ನವದೆಹಲಿ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 36 ಗಂಟೆಗಳ ಐತಿಹಾಸಿಕ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿ ಎರಡೂ ದೇಶಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಟ್ರಂಪ್ ಸ್ವಾಗತಿಸಲು ಮೋದಿ ಎಲ್ಲ ರೀತಿಯ ಸಿದ್ಧತೆ ನಡೆಸಿದ್ದಾರೆ. ಇನ್ನೇನು ಕಲವೇ ಹೊತ್ತಲ್ಲಿ ಟ್ರಂಪ್ ಗಾಂಧಿ ನಾಡಿಗೆ ಆಗಮಿಸಲಿದ್ದಾರೆ.
ಇಂದು ಬೆಳಗ್ಗೆ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಅಧ್ಯಕ್ಷರ ಏರ್‍ಫೋರ್ಸ್ ಒನ್ ವಿಮಾನ ಬಂದಿಳಿಯಲಿದೆ. ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಮತ್ತು ಅಳಿಯ ಜ್ಯಾರೆಡ್ ಕುಶ್ನರ್ ಹಾಗೂ ಉನ್ನತ ಮಟ್ಟದ ರಾಜತಾಂತ್ರಿಕ ನಿಯೋಗದೊಂದಿಗೆ ಆಗಮಿಸುತ್ತಿರುವ ಟ್ರಂಪ್ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಬರಮಾಡಿಕೊಳ್ಳಲಿದ್ದಾರೆ.
Advertisement
Advertisement
ಏರ್‍ಪೋರ್ಟ್‍ನಿಂದ ಮೋದಿ ಮತ್ತು ಟ್ರಂಪ್ 22 ಕಿ.ಮೀ. ರೋಡ್ ಶೋ ಮೂಲಕ ಮೊಟೆರಾ ಸ್ಟೇಡಿಯಂಗೆ ಸಾಗಲಿದ್ದಾರೆ. ಸ್ವಾಗತ ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ಅದ್ಧೂರಿ ಅಲಂಕಾರ ಮಾಡಲಾಗಿದ್ದು, ಇಕ್ಕೆಲಗಳಲ್ಲಿ ಜಮಾಯಿಸಲಿರುವ ಲಕ್ಷಾಂತರ ಜನ ದೊಡ್ಡಣ್ಣನಿಗೆ ಜೈಕಾರ ಕೂಗಲಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕಾಗಿ ಭರ್ಜರಿಯಾಗಿಯೇ ಸಿದ್ಧತೆ ನಡೆಸಲಾಗಿದೆ.
Advertisement
ಮಹಾತ್ಮನ ಆತ್ಮಕಥೆಯೇ ಉಡುಗೊರೆ
ಮಧ್ಯಾಹ್ನ 12.15ಕ್ಕೆ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮಕ್ಕೆ ಟ್ರಂಪ್ ಭೇಟಿ ನೀಡಲಿದ್ದು, ಅಲ್ಲಿ ಅರ್ಧಗಂಟೆ ಕಾಲ ಕಳೆಯಲಿದ್ದಾರೆ. ಈ ವೇಳೆ ಮಹಾತ್ಮನ ಆತ್ಮಕಥೆ ಮತ್ತು ಫೋಟೋವನ್ನು ಉಡುಗೊರೆಯಾಗಿ ನೀಡಲಾಗುತ್ತೆ.
