ನನ್ನ ಮಾತನ್ನು ತಿರುಚಬೇಡಿ, ಯಾವುದೇ ಆಣೆ ಪ್ರಮಾಣ ಮಾಡಲು ನಾನು ಬಂದಿಲ್ಲ: ವಿಶ್ವನಾಥ್

Public TV
3 Min Read
VISHWANATH

– ಹುಣುಸೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ನಾನೇ ಅಭ್ಯರ್ಥಿ
– ನಾನು ಕಾನೂನು ಹೋರಾಟ ಮಾಡುತ್ತೇನೆ
– ನನಗೆ ನೋವಾಗಿದೆ, ಹೊಟ್ಟೆ ಉರಿಯುತ್ತೆ

ಮೈಸೂರು: ನನ್ನ ಮಾತನ್ನು ತಿರುಚಬೇಡಿ, ಮೊದಲೇ ನಾನು ಸ್ಪಷ್ಟನೆ ಕೊಟ್ಟಿದ್ದೇನೆ. ನಾನು ಇಲ್ಲಿ ಯಾವುದೇ ಆಣೆ ಪ್ರಮಾಣ ಮಾಡಲು ಬಂದವನಲ್ಲ ಎಂದು ಎಚ್. ವಿಶ್ವನಾಥ್ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮಾತನ್ನು ತಿರುಚಬೇಡಿ, ಮೂರು ದಿನಗಳಿಂದಲೂ ನಾನು ಮಾಧ್ಯಮಕ್ಕೆ ಸ್ಪಷ್ಟನೆ ಕೊಡುತ್ತಿದ್ದೇನೆ. ನನ್ನ ಸವಾಲು ಇಷ್ಟೇ ಸದನದಲ್ಲಿ ರಾಜೀನಾಮೆ ಕೊಟ್ಟಿರುವ ಶಾಸಕ ಸಾರಾ ಮಹೇಶ್ ಅವರು ಗುರುತರವಾದಂತಹ ಆರೋಪ ಮಾಡಿದ್ದಾರೆ. ನನ್ನನ್ನು 25 ಕೋಟಿ ರೂ. ಕೊಟ್ಟಿ ಕೊಂಡುಕೊಂಡಿದ್ದಾರೆ ಎಂದಿದ್ದಾರೆ. ಕೊಂಡುಕೊಂಡವರನ್ನು ಕರೆದುಕೊಂಡು ಬನ್ನಿ ಎನ್ನುವುದಷ್ಟೇ ವಿಚಾರ. ಇದರಲ್ಲಿ ಬೇರೆ ವಿಚಾರ ಇಲ್ಲ. ಬೇರೆ ವಿಚಾರವನ್ನು ನೀವು ಕೇಳಲುಬಾರದು, ನಾನು ಹೇಳಲುಬಾರದು. ನಾನು ಇಲ್ಲಿ ಯಾವುದೇ ಆಣೆ ಪ್ರಮಾಣ ಮಾಡಲು ಬಂದವನಲ್ಲ. ನನ್ನನ್ನು ಕೊಂಡುಕೊಂಡಿರುವ ಭೂಪನನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ಹರಿಹಾಯ್ದರು.

VISHWANATH 2

ಸುಮ್ಮಸುಮ್ಮನೆ ಯಾಕೆ ಆಣೆ ಮಾಡಲಿ? ಸಾರಾ ಮಹೇಶ್ ಸಾವಿರ ಕೇಳುತ್ತಾನೆ. ಅದಕ್ಕೆ ನಾನು ಕೂತುಕೊಂಡು ಆಣೆ ಮಾಡಲಾ? ನನ್ನ ವಯಸ್ಸೇನು? ಸುಮ್ಮನ್ನಿರಿ, ನೀವು ಎಲ್ಲವನ್ನು ತಿರುಚಿ ಹಾಳು ಮಾಡುತ್ತಿದ್ದೀರ. ನಾನು ಬಂದಿರೋದು ಇಷ್ಟೇ ಸ್ಪಷ್ಟ, ಅವರು ಬಂದು ಹೌದಪ್ಪ ವಿಶ್ವನಾಥ್ ನನ್ನ ಬಳಿ 25 ಕೋಟಿ ತೆಗೆದುಕೊಂಡಿದ್ದಾನೆ. ಬಾರಪ್ಪ ಅಲ್ಲಿ ಪ್ರಮಾಣ ಮಾಡಿ ಎಂದರೆ ಮಾಡುತ್ತೇನೆ. ಅದುಬಿಟ್ಟರೆ ಸುಮ್ಮನೆ ಯಾಕೆ ಮಾಡಲಿ? ನಾಳೆ ನೀವು ಕರೆಯುತ್ತೀರ ಬರಲೇ? 9 ಗಂಟೆ ತನಕ ಸಮಯ ಕೊಟ್ಟಿದ್ದೇವೆ. ಇಲ್ಲಿಯವರೆಗೂ ಕಾಯುತ್ತೇನೆ. ಅವರು ಬರಲಿಲ್ಲ ಎಂದರೆ ವಾಪಸ್ ಹೋಗುತ್ತೇವೆ. ಆಗ ಮಹೇಶ್ ಅವರ ಆರೋಪ ಸುಳ್ಳೆಂದು ಎಲ್ಲರಿಗೂ ಗೊತ್ತಾಗುತ್ತೆ ಎಂದು ವಿಶ್ವನಾಥ್ ಗುಡುಗಿದರು.

