ಮೈಸೂರು: ಮುಳುಗಡೆಯಾದ ಪ್ರದೇಶದಲ್ಲೇ ಮತ್ತೆ ಮನೆ ನಿರ್ಮಾಣ ಮಾಡಿದರೆ ಏನೂ ಪ್ರಯೋಜನವಿಲ್ಲ. ಬೇರೆ ಜಾಗ ಗುರುತಿಸಿ ಮನೆ ನಿರ್ಮಾಣ ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಬಂದು ಮುಳುಗಡೆಯಾದ ಜಾಗದಲ್ಲೇ ಹೊಸ ಮನೆ ನಿರ್ಮಿಸಲು ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪದೇ ಪದೇ ಮುಳುಗಡೆಯಾದ ಜಾಗದಲ್ಲಿ ಮನೆ ನಿರ್ಮಿಸಿದರೆ ಏನೂ ಪ್ರಯೋಜನವಿಲ್ಲ. ಈ ಕುರಿತು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ತಕ್ಷಣವೇ ಬೇರೆ ಜಾಗ ಗುರುತಿಸಿ ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
Advertisement
Advertisement
ಕಾಂಗ್ರೆಸ್‍ನಿಂದ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಸರ್ಕಾರದ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ಹೇಗೆ ನಿಭಾಯಿಸಿದ್ದರು ಎಂಬುದು ಜನರಿಗೆ ಗೊತ್ತಿದೆ. ಅದೆಲ್ಲಾ ತೆರೆದ ಪುಸ್ತಕ. ಎಲ್ಲವನ್ನೂ ಈಗ ಬಿಡಿಸಿ ಹೇಳಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಸಂತ್ರಸ್ತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ಪ್ರತಿಭಟನೆ ಮಾಡುವುದು ಅವರ ಕೆಲಸ ಮಾಡಲಿ. ದಸರಾ ಮುಗಿದ ಮೇಲೆ ಯಾವ ಯೋಜನೆಯಲ್ಲಿ ಹಿಂದಿನ ಸರ್ಕಾರದಲ್ಲಿ ಏನಾಗಿತ್ತು, ಈಗ ಏನಾಗಿದೆ ಎಂಬುದರ ಕುರಿತು ವಿವರಿಸುತ್ತೇನೆ ಎಂದು ಪ್ರತಿಭಟನೆ ಕುರಿತು ಟಾಂಗ್ ನೀಡಿದರು.
Advertisement
Advertisement
ಅಕ್ಟೋಬರ್ 2ಕ್ಕೆ ಏರ್ ಶೋ ದಿನಾಂಕ ನಿಗದಿಯಾಗಿದ್ದು, ಯಾವ ಮಾದರಿಯಲ್ಲಿ ಏರ್ ಶೋ ನಡೆಯಲಿದೆ ಎಂಬುದು ಇನ್ನು ಅಂತಿಮವಾಗಿಲ್ಲ. ಈ ಕುರಿತು ಚರ್ಚಿಸಲು ರಕ್ಷಣಾ ಸಚಿವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಸಂಪೂರ್ಣ ಏರ್ ಶೋ ಪ್ಯಾಕೇಜ್ ನೀಡುವಂತೆ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೆ ಅವರಿಂದ ಇನ್ನೂ ಉತ್ತರ ಬಂದಿಲ್ಲ. ಈ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.