Advertisement
`ನಮಸ್ತೆ ಟ್ರಂಪ್’ ಕಾರ್ಯಕ್ರಮ
ರೋಡ್ ಶೋ ಬಳಿಕ ವಿಶ್ವದಲ್ಲೇ ಅತೀ ದೊಡ್ಡದಾಗಿರುವ ಮೊಟೆರಾ ಸ್ಟೇಡಿಯಂನ್ನು ಟ್ರಂಪ್ ಉದ್ಘಾಟಿಸಲಿದ್ದಾರೆ. ತರುವಾಯ 1 ಲಕ್ಷ ಜನ ಸಾಕ್ಷಿ ಆಗಲಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಇದಕ್ಕಾಗಿ ಮೊಟೆರಾ ಸರ್ವಾಂಗ ಸುಂದರವಾಗಿ ಸಜ್ಜಾಗಿದೆ. ಈ ಹಿಂದೆ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಮೋದಿಗಾಗಿ ‘ಹೌಡಿ ಮೋದಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಇದೀಗ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ ತಾಜ್‍ಮಹಲ್‍ಗೆ ಟ್ರಂಪ್ ಜೋಡಿ
ಈ ಎಲ್ಲ ಕಾರ್ಯಕ್ರಮಗಳ ನಂತರ ಸಂಜೆ ಪ್ರೇಮಿಗಳ ಸೌಧ ತಾಜ್‍ಮಹಲ್‍ಗೆ ಪತ್ನಿ ಮೆಲಾನಿಯಾ ಜೊತೆಗೆ ಡೊನಾಲ್ಡ್ ಟ್ರಂಪ್ ಭೇಟಿ ನೀಡಲಿದ್ದಾರೆ. ತಾಜ್‍ಮಹಲ್ ಭೇಟಿ ವೇಳೆ ಪ್ರಧಾನಿ ಮೋದಿ ಉಪಸ್ಥಿತರಿರುವುದಿಲ್ಲ. ಒಂದೂವರೆ ಗಂಟೆಗಳ ಕಾಲ ತಾಜ್‍ಮಹಲ್‍ನಲ್ಲಿ ವಿಹಾರ ನಡೆಸಲಿರುವ ಟ್ರಂಪ್ ಜೋಡಿ ಬಳಿಕ ರಾಜಧಾನಿ ದೆಹಲಿಗೆ ಪ್ರಯಾಣಿಸಲಿದೆ. ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್‍ಗೆ ಸಾಂಪ್ರದಾಯಿಕ ಅದ್ಧೂರಿ ಸ್ವಾಗತ ಕೋರಲಾಗುತ್ತದೆ. ಬಳಿಕ ರಾಜ್‍ಘಾಟ್‍ಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಲಿದ್ದಾರೆ.
ರಾಜತಾಂತ್ರಿಕ ಚರ್ಚೆಗಳು ನಡೆಯುವ ನವದೆಹಲಿಯಲ್ಲಿನ ಹೈದ್ರಾಬಾದ್ ಹೌಸ್‍ನಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ ಮಾತುಕತೆ ನಡೆಸಲಿದ್ದಾರೆ. ಭೋಜನದ ಬಳಿಕ ಇಬ್ಬರೂ ನಾಯಕರು ಸುದ್ದಿಗೋಷ್ಠಿಯಲ್ಲಿ ಮಾತಾಡಲಿದ್ದಾರೆ. ನಂತರ ಅಮೆರಿಕ ರಾಯಭಾರ ಕಚೇರಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಟ್ರಂಪ್ ಉದ್ಯಮಿಗಳ ಜೊತೆ ಚರ್ಚಿಸಲಿದ್ದಾರೆ. ಬಳಿಕ ಸಂಜೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಮೂಲಕ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿರುವ ಟ್ರಂಪ್ ಅವರ 36 ಗಂಟೆಗಳ ಪ್ರವಾಸ ಕೊನೆ ಆಗಲಿದೆ. ಮಂಗಳವಾರ ರಾತ್ರಿ 10 ಗಂಟೆಗೆ ಅಮೆರಿಕ ಅಧ್ಯಕ್ಷರು ಸ್ವದೇಶಕ್ಕೆ ನಿರ್ಗಮಿಸಲಿದ್ದಾರೆ.
ಊಟಕ್ಕೆ ಯಾವ್ಯಾವ ಖಾದ್ಯಗಳಿರುತ್ತವೆ?
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಭೋಜನದ ಮೆನು ವಿಭಿನ್ನವಾಗಿದ್ದು, ಗುಜರಾತ್‍ನ ವಿಶೇಷ ಖಾದ್ಯವನ್ನು ಉಣಬಡಿಸಲಾಗುತ್ತಿದೆ. ಖಮನ್ (ಕಡಲೆಹಿಟ್ಟಿನ ಡೋಕ್ಲಾ), ಬ್ರಾಕಲಿ ಸಮೋಸಾ, ಜೇನುತುಪ್ಪ ಬೆರೆತ ಕುಕ್ಕಿಗಳು, ವಿವಿಧ ಧಾನ್ಯಗಳ ರೋಟಿ, ಎಳನೀರು, ಐಸ್ ಟೀ ಸೇರಿದಂತೆ ವಿವಿಧ ಬಗೆಯ ಆಹಾರದ ಮೆನುವನ್ನು ಸಿದ್ಧಪಡಿಸಲಾಗಿದೆ.
