ಇವಿಎಂ ಡೇಟಾ ಅಳಿಸಬೇಡಿ – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Public TV
1 Min Read
EVM

ನವದೆಹಲಿ: ಪರಿಶೀಲನೆಯ ಅಗತ್ಯವಿದ್ದಾಗ ವಿಚಾರಣೆಯ ಸಮಯದಲ್ಲಿ ಇವಿಎಂ (EVM) ಡೇಟಾವನ್ನು ಅಳಿಸದಂತೆ ಚುನಾವಣಾ ಆಯೋಗಕ್ಕೆ (Election Commission) ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದೆ.

ಮತ ಎಣಿಕೆ ಮುಗಿದ ನಂತರ ಯಂತ್ರಗಳಿಂದ ಡೇಟಾವನ್ನು ಅಳಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಈ ವೇಳೆ, ಇವಿಎಂನಿಂದ ಯಾವುದೇ ಡೇಟಾವನ್ನು ಅಳಿಸಬೇಡಿ ಅಥವಾ ಯಾವುದೇ ಡೇಟಾವನ್ನು ಮರುಲೋಡ್ ಮಾಡಬೇಡಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಹೇಳಿದೆ.

ಚುನಾವಣೆಯ ನಂತರ ಇವಿಎಂ ಮೆಮೊರಿ ಮತ್ತು ಮೈಕ್ರೋಕಂಟ್ರೋಲರ್ ಬರ್ನ್‌ ಮಾಡುವ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮಾಹಿತಿಯನ್ನು ಒದಗಿಸಬೇಕು ಎಂದು ಪೀಠ ಸೂಚಿಸಿದೆ.

ಸೋತ ಅಭ್ಯರ್ಥಿ ಸ್ಪಷ್ಟೀಕರಣವನ್ನು ಬಯಸಿದರೆ, ಇಂಜಿನಿಯರ್‌ಗಳು ಪರಿಶೀಲಿಸಿ ಯಾವುದೇ ಟ್ಯಾಂಪರಿಂಗ್ ನಡೆದಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಬಹುದು ಎಂದು ನ್ಯಾಯಾಲಯ ಹೇಳಿದು. ಕೋರ್ಟ್‌ ಮಾರ್ಚ್‌ 17ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಕಾಂಗ್ರೆಸ್ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಇವಿಎಂ ಘಟಕಗಳ ಬರ್ನ್‌ ಮಾಡಿದ ಮೆಮೊರಿ, ಮೈಕ್ರೋಕಂಟ್ರೋಲರ್‌ನ್ನು ಪರಿಶೀಲಿಸಲು ನೀತಿಯನ್ನು ರೂಪಿಸಲು ಆಯೋಗಕ್ಕೆ ನ್ಯಾಯಾಲಯವು ನಿರ್ದೇಶನ ನೀಡಬೇಕೆಂದು ಕೋರಲಾಗಿದೆ. ಇವಿಎಂನ್ನು ತಿರುಚಲಾಗಿಲ್ಲ ಎಂದು ಸಾಬೀತುಪಡಿಸಲು ಇವಿಎಂನ ಬರ್ನ್‌ ಮಾಡಿದ ಮೆಮೊರಿ ಮತ್ತು ಮೈಕ್ರೋಕಂಟ್ರೋಲರ್‌ನ್ನು ಎಂಜಿನಿಯರ್ ಪರಿಶೀಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Share This Article