಲ್ ಇಂಜಿನ್ ಬಿಡುಗಡೆಯಾಗಿ ವಾರಗಳು ಕಳೆಯುತ್ತಲೇ ಗೆಲುವಿನ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಹ್ಯೂಮರಸ್ ಕಾಮಿಡಿ, ಭಿನ್ನವಾದ ಕಥಾ ಹಂದರದಿಂದಲೇ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ಈ ಚಿತ್ರದ ಡಬ್ಬಿಂಗ್ ಹಕ್ಕುಗಳಿಗಾಗಿ ಪರಭಾಷೆಗಳಲ್ಲಿಯೂ ಬೇಡಿಕೆ ಬರುತ್ತಿರುವ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಬೇರೆ ಭಾಷೆಗಳಲ್ಲಿ ಈ ಚಿತ್ರವನ್ನು ರೀಮೇಕ್ ಮಾಡಲೂ ಕೂಡಾ ಪೈಪೋಟಿ ಶುರುವಾಗಿದೆ!
ಈ ಚಿತ್ರವನ್ನು ನೋಡಿ ಖುಷಿಗೊಂಡು ರೀಮೇಕ್ ಹಕ್ಕಿಗಾಗಿ ಉತ್ಸುಕರಾದವರಲ್ಲಿ ಮುಂಚೂಣಿಯಲ್ಲಿರುವವರು ಮರಾಠಿಯ ಖ್ಯಾತ ನಿರ್ಮಾಪಕ ಪ್ರಮೋದ್ ಬಕಾಡಿಯಾ. ಈ ಬಗ್ಗೆ ಪ್ರಮೋದ್ ಈಗಾಗಲೇ ಡಬ್ಬಲ್ ಇಂಜಿನ್ ಚಿತ್ರದ ನಿರ್ದೇಶಕರನ್ನು ಸಂಪರ್ಕಿಸಿದ್ದಾರೆ. ಒಂದು ಸುತ್ತಿನ ಮಾತುಕತೆಗಳೂ ನಡೆದಿವೆ. ಹೆಚ್ಚೂ ಕಡಿಮೆ ಡಬ್ಬಲ್ ಇಂಜಿನ್ ಮರಾಠಿಗೆ ರೀಮೇಕ್ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಇತ್ತೀಚೆಗಷ್ಟೇ ಪ್ರಮೋದ್ ಬಕಾಡಿಯಾ ಡಬಲ್ ಇಂಜಿನ್ ಚಿತ್ರವನ್ನು ನೋಡಿದ್ದರು. ಖುಷಿಗೊಂಡ ಅವರು ಆ ಕ್ಷಣವೇ ಈ ಚಿತ್ರವನ್ನು ಮರಾಠಿಯಲ್ಲಿ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕೂಡಲೇ ನಿರ್ದೇಶಕರ ಚಂದ್ರಮೋಹನ್ ಮತ್ತು ಹಂಚಿಕೆದಾರರಾದ ಉದಯ್ ಮೆಹ್ತಾರನ್ನು ಸಂಪರ್ಕಿಸಿದ್ದಾರೆ. ಇನ್ನು ಅಂತಿಮ ಹಂತದ ಮಾತುಕತೆಯಷ್ಟೇ ಬಾಕಿ ಉಳಿದುಕೊಂಡಿದೆ.
ಕನ್ನಡ ಚಿತ್ರ ಈ ರೀತಿಯಲ್ಲಿ ಬೇರೆ ಭಾಷೆಗಳನ್ನೂ ಪ್ರಭಾವಿಸುತ್ತಿರೋದು ನಿಜಕ್ಕೂ ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯ ವಿಚಾರ. ಡಬಲ್ ಇಂಜಿನ್ ರೀಮೇಕ್ ಮತ್ತು ಡಬ್ಬಿಂಗ್ ಹಕ್ಕುಗಳಿಗಾಗಿ ದಿನನಿತ್ಯ ಬೇರೆ ಬೇರೆ ಭಾಷೆಗಳಿಂದ ಬೇಡಿಕೆಗಳು ಬರುತ್ತಲೇ ಇರೋದರಿಂದ ಚಿತ್ರ ತಂಡದ ಮುಖದಲ್ಲಿ ಮಂದಹಾಸ ಮೂಡಿಕೊಂಡಿದೆ.