3 ಗಂಟೆಗೆ 100 ಕೋಟಿ ರೂ. ವೆಚ್ಚ
ಟ್ರಂಪ್ ಕಾರ್ಯಕ್ರಮಕ್ಕೆ ಪ್ರತಿ ನಿಮಿಷಕ್ಕೆ 55 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. 3 ಗಂಟೆಯ ಕಾರ್ಯಕ್ರಮಕ್ಕೆ ಬರೋಬ್ಬರಿ 100 ಕೋಟಿ ರೂ. ವ್ಯಯಿಸಲಾಗುತ್ತಿದೆ. ರಸ್ತೆ ದುರಸ್ತಿ, ನಿರ್ಮಾಣಕ್ಕೆ 60 ಕೋಟಿ ರೂ., ಟ್ರಂಪ್ ಭದ್ರತೆಗಾಗಿ 12-15 ಕೋಟಿ ರೂ., ಟ್ರಂಪ್ ಸಂಚರಿಸುವ ಮಾರ್ಗದ ಅಲಂಕಾರಕ್ಕೆ 6 ಕೋಟಿ ರೂ. ಮೊಟೋರಾ ಉದ್ಘಾಟನೆ ಸಮಾರಂಭಕ್ಕೆ 10 ಕೋಟಿ ರೂ. ವೆಚ್ಚ (ಗಣ್ಯರ ಸಂಚಾರ, ಊಟಕ್ಕಾಗಿ ವೆಚ್ಚ), ಮೋದಿ-ಟ್ರಂಪ್ ರೋಡ್‍ಶೋಗೆ 4 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ ರೋಡ್ ಶೋ ನಡೆಯುವ ರಸ್ತೆಯನ್ನು ಅಗಲೀಕರಣ ಮಾಡಲಾಗಿದ್ದು, ಸಬರಮತಿ ಆಶ್ರಮ, ಮೊಟೆರಾ ಸ್ಟೇಡಿಯಂವರೆಗೂ ರೋಡ್ ಶೋ ನಡೆಯಲಿದೆ. ಇದಕ್ಕಾಗಿ ಭಾರೀ ವೆಚ್ಚದಲ್ಲಿ ರಸ್ತೆ ಅಗಲೀಕರಣ ಮತ್ತು ಸಿಂಗಾರ ಮಾಡಲಾಗಿದೆ. ರಸ್ತೆಯುದ್ದಕ್ಕೂ 1 ಲಕ್ಷ ಸಸಿಗಳು, ಹೂಗಿಡಗಳನ್ನು ನೆಡಲಾಗಿದೆ. ರೋಡ್ ಶೋನಲ್ಲಿ 1 ಲಕ್ಷ ಜನ ಭಾಗಿಯಾಗುವ ಸಾಧ್ಯತೆ ಇದೆ.
ಟ್ರಂಪ್ ಹಾರುವ ವೈಟ್‍ಹೌಸ್ ವಿಶೇಷತೆ
ಜಗತ್ತಿನ ಅತ್ಯಾಧುನಿಕ, ಐಷಾರಾಮಿ ವಿಮಾನ ಎಲ್ಲ ವಾಣಿಜ್ಯ ವಿಮಾನಗಳಿಗಿಂತ ಎತ್ತರ ಹಾರಬಲ್ಲ ಸಾಮರ್ಥ್ಯ ಇದಕ್ಕಿದ್ದು, ಅಮೆರಿಕ ಕಮಾಂಡರ್ ಇನ್ ಚೀಫ್ ಅಂದ್ರೆ ಅಧ್ಯಕ್ಷರಿಗೆ ಮೀಸಲು ಬೋಯಿಂಗ್ ಕಂಪನಿಯ 747-ಏರ್‍ಪೋರ್ಸ್ ವಿಮಾನ ಇದಾಗಿದೆ. ಇದನ್ನು ಹಾರಾಡುವ ‘ಓವಲ್’ ಅಫೀಸ್ ಎಂದು ಕರೆಯುತ್ತಾರೆ. ಪ್ರತಿ ಗಂಟೆಯ ಹಾರಾಟಕ್ಕೆ 1.47 ಕೋಟಿ ರೂ. ವೆಚ್ಚ ವೆಚ್ಚವಾಗುತ್ತದೆ. 3 ಅಂತಸ್ತಿನ ವಿಮಾನದಲ್ಲಿ 70 ಆಸನಗಳು, 4000 ಚದರಡಿ ಒಳಾಂಗಣ, 100 ಮಂದಿ ಸಾಮರ್ಥ್ಯದ ಕಿಚನ್, 1 ಅತ್ಯಾಧುನಿಕ ಆಪರೇಷನ್ ಥಿಯೇಟರ್ ಇದ್ದು, ಗರಿಷ್ಠ 45,100 ಅಡಿ ಎತ್ತರ ಹಾರುತ್ತದೆ ಹಾಗೂ 965 ಕಿ.ಮೀ. ಇದರ ವೇಗವಾಗಿದೆ.
ಹಾರುತ್ತಿರುವಾಗಲೇ ಆಗಸದಲ್ಲೇ ಇಂಧನ ತುಂಬುವ ವ್ಯವಸ್ಥೆ ಸಹ ಇದಕ್ಕಿದ್ದು, 4 ಜೆಟ್ ಎಂಜಿನ್ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ. ರನ್‍ವೇನಲ್ಲಿ 2,300 ಮೀಟರ್ ಚಲಿಸಿ ಟೇಕಾಫ್ ಆಗುತ್ತೆ. ಟೇಕಾಫ್ ಆದ ನಂತರ ಸುಮಾರು 4,400 ಕಿ.ಮೀ ಕ್ರಮಿಸಲಿದೆ. ಈ ವಿಮಾನದಲ್ಲಿ ಅಮೆರಿಕ ಅಧ್ಯಕ್ಷರು, ಹಿರಿಯ ಸಲಹೆಗಾರರು, ರಹಸ್ಯ ಸೇವಾ ಅಧಿಕಾರಿಗಳು, ಪತ್ರಕರ್ತರು ಹಾಗೂ ಇತರ ಅತಿಥಿಗಳು ಇರುತ್ತಾರೆ, ಎಲ್ಲರಿಗೂ ಪ್ರತ್ಯೇಕ ವಿಭಾಗಗಳು ಇರುತ್ತವೆ.
ಹಾರುವ ವೈಟ್‍ಹೌಸ್ ತುಂಬಾ ವಿಶೇಷತೆಯಿಂದ ಕೂಡಿದ್ದು, ಇದನ್ನು ಮೊದಲು ಬಳಸಿದವರು ಜಾನ್.ಎಫ್. ಕೆನಡಿ. 1962ರಲ್ಲಿ ಅಧ್ಯಕ್ಷರಿಗೆಂದೇ ಮೀಸಲಾದ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. 1962ರಲ್ಲಿ ಮೊದಲಿಗೆ ಬೋಯಿಂಗ್ 707 ವಿಮಾನ ಬಳಕೆ ಮಾಡಲಾಗುತ್ತಿತ್ತು. 1990ರ ನಂತರ ಬೋಯಿಂಗ್ 747 ವಿಮಾನ ಬಳಕೆ ಮಾಡಲಾಗುತ್ತಿದ್ದು, ಜಾರ್ಜ್ ಹೆಚ್.ಡಬ್ಲ್ಯು ಬುಷ್ ಅವರ ಅವಧಿಯಿಂದ ಇದನ್ನು ಬಳಸಲಾಗುತ್ತಿದೆ.
ಟ್ರಂಪ್ ಭದ್ರತೆಗೆ 7 ವಿಮಾನ
ಟ್ರಂಪ್ ಏರ್ ಫೋರ್ಸ್-1 ವಿಮಾನಕ್ಕೆ ಭದ್ರತೆಗಾಗಿ 7 ವಿಮಾನಗಳು ಸುತ್ತುವರಿಯುತ್ತವೆ. ಅಮೆರಿಕದಿಂದಲೇ ಬರಲಿದೆ ಈ 10 ವಿಮಾನಗಳು ಬರುಇತ್ತವೆ. ಟ್ರಂಪ್ ಸುತ್ತಮುತ್ತ ಬುಲೆಟ್ ಪ್ರೂಫ್ ಕಾರುಗಳು, 100ಕ್ಕೂ ಹೆಚ್ಚು ಭದ್ರತಾ ಅಧಿಕಾರಿಗಳು, ಅಮೆರಿಕದ ಜೊತೆಗೆ ಗುಜರಾತಿನ ಖಡಕ್ ಅಧಿಕಾರಿಗಳು, 25 ಐಪಿಎಸ್, 65 ಎಸಿಪಿಗಳ ಭದ್ರತೆ, 1000ಕ್ಕೂ ಹೆಚ್ಚು ಎಸ್‍ಐ/ಎಎಸ್‍ಐಗಳು ಸುಮಾರು 12,000 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್‍ಗಾಗಿ ವಿಶೇಷ ಮಹಿಳಾ ಪಡೆ ನಿಯೋಜಿಸಲಾಗಿದ್ದು, ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ 10 ಜನರ ತಂಡ ನೇಮಿಸಲಾಗಿದೆ. ತಂಡದಲ್ಲಿರುವ ಸದಸ್ಯರೆಲ್ಲ ಮಹಿಳಾ ಅಧಿಕಾರಿಗಳೇ ಆಗಿರುತ್ತಾರೆ. ತಂಡಕ್ಕೆ ಮಾತನಾಡುವ, ಸೈಬರ್ ಮಾನಿಟರಿಂಗ್ ತರಬೇತಿ, ಖಾಕಿ ಡ್ರೆಸ್ ಬದಲು ಪ್ಯಾಂಟ್ ಮತ್ತು ಬ್ಲೇಜರ್ ಧರಿಸಲು ಸೂಚನೆ ನೀಡಲಾಗಿದೆ.
