– ರೋಡಿನ ಬಗ್ಗೆ ಮಾತ್ರ ನನ್ನಲ್ಲಿ ಹೇಳಿ
ಮೈಸೂರು: ಕೆಲವರಿಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡದಿದ್ದರೆ ನಿದ್ರೆ ಬರೋದಿಲ್ಲ. ಅದಕ್ಕೆ ಸುಮ್ಮನೆ ಎಲ್ಲದ್ದಕ್ಕೂ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರು ನೀರು ಬಿಡಿಸೋಕೆ ಆಗುತ್ತಾ? ಪಾಪ ಅವರೇ ಸೋತು ಮನೆಯಲ್ಲಿ ಕುಳಿತ್ತಿದ್ದಾರೆ. ಹೀಗಾಗಿ ಅವರೇನು ಮಾಡಲು ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಂಡ್ಯದಲ್ಲಿ ನೀರಿಗಾಗಿ ರೈತರ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಭಟನಾ ಸ್ಥಳಕ್ಕೆ ಮಂಡ್ಯ ಜೆಡಿಎಸ್ ಜನಪ್ರತಿನಿಧಿಗಳು ಹೋಗಿದ್ದನ್ನ ಸಮರ್ಥಿಸಿಕೊಂಡರು. ಇದೇ ವೇಳೆ ಪ್ರತಿಭಟನಾಕಾರರು ರಾಜಕೀಯ ಮಾಡಿದ್ರು ಎಂದು ಪರೋಕ್ಷವಾಗಿ ಟೀಕಿಸಿದ ಸಚಿವರು, ಸಮಸ್ಯೆ ಗೊತ್ತಿರುವವರ ಬಳಿ ಹೋಗಿ ಮಾತನಾಡಬಹುದು. ಆದರೆ ಸಮಸ್ಯೆ ಗೊತ್ತಿಲ್ಲದವರ ಬಳಿ ಏನ್ ಮಾತನಾಡೋದು? ನೀರು ಬಿಡುವುದು ನಮ್ಮ ಕೈಯಲ್ಲಿ ಇಲ್ಲ. ಮಂಡ್ಯವನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ. ನಮಗೆ ಹಾಸನವೂ ಒಂದೇ ಮಂಡ್ಯವು ಒಂದೇ ಎಂದು ಹೇಳಿದ್ದಾರೆ.
ಒಂದು ಹನಿ ಹೋದ್ರು ನೋಟಿಸ್: ನೀರಾವರಿ ಇಲಾಖೆ ಕಾರ್ಯದರ್ಶಿಗೂ ಗೊತ್ತಾಗದೆ ನಮ್ಮ ಡ್ಯಾಂಗಳಿಗೆ ತಮಿಳುನಾಡು ಅಧಿಕಾರಿಗಳು ಬಂದು ಹೋಗಿದ್ದಾರೆ. ಎಲ್ಲಾ ಡ್ಯಾಂಗಳ ಲೆಕ್ಕ ಬರೆದುಕೊಂಡು ಹೋಗಿದ್ದಾರೆ. ಒಂದು ಹನಿ ನೀರು ಹೊರಗೆ ಹೋದ್ರು ಎಲ್ಲರಿಗೂ ನೋಟಿಸ್ ಬರುತ್ತದೆ. ನಾನು ಕೂಡ ಹೇಮಾವತಿ ಜಲಾಶಯಕ್ಕೆ ಭೇಟಿ ಕೊಟ್ಟೆ. ಅಲ್ಲಿ 15 ದಿನಕ್ಕೆ ಆಗುವಷ್ಟು ನೀರಿದೆ ಅಷ್ಟೇ. ನಮ್ಮ ಡ್ಯಾಂಗಳಲ್ಲಿ ನೀರಿಲ್ಲ. ಇತ್ತೀಚೆಗೆ ಜಲಾಶಯಗಳಿಗೆ ಕೇಂದ್ರ ತಂಡ ಅಲ್ಲ ಅವರು ತಮಿಳುನಾಡಿನ ಅಧಿಕಾರಿಗಳು ಭೇಟಿ ಕೊಟ್ಟಿರೋದು ಎಂದು ತಿಳಿಸಿದ್ದಾರೆ.
ನಂಗ್ಯಾವ ಪವರ್ ಇಲ್ಲ: ನನಗೆ ಯಾವ ಅಧಿಕಾರವೂ ಇಲ್ಲ. ಯಾರಿಗೆ ಪವರ್ ಇದೆ ಎಂದು ಎಲ್ಲರಿಗೂ ಗೊತ್ತು. ನಾನಗಲಿ, ಜಿ.ಟಿ.ದೇವೇಗೌಡರಾಗಲಿ ಪವರ್ ಫುಲ್ ಅಲ್ಲ. ನಮಗ್ಯಾವ ಪವರ್ ಇದೆ. ನೀರಿನ ವಿಚಾರ, ಮತ್ತೊಂದು ವಿಚಾರ ನನ್ನ ಬಳಿ ಕೇಳಬೇಡಿ. ಅದಕ್ಕಾಗಿಯೇ ಜಲ ಸಂಪನ್ಮೂಲ ಸಚಿವರು, ನೀರಾವರಿ ಸಚಿವರು ಇದ್ದಾರೆ. ಆ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದರು.
ನಾನು ರೋಡ್ ಮಿನಿಸ್ಟರ್: ನಾನು ಲೋಕೋಪಯೋಗಿ ಸಚಿವ. ಹೀಗಾಗಿ ನನ್ನ ಬಳಿ ರೋಡ್ ಬಗ್ಗೆ ಮಾತ್ರ ಕೇಳಿ. ನೀರಿನ ವಿಚಾರ ಮತ್ತೊಂದು ವಿಚಾರ ನನ್ನ ಬಳಿ ಕೇಳಬೇಡಿ. ರೋಡಿನ ವಿಚಾರ ಇದ್ದರೆ ಮಾತ್ರ ಹೇಳಿ. ಬೇರೆ ವಿಚಾರ ನನ್ನ ಹತ್ತಿರ ಕೇಳಬೇಡಿ ಎಂದು ತಿಳಿಸಿದರು.
ಜೆಡಿಎಸ್ ಪಕ್ಷ ಪಾದಯಾತ್ರೆ ಮಾಡುವ ಬಗ್ಗೆ ನಂಗೆ ಗೊತ್ತಿಲ್ಲ. ಅದನ್ನೆಲ್ಲ ನೋಡಿಕೊಳ್ಳುವುದಕ್ಕೆ ಪಕ್ಷದ ಹೈಕಮಾಂಡ್ ಇದೆ. ಪಾದಯಾತ್ರೆ ವಿಚಾರ ನಂಗೆ ಗೊತ್ತಿಲ್ಲ ಎಂದು ನುಡಿದರು.