ಮಂಗಳೂರು: ಕರಾವಳಿ ಜನತೆ ಸೌಹಾರ್ದತೆಯಿಂದ ಬದುಕಬೇಕು. ಕ್ಷುಲ್ಲಕ ವಿಚಾರದಲ್ಲಿ ದ್ವೇಷ ಸಾಧಿಸಿ ಅಮಾಯಕರನ್ನು ಬಲಿ ಕೊಡಬೇಡಿ. ನಾನು ಕರಾವಳಿ ಭಾಗದಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಪತ್ನಿ ಅನಿತಾ ಅವರೊಂದಿಗೆ ಇಂದು ಎಚ್‍ಡಿಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಿದರು.
Advertisement
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾವೋದ್ವೇಗದ ವಿಚಾರಕ್ಕೆ ಒತ್ತು ಕೊಟ್ಟು ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ. ನಾನು ಕರಾವಳಿ ಭಾಗದಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಇಲ್ಲಿನ ಯುವಕರ ಸಹಕಾರ ಬೇಕು. ಏನೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Advertisement
ಐದು ವರ್ಷ ಸುಭದ್ರ ಸರ್ಕಾರ ನಡೆಸಲು ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಹಿರಿಯರನ್ನು ಭೇಟಿ ಮಾಡುತ್ತಿರುವೆ. ನಾವು ಕಾಂಗ್ರೆಸ್ ಜತೆ ಸರ್ಕಾರ ರಚನೆ ಮಾಡುತ್ತಿರವುದನ್ನು ಅಪವಿತ್ರ ಮೈತ್ರಿ ಎಂದು ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಇಲ್ಲಿ ಪವಿತ್ರ ಅಪವಿತ್ರ ಮಾತು ಬರುವುದಿಲ್ಲ. ಶಾಸಕರ ಸಂಖ್ಯಾಬಲ ಇದ್ದರೆ ಮಾತ್ರ ಸರ್ಕಾರ ಉಳಿಯುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.
Advertisement
ನಮ್ಮ ಕುಟುಂಬ ದೇವರ ಮೇಲೆ ನಂಬಿಕೆ ಇಟ್ಟಿದ್ದು, ದೇವರ ಅನುಗ್ರಹದಿಂದಲೇ ರಾಜ್ಯದ ಜವಾಬ್ದಾರಿ ಸಿಕ್ಕಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ನೀಡಿ ಆರ್ಥಿಕ ಪರಿಸ್ಥಿತಿ ಏರಿಕೆಯಾಗಲಿ ಎಂದು ದೇವರಲ್ಲಿ ಪಾರ್ಥನೆ ಸಲ್ಲಿಸಿರುವೆ ಎಂದು ಕುಮಾರಸ್ವಾಮಿ ಹೇಳಿದರು.