ನವದೆಹಲಿ: ಮೂರನೇ ಅಲೆಯ ಭೀತಿಯಲ್ಲಿರುವ ಕೇಂದ್ರ ಸರ್ಕಾರ ಕೊರೊನಾ ನಿಗ್ರಹಕ್ಕಾಗಿ ವೇಗವಾಗಿ ವ್ಯಾಕ್ಸಿನೇಷನ್ ಮಾಡುತ್ತಿದೆ. ವರ್ಷಾಂತ್ಯಕ್ಕೆ ದೇಶದ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ವ್ಯಾಕ್ಸಿನ್ ನೀಡುವುದು ಅನುಮಾನ ಎಂದು ಅಧಿಕಾರಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಗತಿ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಭಾರತದ 94 ಕೋಟಿ ವಯಸ್ಕರಿಗೆ ಎರಡು ಡೋಸ್ ಈ ವರ್ಷಾಂತ್ಯಕ್ಕೆ ನೀಡಲು ಸಾಧ್ಯವಿಲ್ಲ. ಆದರೂ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ
ಇತ್ತೀಚೆಗೆ ಕೇಂದ್ರ ನೂರು ಕೋಟಿ ಡೋಸ್ ನೀಡುವ ಮೂಲಕ ದಾಖಲೆ ಮಾಡಿತ್ತು. ವೇಗವಾಗಿ ವ್ಯಾಕ್ಸಿನ್ ನೀಡುತ್ತಿರುವ ಆರೋಗ್ಯ ಇಲಾಖೆ 2021 ರ ಅಂತ್ಯಕ್ಕೆ ದೇಶದ ಎಲ್ಲ ವಯಸ್ಕರಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಿತ್ತು. ಅದರಂತೆಯೇ ಸದ್ಯ 74 ಕೋಟಿ ಜನರಿಗೆ ಮೊದಲ ಡೋಸ್ ನೀಡಿದ್ದು, 35 ಕೋಟಿ ಜನರಿಗೆ ಎರಡನೇ ಡೋಸ್ ನೀಡಲಾಗಿದೆ.
ಸುಮಾರು 20 ಕೋಟಿಯಷ್ಟು ಜನರು ಇನ್ನು ಒಂದು ಡೋಸ್ ವ್ಯಾಕ್ಸಿನ್ ಕೂಡಾ ಪಡೆದಿಲ್ಲ. ಸಾಕಷ್ಟು ವ್ಯಾಕ್ಸಿನ್ ದಾಸ್ತನು ಇದ್ದರೂ, ವ್ಯಾಕ್ಸಿನ್ ಹಂಚಿಕೆಯ ವೇಗ ಕಡಿಮೆಯಾಗಿದೆ. ಈ ಪರಿಣಾಮ ವರ್ಷಾಂತ್ಯಕ್ಕೆ ನಮ್ಮ ಗುರಿ ತಲುಪಲು ಅಡ್ಡಿ ಉಂಟು ಮಾಡಲಿದೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ವಾಕಿಂಗ್ ಮುಗಿಸಿ ಮನೆಗೆ ಬಂದ DYSP ಹೃದಯಾಘಾತದಿಂದ ಸಾವು
ಈವರೆಗೂ ಭಾರತದಲ್ಲಿ 109 ಕೋಟಿ ಡೋಸ್ ವ್ಯಾಕ್ಸಿನ್ ಹಂಚಿಕೆಯಾಗಿದ್ದು, ದೇಶದ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ನೀಡಲು 188 ಕೋಟಿ ಡೋಸ್ ಲಸಿಕೆ ಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ 16 ಕೋಟಿ ಡೋಸ್ ನಷ್ಟು ದಾಸ್ತನು ರಾಜ್ಯಗಳಲ್ಲಿದ್ದು, ಎಲ್ಲ ಖಾಸಗಿ ಆಸ್ಪತ್ರೆಗಳೂ ಸೇರಿ ಒಟ್ಟು 3-4 ಕೋಟಿ ಡೋಸ್ ಲಸಿಕೆ ಲಭ್ಯವಿದೆ.