ದಾವಣಗೆರೆ: ನನ್ನ ಹೆಸರಿನಲ್ಲಿ ಯಾವುದೇ ಶುಗರ್ ಫ್ಯಾಕ್ಟರಿಗಳಿಲ್ಲ, ಹೀಗಾಗಿ ನಾನು ಹೇಗೆ ಬಾಕಿ ಉಳಿಸಿಕೊಳ್ಳಲಿ ಎಂದು ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಪ್ರಶ್ನಿಸಿದ್ದಾರೆ.
ನಗರದ ತರಕಾರಿ ಮಾರುಕಟ್ಟೆ ಮಳಿಗೆಗಳನ್ನು ಉದ್ಘಾಟನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಸರಲ್ಲಿ ಫ್ಯಾಕ್ಟರಿಗಳಿಲ್ಲ. ನನ್ನ ಮೂರು ಮಕ್ಕಳ ಹೆಸರಿನಲ್ಲಿ ಸಕ್ಕರೆ ಫ್ಯಾಕ್ಟರಿಗಳಿವೆ. ಅವುಗಳಿಂದ ರೈತರಿಗೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ರೈತರ ಸಮಸ್ಯೆಯನ್ನು ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿ ಬಗೆಹರಿಸಿದ್ದಾರೆ. ರೈತರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆಂದು ಹೇಳಿದರು.
ಇದೇ ವೇಳೆ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲರ ಫೋನುಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಹೀಗಾಗಿ ಅವು ಒಂದೊಂದು ಸಲ ಹೊರಗೆ ಬರುತ್ತವೆ. ನಮ್ಮ ಫೋನ್ ಗಳನ್ನು ಆದಾಯ ತೆರಿಗೆಯವರು ಮಾತ್ರ ಕದ್ದಾಲಿಕೆ ಮಾಡುತ್ತಾರೆ. ಇನ್ನು ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರ ಬಳಿಯೇ ಕೇಳಬೇಕು. ನನ್ನ ಬಳಿ ಅದಕ್ಕೇನು ಉತ್ತರವಿಲ್ಲವೆಂದು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಿಂದ ಬಲಿಷ್ಠ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ. ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv