ಬೆಂಗಳೂರು: ಒಂದು ಕಡೆ ದೆಹಲಿಯಲ್ಲಿ ಕಾಂಗ್ರೆಸ್ ಮೀಟಿಂಗ್ ನಡೆಯುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಬಿಜೆಪಿ ಸಭೆ ನಡೆಸುತ್ತಿದೆ. ಇಂದು 3 ಗಂಟೆಗೆ ಎಲ್ಲಾ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಬೇಕು. ಯಾಕಂದ್ರೆ ಒಂದು ಗುಡ್ ನ್ಯೂಸ್ ಹೇಳುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತುರ್ತು ಬುಲಾವ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರಮನೆ ಮೈದಾನದ ಸಿತಾರಾ ಹಾಲ್ ನಲ್ಲಿ ನಡೆದ ವಿಶೇಷ ಸಭೆಯಲ್ಲಿ ಬಿಎಸ್‍ವೈ ಅವರ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯ ರಾಜಕೀಯದ್ದು ಒಂದು ಇಂಪಾರ್ಟೆಂಟ್ ವಿಷಯ ಇದೆ. ಆ ವಿಷಯವನ್ನು ನಿಮಗೆ ಇಂದು ಹೇಳುತ್ತೇನೆ. 3 ಗಂಟೆಯ ಸಭೆಗೆ ಶಾಸಕರು ಮಿಸ್ ಆಗಬೇಡಿ ಅಂತ ಹೇಳುವ ಮೂಲಕ ಬಿಜೆಪಿಯ 104 ಶಾಸಕರೂ ಮಧ್ಯಾಹ್ನದ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ತಾಕೀತು ಮಾಡಿದ್ದಾರೆ. ಈ ಮೂಲಕ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Advertisement
Advertisement
ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಒಡಕು ಉಂಟಾಗಿದೆ. 37 ಸ್ಥಾನ ಇರುವ ಜೆಡಿಎಸ್, 79 ಸ್ಥಾನ ಇರುವ ಕಾಂಗ್ರೆಸ್ ಪಕ್ಷಗಳು ಅಧಿಕಾರ ನಡೆಸುತ್ತಿವೆ. 104 ಸ್ಥಾನದಲ್ಲಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೆಲಸ ಮಾಡ್ತಿದೆ. ಜನ ಹಿತವನ್ನು ಮರೆತು, ಅಭಿವೃದ್ಧಿ ಮರೆತು ಸರ್ಕಾರ ನಡೆಯುತ್ತಿದೆ. ಇದು ಕಮಿಷನ್ ಏಜೆಂಟ್ ಸರ್ಕಾರವಾಗಿದೆ ಅಂತ ಕಿಡಿಕಾರಿದ್ದಾರೆ.
Advertisement
ಕಾಂಗ್ರೆಸ್ – ಜೆಡಿಎಸ್ ಒಳಜಗಳದಿಂದ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಈ ಸರ್ಕಾರದಲ್ಲಿ ಕಮೀಷನ್ ಕೊಡದಿದ್ದರೆ ಯಾವುದೇ ಬಿಲ್ ಪಾಸ್ ಆಗಲ್ಲ. ಕರ್ನಾಟಕದಲ್ಲಿ 13 ಜಿಲ್ಲೆಗಳು ಬರ ಪೀಡಿತ ಅಂತ ಘೋಷಣೆ ಮಾಡಿದೆ. ರೈತರು ತಾವು ಬೆಳೆದ ಬೆಳೆಗಳು ಕೈ ಸೇರುವಾಗ ಮಳೆ ಕೈ ಕೊಟ್ಟಿದೆ. ಕೊಡಗಿನ ಅತಿವೃಷ್ಠಿ ಹಿನ್ನೆಲೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಮಂಗಳವಾರ ರಾಜ್ ನಾಥ್ ಸಿಂಗ್ ಅವರು ರಾಜ್ಯಕ್ಕೆ ಬಂದಾಗ ಅವರ ಬಳಿ ಮನವಿ ಮಾಡಿಕೊಂಡಿದ್ದೇನೆ. ಕೇಂದ್ರದ ನಿಯೋಗ ರಾಜ್ಯಕ್ಕೆ ಬರಬೇಕು ಎಂದು ಮನವಿ ಮಾಡಿದ್ದೇನೆ ಅಂದ್ರು.
Advertisement
ಡಿಕೆಶಿ ಚೆಸ್ ಗೇಮ್ ಬಗ್ಗೆ ಮಾತನಾಡಿದ್ದಾರೆ. ಹೇಗೆ ಪಾನ್ ಮೂವ್ ಮಾಡಬೇಕು ಅಂತಾ ಗೊತ್ತಿದೆ ಅಂತಾ ಡಿಕೆಶಿ ಹೇಳಿದ್ದಾರೆ. ಎದುರಾಳಿಗಳೇ ಇಲ್ಲದೆ ಹೇಗೆ ಚೆಸ್ ನಲ್ಲಿ ಪಾನ್ ಮೂವ್ ಮಾಡ್ತೀರಾ..? ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡೋದನ್ನ ಬಿಡಿ ಅಂತ ಸಚಿವ ಡಿಕೆಶಿಗೆ ಬಿಎಸ್‍ವೈ ಟಾಂಗ್ ನೀಡಿದರು.
ಕುಮಾರಸ್ವಾಮಿ ಆಪರೇಷನ್ ಕಮಲದ ಬಗ್ಗೆ ಮಾತನಾಡ್ತಾರೆ. ಬಿಜೆಪಿ ಶಾಸಕರನ್ನ ಕುಮಾರಸ್ವಾಮಿ ಸಂಪರ್ಕಿಸಿದ್ದಾರೆ. ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಅವರನ್ನು ಸಚಿವ ಸ್ಥಾನ ಕೊಡ್ತೀನಿ ಬನ್ನಿ ಅಂತಾ ಕರೆದಿದ್ದಾರೆ. ಹೀಗೆ ಹಲವು ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ನನ್ನ ಜತೆ 10 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಅಂತಾ ಎಚ್‍ಡಿಕೆ ಹೇಳಿದ್ದಾರೆ. ಆದ್ರೆ ಒಬ್ಬ ಮುಖ್ಯಮಂತ್ರಿಯಾಗಿ ಅವರು ಈ ರೀತಿ ಮಾತನಾಡೋದು ಶೋಭೆ ತರುವುದಿಲ್ಲ. ಇದೆಲ್ಲವನ್ನು ನೋಡ್ತಿದ್ರೆ ಸಮ್ಮಿಶ್ರ ಸರ್ಕಾರ ಎಷ್ಟು ಅಸ್ಥಿರವಾಗಿದೆ ಅನ್ನೋದು ಗೊತ್ತಾಗ್ತಿದೆ ಅಂತ ಅವರು ಹೇಳಿದ್ರು.
ಕುಮಾರಸ್ವಾಮಿ ಕಿಂಗ್ ಪಿನ್ ಬಗ್ಗೆ ಮಾತಾಡ್ತಾರೆ. ಆದರೆ ಕುಮಾರಸ್ವಾಮಿ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡ್ತಾರೆ. ಈ ಸರ್ಕಾರ ಹೆಚ್ಚು ದಿನ ಬಾಳುತ್ತೆ ಎಂದು ನನಗೆ ಅನಿಸೋದಿಲ್ಲ. ಕಾಂಗ್ರೆಸ್ ಶಾಸಕರೇ ಪಕ್ಷದಲ್ಲಿ ನಮಗೆ ಉಸಿರುಗಟ್ಟಿಸುವ ಪರಿಸ್ಥಿತಿ ಇದೆ ಎನ್ನುತ್ತಾರೆ. ಸರ್ಕಾರ ಬಿದ್ದ ಬಳಿಕ ನಾವೇನು ಮಾಡಬೇಕು ಎಂದು ಪ್ರಮುಖರೆಲ್ಲ ಕುಳಿತು ಚರ್ಚೆ ಮಾಡ್ತೇವೆ. ನಮಗಾರಿಗೂ ಈ ಸರ್ಕಾರ ಹೆಚ್ಚು ದಿನ ಬಾಳತ್ತೆ ಎಂದು ಅನಿಸೋದಿಲ್ಲ ಅಂತ ತಿಳಿಸಿದ್ರು.
ಕಾಂಗ್ರೆಸ್ – ಜೆಡಿಎಸ್ ಏನಾದ್ರೂ ಮಾಡಿಕೊಳ್ಳಲಿ. ನಾವು ಲೋಕಸಭೆಯಲ್ಲಿ 24 ಸ್ಥಾನವನ್ನು ಗೆಲ್ಲಬೇಕು. ನಮ್ಮ ಸಂಘಟನೆ ಬಲಗೊಳ್ಳಬೇಕು. ಲೋಕಸಭೆಗೆ ತಯಾರಿ ನಡೆಸಬೇಕು. 15 ದಿನಗಳ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡ್ತೇವೆ ಅಂತ ಅವರು ಎಚ್ಚರಿಕೆ ನೀಡಿದ್ರು.
ರಾಜ್ಯಮಟ್ಟದ ಬಿಜೆಪಿ ವಿಶೇಷ ಸಭೆಯಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಕೆ.ಎಸ್.ಈಶ್ವರಪ್ಪ, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಅರವಿಂದ್ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ರವಿಕುಮಾರ್, ಶ್ರೀರಾಮುಲು ಉಪಸ್ಥಿತಿತರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv