ಬೆಂಗಳೂರು: ಮೈತ್ರಿ ಸರ್ಕಾರದಿಂದ ದಿನಕ್ಕೊಂದು ನಿರ್ಬಂಧಗಳನ್ನು ಹೇರಲಾಗುತ್ತಿದೆ. ವಿಧಾನಸೌಧಕ್ಕೆ ಸಾರ್ವಜನಿಕರ ನಿಷೇಧ ಆಯ್ತು, ಮಾಧ್ಯಮಗಳ ನಿಷೇಧ ಆಯ್ತು ಇದೀಗ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ನೀಡಬೇಡಿ ಅಂತಾ ಆದೇಶ ಹೊರಡಿಸಲಾಗಿದೆ.
ಆದೇಶದಂತೆ ಇದೀಗ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಕೇಳಿದ್ರೂ ಅಧಿಕಾರಿಗಳು ಕೊಡುತ್ತಿಲ್ಲ. ಹೊಸ ಸರ್ಕಾರ ಬಂದಾಗಿನಿಂದ ಅಧಿಕಾರಿಗಳು ಯಾವ ಮಾಹಿತಿಯನ್ನು ನೀಡುತ್ತಿಲ್ಲ. ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಹೊಸ ಮೌಖಿಕ ಆದೇಶ ಹೊರಬೀಳುತ್ತಿದ್ದಂತೆಯೇ ಆರ್ ಟಿಐ ಹಾಕಲು ಬರುವವರನ್ನ ಕೂಡ ಪೋಲೀಸರು ವಿಧಾನಸೌಧಕ್ಕೆ ಬಿಡುತ್ತಿಲ್ಲ.
ಒಂದು ವೇಳೆ ಜಗಳ ಮಾಡಿ ವಿಧಾನಸೌಧದ ಒಳಗೆ ಹೋದ್ರೆ ಅಧಿಕಾರಿಗಳಿಂದ ನಿರುತ್ತರ ಕೇಳಿಬರುತ್ತಿದೆ. ಆರ್ ಟಿಐ ಅಡಿಯಲ್ಲಿ ಅರ್ಜಿ ಹಾಕಿದ್ರೆ ಮಾಹಿತಿನೇ ಇಲ್ಲ. ಅರ್ಜಿ ಹಾಕಿದ 30 ದಿನಗಳ ಒಳಗೆ ಮಾಹಿತಿ ಕೊಡಬೇಕು. ಆದ್ರೆ ಇದೀಗ ಅಧಿಕಾರಿಗಳು 3 ತಿಂಗಳು ಸಮಯಾವಕಾಶ ಕೇಳುತ್ತಿದ್ದಾರೆ. 3 ತಿಂಗಳ ನಂತರ ಹೋದ್ರೆ ಮೇಲ್ಮನವಿ ಸಲ್ಲಿಸಿ ಅನ್ನೋ ಹಿಂಬರಹ ಬರೆಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಸರ್ಕಾರಕ್ಕೆ ಮುಜುಗರ ತರಿಸೋ ಯಾವುದೇ ಮಾಹಿತಿ ಕೊಡದಂತೆ ನಿರ್ಬಂಧ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. ಸರ್ಕಾರಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಹರಸಾಹಸ ಪಡುತ್ತಿರೋದಾಗಿ ಆರ್ ಟಿಐ ಕಾರ್ಯಕರ್ತ ಬಿ.ಎಸ್.ಗೌಡ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv