ರಷ್ಯಾದಿಂದ ತೈಲ ಖರೀದಿಸೋ ದೇಶಗಳ ಮೇಲೆ 500% ಸುಂಕ – ಭಾರತ, ಚೀನಾಗೆ ಟ್ರಂಪ್‌ ಶಾಕ್‌?

Public TV
1 Min Read
donald trump

ವಾಷಿಂಗ್ಟನ್‌: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ (Tariff) ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಗಂಭೀರವಾಗಿ ಪರಿಗಣಿಸಿದ್ದಾರೆ.

ಒಂದು ವೇಳೆ ಇದನ್ನು ಜಾರಿಗೊಳಿಸಿದರೆ, ಭಾರತ ಮತ್ತು ಚೀನಾದಂತಹ ಪ್ರಮುಖ ಆಮದುದಾರರನ್ನು ನೇರವಾಗಿ ಟಾರ್ಗೆಟ್‌ ಮಾಡಿದಂತಾಗುತ್ತದೆ. ರಷ್ಯಾದ ಇಂಧನ ಆದಾಯವನ್ನು ಕುಂಠಿತಗೊಳಿಸುವುದು ಮತ್ತು ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಒತ್ತಡ ಹೇರುವ ಉದ್ದೇಶ ಇದಾಗಿದೆ. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್‌

narendra modi xi jinping

ಸೆನೆಟರ್ ಲಿಂಡ್ಸೆ ಗ್ರಹಾಂ ಅವರಂತಹ ಪ್ರಭಾವಿ ವ್ಯಕ್ತಿಗಳು ಈ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. ‘ನೀವು ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕದಲ್ಲಿರುವ ನಿಮ್ಮ ಸರಕುಗಳಿಗೆ 500% ಸುಂಕ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು.

ಒಂದು ವೇಳೆ ಈ ನಿರ್ಣಯ ಅಂಗೀಕಾರವಾದರೆ, ಜಾಗತಿಕ ನಿರ್ಬಂಧಗಳ ಸಮಯದಲ್ಲಿ ರಷ್ಯಾದ ತೈಲ ಮತ್ತು ಅನಿಲದ ಆಮದನ್ನು ಹೆಚ್ಚಿಸಿರುವ ಭಾರತ ಮತ್ತು ಚೀನಾದಂತಹ ದೇಶಗಳು, ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ತಮ್ಮ ಉತ್ಪನ್ನಗಳ ಮೇಲೆ 500% ವರೆಗಿನ ಅಭೂತಪೂರ್ವ ಸುಂಕವನ್ನು ಎದುರಿಸಬೇಕಾಗುತ್ತದೆ. ಈ ಕ್ರಮವು ವ್ಯಾಪಾರ ಸಂಬಂಧಗಳಲ್ಲಿ, ವಿಶೇಷವಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರ ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?

ಈಚೆಗೆ 14 ದೇಶಗಳ ಮೇಲೆ ಹೊಸ ಸುಂಕ ವಿಧಿಸಿ ಟ್ರಂಪ್‌ ಆದೇಶ ಹೊರಡಿಸಿದ್ದರು. ರಷ್ಯಾದ ಇಂಧನ ಆಮದುದಾರರ ಮೇಲಿನ 500% ತೆರಿಗೆ ಸೇರಿದಂತೆ ಹೊಸ ಸುಂಕಗಳು 2025ರ ಆಗಸ್ಟ್‌ 1ರಿಂದ ಜಾರಿಗೆ ಬರಲಿವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

Share This Article