ಹುಬ್ಬಳ್ಳಿ: ಹೈದರಾಬಾದಿನಲ್ಲಿ ನಡೆದಿದ್ದ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದು ಸ್ವಾಗತಾರ್ಹ, ದಯವಿಟ್ಟು ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರ ಮೇಲೆ ಒತ್ತಡ ಹಾಕಬೇಡಿ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.
ವಿಡಿಯೋ ಮೂಲಕ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಅವರಿಗೆ ಶ್ರೀರಾಮ ಸೇನೆ ವತಿಯಿಂದ ಪ್ರಮೋದ್ ಮುತಾಲಿಕ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಅತ್ಯಾಚಾರಿಗಳ ಎನ್‍ಕೌಂಟರ್ ಮಾಡಿದ್ದು ಸ್ವಾಗತಾರ್ಹವಾದದ್ದು, ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ರೀತಿ ಎನ್‍ಕೌಂಟರ್ ಮಾಡಿ ಅತ್ಯಾಚಾರಿಗಳಿಗೆ ಪೊಲೀಸರು ಭಯ ಹುಟ್ಟುವಂತೆ ಮಾಡಿದ್ದಾರೆ. ಇದೊಂದು ಉತ್ತಮ ಹೆಜ್ಜೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ಹಲ್ಲೆ ಎಸಗಿದ್ದಕ್ಕೆ ಗುಂಡೇಟು – ಕನ್ನಡದಲ್ಲಿ ವಿವರಿಸಿದ ಸಜ್ಜನರ್
ಅತ್ಯಾಚಾರ ಮಾಡುವ ಕಾಮುಕರಿಗೆ ಕನಸಿನಲ್ಲಿಯೂ ಈ ಎನ್‍ಕೌಂಟರ್ ನೆನಪು ಬರಬೇಕು. ಇಂತಹ ಒಳ್ಳೆಯ ಕಾರ್ಯ ಮಾಡಿದ ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ
ದಯವಿಟ್ಟು ಈ ವಿಚಾರಕ್ಕೆ ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರ ಮೇಲೆ ಒತ್ತಡ ಹಾಕಬಾರದು. ಎನ್‍ಕೌಂಟರ್ ಅತ್ಯಾಚಾರಿಗಳಿಗೆ ನೀಡಿರುವ ತಕ್ಕ ಶಿಕ್ಷೆಯಾಗಿದೆ. ಹಾಗೆಯೇ ನ್ಯಾಯಾಲಯಗಳಲ್ಲಿ ದೀರ್ಘಕಾಲದವರೆಗೆ ಅತ್ಯಾಚಾರ ಪ್ರಕರಣಗಳ ವಿಚಾರಣೆ ನಡೆಸುವದರಿಂದಲೇ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ ಎನ್ನುವುದನ್ನು ನ್ಯಾಯಾಲಯ ಕೂಡ ಯೋಚಿಸಬೇಕು. ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡುವುದು ಯೋಗ್ಯ ಶಿಕ್ಷೆ ಎಂದು ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿಸಿದರು.