– ಪಕ್ಷದ ಕಾರ್ಯಕರ್ತನಿಂದ ಬೆದರಿಕೆ
ಮಂಗಳೂರು: ಸಂಸದ ನಳಿನ್ ಕುಮಾರ್ ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಕ್ಷದ ಕಾರ್ಯಕರ್ತನೊಬ್ಬ ಬೆದರಿಕೆ ಹಾಕಿದ್ದಾನೆ.
ಶಕ್ತಿಕೇಂದ್ರ ಕಾರ್ಯಕರ್ತರ ಸಮಾವೇಶಕ್ಕೆ ಬರುವಂತೆ ಕಾರ್ಯಕರ್ತನೊಬ್ಬ ಕರೆ ಮಾಡಿದಾಗ, ಈ ಮಾತು ಹೇಳಿದ್ದು ತುಳುವಿನಲ್ಲಿರುವ ಆಡಿಯೋ ಈಗ ಭಾರೀ ವೈರಲ್ ಆಗಿದೆ.
ಈ ಬಾರಿ ಯಾವುದೇ ಕಾರಣಕ್ಕೂ ನಳಿನ್ ಪರವಾಗಿ ಮತ ಯಾಚನೆಗೆ ಬರುವುದಿಲ್ಲ. ಗಲಾಟೆ, ಕೇಸ್ ಗಳಾದಾಗ ಹತ್ತಿರ ಸುಳಿಯದ ನಳಿನ್ ಯಾಕೆ ಬೇಕು. ಠಾಣೆಗೂ ಬರಲಾಗದವನು ಮತ್ತೆ ಆಯ್ಕೆಯಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಈ ಬಾರಿ ಟಿಕೆಟ್ ನೀಡಿದರೆ ಬಿಜೆಪಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ತೇನೆ ಅನ್ನುವ ಬೆದರಿಕೆ ಒಡ್ಡಿದ್ದಾನೆ.
ಸಂಭಾಷಣೆ ನಡೆಸಿರುವ ಇಬ್ಬರೂ, ಪುತ್ತೂರಿನ ಬಿಜೆಪಿ ಕಾರ್ಯಕರ್ತರಾಗಿದ್ದು ಈ ಬಾರಿ ನಳಿನ್ ಪರ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ಒಟ್ಟಿಗಿರುವ ಹುಡುಗರನ್ನೂ ಕಳಿಸಿಕೊಡಲ್ಲ ಎಂದು ಹೇಳುತ್ತಾರೆ.
ಸುಳ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಭಾಗದ ಬಿಜೆಪಿ ಕಾರ್ಯಕರ್ತರು ನಳಿನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಳಿನ್ ಬದಲಾವಣೆ ಬಯಸಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸರ್ವೆಯಲ್ಲೂ ನಳಿನ್ ಬಗ್ಗೆ ನೆಗೆಟಿವ್ ಬಂದಿದ್ದು ಈ ಬಾರಿ ಅಭ್ಯರ್ಥಿ ಬದಲಾಯಿಸಲು ಬಯಸಿದ್ದಾರೆ ಅನ್ನುವುದು ತಿಳಿದುಬಂದಿತ್ತು.