ಭಾರತದ ಮೇಲೆ ಅಮೆರಿಕ 25% ಟ್ಯಾರಿಫ್‌ – ‘ಸ್ವದೇಶಿ’ ವಸ್ತು ಖರೀದಿಸಿ: ಮೋದಿ ಕರೆ

Public TV
2 Min Read
narendra modi

ನವದೆಹಲಿ: ಭಾರತೀಯ ರಫ್ತಿನ ಮೇಲೆ ಅಮೆರಿಕ 25% ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ (PM Modi) ಅವರು ಸ್ವದೇಶಿ ಉತ್ಪನ್ನಗಳ ಮಂತ್ರ ಜಪಿಸಿದ್ದಾರೆ.

ಶನಿವಾರ ತಮ್ಮ ಕ್ಷೇತ್ರ ವಾರಣಾಸಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ತನ್ನ ಆರ್ಥಿಕ ಆದ್ಯತೆಗಳ ಮೇಲೆ ಕೇಂದ್ರೀಕರಿಸಬೇಕು. ಪ್ರತಿಯೊಬ್ಬ ನಾಗರಿಕನೂ ‘ಸ್ವದೇಶಿ’ (Swadeshi) ಖರೀದಿಸಲು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ – ಡೊನಾಲ್ಡ್‌ ಟ್ರಂಪ್‌

narendra modi trump

ಪ್ರಸ್ತುತ, ವಿಶ್ವ ಆರ್ಥಿಕತೆಯು ಅನೇಕ ಏರಿಳಿತಗಳನ್ನು ಎದುರಿಸುತ್ತಿದೆ. ಅನಿಶ್ಚಿತತೆಯ ವಾತಾವರಣವಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಂದು ದೇಶವೂ ತನ್ನದೇ ಆದ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಆದ್ದರಿಂದ, ಅದರ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕು. ನಮ್ಮ ರೈತರು, ನಮ್ಮ ಕೈಗಾರಿಕೆಗಳು, ನಮ್ಮ ಯುವಜನರಿಗೆ ಉದ್ಯೋಗ, ಅವರ ಹಿತಾಸಕ್ತಿಗಳು.. ಇವೆಲ್ಲವೂ ನಮಗೆ ಅತ್ಯಂತ ಮುಖ್ಯ. ಸರ್ಕಾರ ಈ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ದೇಶದ ನಾಗರಿಕರಾಗಿ, ನಮಗೂ ಕೆಲವು ಜವಾಬ್ದಾರಿಗಳಿವೆ. ಇದು ಮೋದಿ ಮಾತ್ರವಲ್ಲ, ಎಲ್ಲರೂ ಹೇಳಲೇಬೇಕಾದ ವಿಷಯ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಬಯಸುವ ಯಾರಾದರೂ, ಯಾವುದೇ ರಾಜಕೀಯ ಪಕ್ಷ, ಯಾವುದೇ ನಾಯಕರು, ದೇಶದ ಹಿತಾಸಕ್ತಿಯಲ್ಲಿ ಮಾತನಾಡಬೇಕು. ‘ಸ್ವದೇಶಿ’ ಖರೀದಿಸಲು ನಿರ್ಧರಿಸಬೇಕೆಂದು ಜನರನ್ನು ಉತ್ತೇಜಿಸಬೇಕು. ಒಬ್ಬ ಭಾರತೀಯನು ಬೆವರು ಸುರಿಸಿ ತಯಾರಿಸುವ ವಸ್ತುಗಳನ್ನು ನಾವು ಖರೀದಿಸಲಿದ್ದೇವೆ ಎಂದು ಸಂಕಲ್ಪ ಮಾಡಬೇಕು. ನಾವು ‘ಸ್ಥಳೀಯರಿಗೆ ಧ್ವನಿ’ ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್‌

‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜನರು ಖರೀದಿಸುವ ಎಲ್ಲಾ ಹೊಸ ವಸ್ತುಗಳು ‘ಸ್ವದೇಶಿ’ ಎಂದು ಸಂಕಲ್ಪ ಮಾಡಬೇಕೆಂದು ಮೋದಿ ಕರೆ ಕೊಟ್ಟಿದ್ದಾರೆ. ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವುದರಿಂದ ಭಾರತೀಯ ರಫ್ತಿನ ಮೇಲೆ ಶೇ.25 ರಷ್ಟು ಸುಂಕ (Tariff) ಮತ್ತು ಅನಿರ್ದಿಷ್ಟ ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಹೇಳಿದ್ದಾರೆ.

Share This Article