ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಕರ್ನಾಟಕ ವಸತಿ ಶಾಲಾ-ಕಾಲೇಜುಗಳಲ್ಲಿ (Residential School and Colleges) ಇನ್ನು ಮುಂದೆ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡದಂತೆ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಸೂಚನೆ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಯಾವುದೇ ಧರ್ಮದ ಧಾರ್ಮಿಕ ಹಬ್ಬಗಳನ್ನ ಇನ್ನು ಮುಂದೆ ವಸತಿ ಶಾಲಾ-ಕಾಲೇಜುಗಳಲ್ಲಿ ಆಚರಣೆ ಮಾಡದಂತೆ ಸುತ್ತೋಲೆ ಹೊರಡಿಸಿದೆ.
ಯುಗಾದಿ, ರಂಜಾನ್, ಕ್ರಿಸ್ಮಸ್, ಸಂಕ್ರಾಂತಿ, ಈದ್ ಮಿಲಾದ್ ಸೇರಿ ಯಾವುದೇ ಧರ್ಮದ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡಬಾರದು. ಕೇವಲ ರಾಷ್ಟ್ರೀಯ ಹಬ್ಬಗಳು, ನಾಡಹಬ್ಬ ಮತ್ತು ಆಯ್ದ ಮಹಾ ಪುರುಷರು ಜಯಂತಿ ಸೇರಿ 10 ಆಚರಣೆಗಳನ್ನ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಭರತ್ ಶೆಟ್ಟಿ ವಿರುದ್ಧ ಕೇಸ್ – ಇನ್ಸ್‌ಪೆಕ್ಟರ್ ಫೋನ್‌ಕಾಲ್ ಡಿಟೇಲ್ಸ್ ಚೆಕ್ ಮಾಡಿ: ಸದನದಲ್ಲಿ ಅಶೋಕ್ ಆಗ್ರಹ
ಆದೇಶದ ಪ್ರಕಾರ, ಗಣರಾಜ್ಯೋತ್ಸವ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸರ ಜಯಂತಿ, ಬಸವ ಜಯಂತಿ, ಸಂವಿಧಾನ ದಿನಾಚರಣೆ ಹಾಗೂ ಯೋಗ ದಿನಾಚರಣೆ ಮಾತ್ರ ಆಚರಣೆ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ನಿಯಮ ಮೀರಿ ಧಾರ್ಮಿಕ ಹಬ್ಬಗಳು ಆಚರಣೆ ಮಾಡಿದರೆ ಶಾಲಾ-ಕಾಲೇಜುಗಳ ಮುಖ್ಯಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳೋದಾಗಿ ಆದೇಶದಲ್ಲಿ ತಿಳಿಸಲಾಗಿದೆ.