SARA MAHESH

ನನ್ನ ಮೇಲೆ ಆರೋಪ ಮಾಡಿರುವುದು ಅಪ್ಪಟ ಸುಳ್ಳು ಎಂದು ಸಾಬೀತಾಗುತ್ತದೆ. ಯಾವತರ ಸುಳ್ಳು ಎಂದರೆ ಮೊನ್ನೆ ಅವರು ಶಾಸನಸಭೆಗೆ ಹುಸಿ ರಾಜೀನಾಮೆ ಪತ್ರ ಕಳುಹಿಸಿ, ಮಾಧ್ಯಮದ ಮುಂದೆ ರಾಜೀನಾಮೆ ಕೊಟ್ಟಿದ್ದೇನೆ ಎಂದರಲ್ಲ, ಅದೇ ರೀತಿ ಇದು ಕೂಡ ಸುಳ್ಳು ಎಂದು ಟೀಕಿಸಿದರು. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ. ಈಗಾಗಲೇ ಅವರು ಸದನದಲ್ಲಿ ಆರೋಪ ಮಾಡಿರುವ ಸಿಡಿ ತೆಗೆದುಕೊಂಡಿದ್ದೇನೆ, ನಾನು ಹೈಕೋರ್ಟ್ ಗೆ ಹೋಗುತ್ತೇನೆ ಎಂದರು.

VISHWANATH 3

ಈಗ ನಾನು ಇಬ್ಬರಿಗಾಗಿ ಕಾಯುತ್ತಿದ್ದೇನೆ. ಒಬ್ಬರು ಸಾರಾ ಮಹೇಶ್, ಇನ್ನೊಬ್ಬರು ನನ್ನನ್ನು ಕೊಂಡುಕೊಂಡ ಭೂಪನಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು. ಬಳಿಕ ಅವರು ಹೇಳುವುದ್ದಕ್ಕೆಲ್ಲಾ ಉತ್ತರ ಕೊಡೋಕೆ ಏನು ಅಂದುಕೊಂಡಿದ್ದಾರೆ? ರಾಜಕೀಯದಲ್ಲಿ ನನ್ನ ಕೊಡುಗೆ ಅನುಭವೇನು ಎಂದು ಗೊತ್ತಿದ್ದರೂ ಸುಮ್ಮನೆ ಏನೇನೋ ಕೇಳುತ್ತಿರಲ್ಲ ಎಂದು ಸಿಟ್ಟಾದರು. ನಂತರ ಸಾರಾ ಮಹೇಶ್ ಅವರು ಒಬ್ಬರೇ ಬಂದಿದ್ದಾರೆ ಎಂದು ಮಾಧ್ಯಮದವರು ಹೇಳಿದಾಗ, ಒಬ್ಬರೇ ಬಂದಿದ್ದಾರಾ? ನನ್ನನ್ನು ಕೊಂಡುಕೊಂಡವರು ಬಂದಿಲ್ಲವಾ? ಹಾಗಾದರೆ ಅವರ ಆರೋಪ ಸುಳ್ಳು ಆಪಾಧನೆ. ಹೀಗಾಗಿ ತಾಯಿ ಹತ್ತಿರ ಬಾ ಎಂದು ನಗುತ್ತಾ ವ್ಯಂಗ್ಯವಾಡಿದರು.

VISHWANATH 1

ಹಾಗೆಯೇ ಈ ಬಗ್ಗೆ ಜನ ಏನಾದರೂ ತಿಳಿದುಕೊಳ್ಳಲಿ. ನನಗೆ ನೋವಾಗಿದೆ, ಇದೇನು ಹುಡುಗಾಟಿಕೆಯೇ? ಹಾದಿ, ಬೀದಿಯಲ್ಲಿ ಹೇಳಿರುವ ವಿಚಾರನಾ? ಸಾರ್ವಭೌಮ ಸದನದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ನನಗೆ ಹೊಟ್ಟೆ ಉರಿಯುತ್ತೆ, 40 ವರ್ಷಗಳ ಕಾಲ ಸುದೀರ್ಘವಾಗಿ, ಪ್ರಾಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ನಿಮ್ಮ ಕ್ಷೇತ್ರದಲ್ಲಿ ಯಾರೂ ಅಭ್ಯರ್ಥಿಯಿಲ್ಲ. ನೀವು ನಿಮ್ಮ ಟಿಕೆಟ್ ಮಾರಿಕೊಂಡಿದ್ದೀರಾ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಹುಣಸೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *