ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಧೈರ್ಯ ತುಂಬಿದ್ದಾರೆ.
ಈ ವಿಚಾರವನ್ನು ಸ್ವತಃ ಬಿಸಿ ಪಾಟೀಲ್ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಧೈರ್ಯಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಅಂತ ಶಾಸಕ ಬಿ.ಸಿ.ಪಾಟೀಲ್ ಹೇಳಿಕೊಂಡಿದ್ದಾರೆ.
Advertisement
ಇಂದು ಬೆಳಗ್ಗೆ ಕರೆ ಮಾಡಿದ ಸುತ್ತೂರು ಶ್ರೀಗಳು, ಸಚಿವ ಸ್ಥಾನದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಸ್ವಾಮೀಜಿ ಬಿ.ಸಿ ಪಾಟೀಲ್ ಅವರಿಗೆ ಮಂತ್ರಿ ಪದವಿ ಸಿಗದಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಶಾಸಕರನ್ನು ಸಮಾಧಾನಿಸಿ ಸ್ವಾಮೀಜಿ ಧೈರ್ಯ ತುಂಬಿದ್ದಾರೆ. ಇಂತಹ ಶ್ರೀಗಳು ಲಿಂಗಾಯತರಲ್ಲಿ ಬೇಕು ಎಂದು ಟ್ವೀಟ್ ಮಾಡಿದ್ದಾರೆ.
Advertisement
ಇಂದು ಬೆಳಗ್ಗೆ ಸುತ್ತೂರು ಶ್ರೀಗಳು ಕರೆ ಮಾಡಿ ನನಗೆ ಮಂತ್ರಿ ಪದವಿ ಸಿಗದೇ ಇದ್ದುದ್ದಕ್ಕೆ ವಿಷಾದ ವ್ಯಕ್ತಪಡಿಸಿ ಧೈರ್ಯಗೆಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಮಾಧಾನಿಸಿ ಧೈರ್ಯ ತುಂಬಿದರು ಇಂಥ ಶ್ರೀಗಳು ಲಿಂಗಾಯಿತರಲ್ಲಿ ಬೇಕು
— Kourava B.C.Patil (@bcpatilkourava) December 23, 2018
Advertisement
ಅಸಮಾಧಾನ ಹೊರ ಹಾಕಿದ್ರು:
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಳ ನೋವು, ಬೇಸರ ಆಗಿದೆ. ಜಾತಿವಾರು, ಪ್ರಾಂತ್ಯಾವಾರು ವಿಚಾರದಲ್ಲಿ ಹಾವೇರಿ ಜಿಲ್ಲೆ ಲೆಕ್ಕಕ್ಕೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ನಾನು ಏಕೈಕ ಕಾಂಗ್ರೆಸ್ ಶಾಸಕನಾಗಿದ್ದೇನೆ. ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ನಾನೊಬ್ಬನೆ ಲಿಂಗಾಯತ ಶಾಸಕ. ಈ ಬಾರಿ ಸಚಿವ ಸ್ಥಾನ ಸಿಗೋ ಭರವಸೆ ಇತ್ತು. ಪ್ರಥಮ ಬಾರಿ ಸಾದರ ಲಿಂಗಾಯತರನ್ನು ಹೊರಗಿಟ್ಟು ಸಚಿವ ಸಂಪುಟ ಆಗಿರೋದು. ಹಾವೇರಿ ಜಿಲ್ಲೆಗೆ ಹೇಳೋರು ಕೇಳೋರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
Advertisement
ಬಹುತೇಕ ಎಲ್ಲ ಸರ್ಕಾರಗಳು ಇದ್ದಾಗ ಸಾದರ ಲಿಂಗಾಯತರಿಗೆ ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ನಾನು ಸಿದ್ದರಾಮಯ್ಯರನ್ನ ನಂಬಿದ್ದೆ. ಇಷ್ಟು ವರ್ಷಗಳ ಕಾಲ ಸಿದ್ದರಾಮಯ್ಯನವರ ಜೊತೆಗಿದ್ದೆ. ಅವರೇ ನಮ್ಮ ಗಾಡ್ ಫಾದರ್. ನಾನು ಅವರನ್ನೇ ನಂಬಿದ್ದೆ, ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ನನಗೆ ಮಂತ್ರಿ ಸ್ಥಾನ ಸಿಗುತ್ತಿತ್ತು. ಹಾವೇರಿ ಜಿಲ್ಲೆ ಏನು ತಪ್ಪು ಮಾಡಿದೆ? ಜಿಲ್ಲೆಯ ಜನರು ಯಾವ ರೀತಿ ಪಕ್ಷವನ್ನು ನಂಬಬೇಕು ಅಂತ ಗೊತ್ತಾಗ್ತಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂದಾಗ ಯಾರೂ ನನ್ನ ಪರವಾಗಿಲ್ಲ ಎಂದು ನೊಂದುಕೊಂಡಿದ್ದರು.
ಮುಂದಿನ ನಡೆ ಏನು ಅಂತ ಕಾದು ನೋಡಿ, ದಿಢೀರ್ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನಾನು ಎಲ್ಲೂ ಹೋಗಲ್ಲ, ಲೋಕಸಭಾ ಚುನಾವಣೆಯ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ. ನಾನು ಪಕ್ಷದ ಪರ ನಿಲ್ಲಲೇಬೇಕಾಗುತ್ತದೆ ಎಂದು ತಿಳಿಸಿದ್ದರು. ಇದಕ್ಕೂ ಮೊದಲು ಪುತ್ರಿ ಸೃಷ್ಠಿ ಪಾಟೀಲ್ ಅವರು ತಂದೆಗೆ ಸಚಿವ ಸ್ಥಾಸ ಸಿಗಲಿಲ್ಲ ಅಂತ ಹೈಕಮಾಂಡ್ ವಿರುದ್ಧ ಕಿಡಿಕಾರಿ ಅಸಮಾಧಾನ ಹೊರಹಾಕಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv