ಬಘೀರ ಸಿನಿಮಾದ ಶೂಟಿಂಗ್ ವೇಳೆ ಏಟು ಮಾಡಿಕೊಂಡು, ಶಸ್ತ್ರ ಚಿಕಿತ್ಸೆಯ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ನಟ ಶ್ರೀಮುರಳಿ (Srimurali) ತಪ್ಪದೇ ಮತಗಟ್ಟಿಗೆ ಬಂದು ಮತದಾನ ಮಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅವರು ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.
ಮತದಾನದ (Voting) ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಮುರಳಿ, ‘ಮತದಾನ ನಮ್ಮ ಹಕ್ಕು ಮತ ಚಲಾಯಿಸಿದ್ದೇವೆ. ನಮ್ಮ ಬೂತ್ ಅಲ್ಲಿ ತುಂಬಾ ಜನ ಇದ್ರು, ನೋಡಿ ತುಂಬಾ ಖುಷಿ ಆಯ್ತು. ಹಿರಿಯ ನಾಗರೀಕರು ಬರ್ತಾ ಇದ್ದಾರೆ. ಪ್ರಜಾಪ್ರಭುತ್ವ ನಾವು ಆಯ್ಕೆ ಮಾಡಿಕೊಳ್ಳೋದು. ಯೂತ್ ಇನ್ನೂ ಬರ್ತಿಲ್ಲ ಅಂತಾ ಅಂದರೆ ಏನು ಹೇಳಬೇಕು. ಇಂತಹ ಜವಾಬ್ದಾರಿ ಮೆರೆಯಬಾರದು. ಇಲ್ಲೇನೂ ಎಕ್ಸಾಂ ಬರೆಸಲ್ಲ ಬಂದು ಮತದಾನ ಮಾಡಿ. ನಿಮಗೆ ಬೇಕಾದ ನಾಯಕನನ್ನ ಆಯ್ಕೆ ಮಾಡಿಕೊಳ್ಳಿ. ಯಾರು ಯಾರು ಓಟ್ ಮಾಡಿಲ್ಲ ಅವರಿಗೆ ಏನು ಹೇಳಬೇಕು ಮಾಧ್ಯಮ ಮುಂದೆ ಮಾತಾಡಬಾರದು’ ಎಂದಿದ್ದಾರೆ.
ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಒಟ್ಟಾಗಿಯೇ ಬಂದು ಮತ ಚಲಾಯಿಸಿದರು. ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್, ಅವರ ಪತ್ನಿ ಮಂಗಳ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಟ್ಟಾಗಿ ಬಂದು ಮತದಾನ ಮಾಡಿದ್ದಾರೆ.
ಮತದಾನದ ನಂತರ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ‘ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ ಎಂದರು. ಈ ಹಿಂದೆ ಅಪ್ಪ ಅಮ್ಮನ ಜೊತೆ ಬಂದು ವೋಟು ಮಾಡುತ್ತಿದ್ದೆವು. ಆಮೇಲೆ ಅಪ್ಪು ಜೊತೆ ಬಂದೆ. ಈಗ ಒಬ್ಬೊಬ್ಬರೆ ಹೋಗುತ್ತಿದ್ದಾರೆ. ಮುಂದಿನ ಪೀಳಿಗೆ ಮತದಾನಕ್ಕೆ ಸಜ್ಜಾಗುತ್ತಿದೆ ಎಂದರು.
ಆರ್.ಆರ್ ನಗರ ಮತ ಕೇಂದ್ರಕ್ಕೆ ಪತಿ ಸಮೇತ ಆಗಮಿಸಿದ್ದ ನಟಿ ಅಮೂಲ್ಯ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ನಿಂತಿದ್ದ ಅಮೂಲ್ಯ, ಆ ನಂತರ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗ ವೋಟು ಹಾಕಿದ್ದಾರೆ.
ಮತದಾನದ ನಂತರ ಮಾತನಾಡಿದ ಅಮೂಲ್ಯ, ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ ಎಂದರು.
ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿದ್ದ ಸಪ್ತಮಿ ಗೌಡ ಮತದಾನ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದರು.