ನವದೆಹಲಿ: ಎಸ್‍ಬಿಐ ಖಾತೆದಾರರು ತಮ್ಮ ಅಕೌಂಟ್‍ಗಳಲ್ಲಿ ಕನಿಷ್ಠ ಬಾಕಿಯನ್ನು ಹೊಂದಿಲ್ಲವಾದ್ರೆ ಏಪ್ರಿಲ್ 1ರ ನಂತರ ದಂಡ ಕಟ್ಟಬೇಕಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಏಪ್ರಿಲ್ 1ರಿಂದ ಮೆಟ್ರೊಪಾಲಿಟನ್ ಪ್ರದೇಶಗಳಲ್ಲಿನ ಎಸ್‍ಬಿಐ ಖಾತೆದಾರರು ತಮ್ಮ ಖಾತೆಯಲ್ಲಿ 5 ಸಾವಿರ ರೂ. ಕನಿಷ್ಠ ಬಾಕಿ ಹೊಂದಿರಬೇಕು. ಹಾಗೆ ನಗರ ಪ್ರದೇಶಗಳಲ್ಲಿ 3 ಸಾವಿರ ರೂ., ಅರೆ ನಗರ ಪ್ರದೇಶಗಳಲ್ಲಿ 2 ಸಾವಿರ ರೂ., ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ. ಮಿನಿಮಮ್ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯ ಎಂದು ಎಸ್‍ಬಿಐ ತಿಳಿಸಿದೆ.
Advertisement
ಒಂದು ವೇಳೆ ನಿಗದಿಪಡಿಸಿದಂತೆ ಕನಿಷ್ಠ ಬಾಕಿ ಹಣ ಖಾತೆಗಳಲ್ಲಿ ಉಳಿಸಿಲ್ಲವಾದ್ರೆ ಕನಿಷ್ಠ ಬಾಕಿಗೆ ಕೊರತೆ ಇರುವ ಮೊತ್ತಕ್ಕೆ ಅನುಗುಣವಾಗಿ ದಂಡ ಕಟ್ಟಬೇಕಾಗುತ್ತದೆ. ಅಂದ್ರೆ ಒಂದು ವೇಳೆ ಮೆಟ್ರೊಪಾಲಿಟನ್ ಪ್ರದೇಶದಲ್ಲಿನ ಖಾತೆಯಲ್ಲಿ ಕನಿಷ್ಠ ಬಾಕಿಗಿಂತ ಶೇ.75 ರಷ್ಟು ಹಣ ಕೊರತೆ ಇದ್ದರೆ 100 ರೂ. ದಂಡದ ಜೊತೆಗೆ ಸೇವಾ ತೆರಿಗೆಯನ್ನು ತೆರಬೇಕಾಗುತ್ತದೆ. ಶೇ.50 ರಿಂದ 75ರಷ್ಟು ಕೊರತೆ ಇದ್ದರೆ ಸೇವಾ ತೆರಿಗೆ ಜೊತೆಗೆ 75 ರೂ. ಶುಲ್ಕ ಕಟ್ಟಬೇಕು. ಹಾಗೇ ಶೇ. 50 ರಷ್ಟು ಕೊರತೆಯಿದ್ದರೆ ಸೇವಾ ತೆರಿಗೆ ಜೊತೆಗೆ 50 ರೂ. ದಂಡ ಕಟ್ಟಬೇಕಾಗುತ್ತದೆ ಎಂದು ಎಸ್‍ಬಿಐನ ಹೊಸ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Advertisement
ಅದರಂತೆ ಗ್ರಾಮೀಣ ಪ್ರದೇಶಗಳಲ್ಲಿನ ಖಾತೆದಾರರು ಕನಿಷ್ಠ ಬಾಕಿ ಹೊಂದಿಲ್ಲವಾದ್ರೆ 20 ರೂ. ನಿಂದ 50 ರೂ. ಜೊತೆಗೆ ಸೇವಾ ತೆರಿಗೆ ಕಟ್ಟಬೇಕು ಎಂದು ಎಸ್‍ಬಿಐ ಹೇಳಿದೆ. ಈ ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.