– ಕೆಲವು ಪ್ರಕರಣಗಳಿಂದ ಪೊಲೀಸರ ಬಗ್ಗೆ ನಿರ್ಣಯಿಸಬೇಡಿ
ಚೆನ್ನೈ: ಇತ್ತೀಚೆಗೆ ದೇವಾಲಯದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ ಅವರ ಲಾಕಪ್ ಡೆತ್ (Custodial Death) ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು (Tamil Nadu) ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶಂಕರ್ ಜಿವಾಲ್ ಕ್ಷಮೆಯಾಚಿಸಿದ್ದಾರೆ.
ಅಜಿತ್ ಸಾವಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆ ಶಂಕರ್ ಜಿವಾಲ್ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಕೆಲವು ಕಸ್ಟಡಿ ಹಿಂಸೆಯಂತಹ ಪ್ರಕರಣಗಳನ್ನು ಆಧರಿಸಿ ಇಡೀ ಪೊಲೀಸ್ (Police) ಪಡೆಯ ಬಗ್ಗೆ ಏನನ್ನೂ ನಿರ್ಣಯಿಸಬೇಡಿ. ಲಾಕಪ್ ಡೆತ್ ಪ್ರಕರಣದಲ್ಲಿ ನಾವು ಕ್ರಮಕೈಗೊಂಡಿದ್ದೇವೆ. ಇದೊಂದು ದುರಾದೃಷ್ಟ ಘಟನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Tamil Nadu Custodial Death | ಕೊಲೆಗಾರರು ಹೀಗೆ ದಾಳಿ ಮಾಡಲ್ಲ – ಹೈಕೋರ್ಟ್ ಛೀಮಾರಿ; ಐವರು ಪೊಲೀಸರು ಅರೆಸ್ಟ್
99.9% ರಷ್ಟು ಪೊಲೀಸ್ ಪಡೆಗಳು ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇಂತಹ ಘಟನೆಗಳು ಇಡೀ ಸಂಸ್ಥೆಯ ಪ್ರತಿಷ್ಠೆಗೆ ಕಳಂಕ ತರಬಾರದು. ನಾನು ಅಂಕಿಅಂಶಗಳ ಆಧಾರದ ಮೇಲೆ ಹೇಳುವುದಾದರೆ, ತಮಿಳುನಾಡು ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಏನಿದು ಪ್ರಕರಣ?
ಜೂ.27ರಂದು ತಿರುಪುವನಂ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ತಮ್ಮ ಕಾರಿನಿಂದ 10 ಗ್ರಾಂ. ಚಿನ್ನ ಕಾಣೆಯಾಗಿದೆ ಎಂದು ತಾಯಿ-ಮಗಳು ದೂರು ನೀಡಿದ್ದರು. ಪ್ರಕರಣದ ತನಿಖೆಗೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ, ದೇವಸ್ಥಾನ ಭದ್ರತಾ ಸಿಬ್ಬಂದಿ ಅಜಿತ್‍ನನ್ನು ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟಿದ್ದರು. ಬಾಯಿಗೆ ಖಾರದ ಪುಡಿ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಪೊಲೀಸರು ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ತೀವ್ರ ಹಲ್ಲೆಗೊಳಗಾಗಿದ್ದ ಅಜಿತ್ ಸಾವನ್ನಪ್ಪಿದ್ದರು.
ಈ ಬೆನ್ನಲ್ಲೇ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ತನಿಖೆಯಲ್ಲಿ ಹಿಂಸೆಯಿಂದಲೇ ಸಾವನ್ನಪ್ಪಿದ್ದಾರೆ ಎಂಬುದು ದೃಢಪಟ್ಟಿತ್ತು. ಈ ಸಂಬಂಧ ಐವರು ಪೊಲೀಸರನ್ನು ಬಂಧಿಸಲಾಗಿತ್ತು.
ಇದೆಲ್ಲ ಬೆಳವಣಿಗೆಯ ನಡುವೆ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ತನಿಖೆಯನ್ನು ಮುಂದುವರಿಸುವಂತೆ ಆದೇಶಿಸಿತ್ತು. ಅಲ್ಲದೇ ವಾರದೊಳಗೆ ತನಿಖಾ ಅಧಿಕಾರಿಯನ್ನು ನೇಮಿಸುವಂತೆ ಕೇಂದ್ರ ತನಿಖಾ ದಳದ (ಸಿಬಿಐ) ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಆಗಸ್ಟ್ 20 ರೊಳಗೆ ತನಿಖೆಯನ್ನು ಪೂರ್ಣಗೊಳಿಸಿ, ಅಂತಿಮ ವರದಿಯನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ: Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್