ಬೆಂಗಳೂರು: ಎಬಿವಿಪಿ (ABVP) ಕಾರ್ಯಕ್ರಮದಲ್ಲಿ ಗೃಹ ಸಚಿವ ಪರಮೇಶ್ವರ್ (Parameshwar) ಭಾಗಿಯಾಗಿದ್ದನ್ನು ರಾಜಕೀಯಗೊಳಿಸಬೇಡಿ ಎಂದು ಎಬಿವಿಪಿ ಸಂಘಟನೆ ಮನವಿ ಮಾಡಿಕೊಂಡಿದೆ.
ಈ ಬಗ್ಗೆ ವಿವಾದ ಉಂಟಾದ ಬೆನ್ನಲ್ಲೇ ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ: ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ: ಪರಮೇಶ್ವರ್
ಎಬಿವಿಪಿ ಸ್ಪಷ್ಟನೆ ಏನು?
ಕರ್ನಾಟಕದ ಕಡಲ ತೀರದ ರಾಣಿ ಅಬ್ಬಕ್ಕನ 500ನೇ ಜನ್ಮ ಜಯಂತಿ ಪ್ರಯುಕ್ತ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ಪೋರ್ಚುಗೀಸರ ವಿರುದ್ಧ ಹೋರಾಡಿದ ಈ ನೆಲದ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಿದ ಕೀರ್ತಿ ರಾಣಿ ಅಬ್ಬಕ್ಕಗೆ ಸಲ್ಲುತ್ತದೆ.
ವಸಾಹತುಶಾಹಿಗಳ ವಿರುದ್ಧದ ಹೋರಾಟಕ್ಕೆ ಮುನ್ನುಡಿ ಬರೆದ ರಾಣಿ ಅಬ್ಬಕ್ಕನನ್ನು ಸ್ಮರಿಸಿ, ಅವಳ ಹೋರಾಟದ ಐತಿಹಾಸಿಕ ಮಹತ್ವವನ್ನು ಸಾರುವುದು ಈ ರಥಯಾತ್ರೆಯ ಉದ್ದೇಶ. ಈ ರಥಯಾತ್ರೆಯೂ ದಿನಾಂಕ 2025ರ ಸೆ.9ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸಾಗುವಾಗ, ಅದೇ ಮಾರ್ಗದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ ಗೃಹ ಮಂತ್ರಿಗಳು ಪುಷ್ಪಾರ್ಚನೆ ಮಾಡಿ ರಥಯಾತ್ರೆಗೆ ಶುಭ ಹಾರೈಸಿ, ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಬೆನ್ನು ತಟ್ಟಿದ್ದಾರೆ.
ರಾಜ್ಯದ ಸಾಂವಿಧಾನಿಕ ಹುದ್ದೆಯಲ್ಲಿರುವ ಗೃಹ ಸಚಿವರ ಸದ್ಭಾವನೆಯನ್ನು ರಾಜಕೀಯಗೊಳಿಸುವ ಯಾವುದೇ ರೀತಿಯ ಪ್ರಯತ್ನಕ್ಕೆ ವಿದ್ಯಾರ್ಥಿ ಪರಿಷತ್ ವಿರೋಧ ವ್ಯಕ್ತಪಡಿಸುತ್ತದೆ. ವಿದ್ಯಾರ್ಥಿ ಪರಿಷತ್‌ನ ಈ ಕಾರ್ಯಕ್ರಮವು ಯಾವುದೇ ರಾಜಕೀಯ ಪಕ್ಷಕ್ಕೆ, ಜಾತಿ ಮತ, ಪಂಥಗಳಿಗೆ ಸೀಮಿತವಾದುದಲ್ಲ. ಈ ರಥಯಾತ್ರೆಯು ಭಾರತದ ವೀರ ಪರಂಪರೆಯ ಸ್ಮರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದಾಗಿರುತ್ತದೆ ಎಂಬುದನ್ನು ವಿದ್ಯಾರ್ಥಿ ಪರಿಷತ್ ಸ್ಪಷ್ಟಪಡಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಸಂಸ್ಕೃತಿ ಬಗ್ಗೆ ಜನರಿಗೆ ಗೊತ್ತಿದೆ – ಡಿಕೆಶಿ