ಪ್ರಧಾನಿ ಮೋದಿ ಭದ್ರತೆ ಹೇಗೆ?
ಬಿಎಂಡಬ್ಲ್ಯೂ 7 ಸಿರೀಸ್‍ನ ಶಸ್ತ್ರಸಜ್ಜಿತ 3 ವಾಹನಗಳು, ಬಿಎಂಡಬ್ಲ್ಯೂ ಎಕ್ಸ್5ಎಸ್ ಶಸ್ತ್ರಸಜ್ಜಿತ 8 ವಾಹನಗಳು, ಶಸ್ತ್ರಸಜ್ಜಿತ 2 ರೇಂಜ್ ರೋವರ್ ಕಾರುಗಳು, ಹೈ ಸೆಕ್ಯುರ್ಡ್ 6 ಟೊಯೋಟಾ ಫಾರ್ಚುನರ್ ಕಾರುಗಳು, 02 ಬೆಂಜ್ ಅಂಬ್ಯುಲೆನ್ಸ್, ಕಂಟ್ರೋಲ್ ವ್ಯವಸ್ಥೆ ಹೊಂದಿರುವ 1 ಟಾಟಾ ಸಫಾರಿ ಕಾರನ್ನು ಪ್ರಧಾನಿ ಮೋದಿ ಭದ್ರತೆಗಾಗಿ ಬಳಸಲಾಗುತ್ತದೆ.
ಉಕ್ಕಿನ ಕವಚದ ದಿ ಬೀಸ್ಟ್ ಕಾರಿನ ವಿಶೇಷತೆ
ದಿ ಬೀಸ್ಟ್ ಕಾರಿನ ತೂಕ 6500 ಕೆ.ಜಿ. ಇದ್ದು, ಕ್ಯಾಡಿಲಾಕ್ ಕಂಪನಿಯ ಶಸ್ತ್ರಸಜ್ಜಿತ, ಸ್ಥಳಾವಕಾಶವುಳ್ಳ ಕಾರು ಇದಾಗಿದೆ. `ದಿ ಬೀಸ್ಟ್’ ಅನ್ನೋದು ಅಮೆರಿಕ ಅಧ್ಯಕ್ಷರ ಕಾರಿನ ನಿಕ್‍ನೇಮ್, ಈ ಕಾರಿನ ಚಾಲಕನಿಗೆ ಅತ್ಯುನ್ನತ ತರಬೇತಿ ಮೂಲಕ ಎಂತಹ ಕಠಿಣ ಪರಿಸ್ಥಿತಿ ಬಂದರು ಎದುರಿಸುವ ತರಬೇತಿ ನೀಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲೂ ಎದುರಾಳಿಯನ್ನು ದಿಕ್ಕು ತಪ್ಪಿಸುವ ಸಾಮಥ್ರ್ಯವನ್ನು ಈ ಚಾಲಕ ಹೊಂದಿರುತ್ತಾರೆ. ಅಲ್ಲದೆ 180 ಡಿಗ್ರಿಯಲ್ಲಿ ಕಾರು ತಿರುಗಿಸುವ ತರಬೇತಿಯನ್ನು ಸಹ ನೀಡಲಾಗಿರುತ್ತದೆ.
ಕಿಟಕಿಗಳು ಐದು ಪದರಗಳ ಗಾಜು, ಪಾಲಿ ಕಾರ್ಬೊನೇಟ್ ಶೀಟ್‍ಗಳನ್ನು ಹೊಂದಿರುತ್ತವೆ. ಯಾವ ಕಾರಣಕ್ಕೂ ಕಿಟಕಿ ತೆರೆಯುವುದು ಸಾಧ್ಯವಿಲ್ಲ. ತುರ್ತು ಸಂದರ್ಭದಲ್ಲಿ ಚಾಲಕನ ಬಾಗಿಲಿನ ಕಿಟಕಿ ತೆರೆಯಲಿದೆ. ಸುಮಾರು 3 ಇಂಚಿನಷ್ಟು ಮಾತ್ರ ಕೆಳಗೆ ಇಳಿಸಬಹುದಾಗಿದೆ. ಅಲ್ಲದೆ ಐದು ಇಂಚು ದಪ್ಪದ ಮಿಲಿಟರಿ ಗ್ರೇಡ್‍ನ ಲೋಹದಿಂದ ಕಾರಿನ ಬಾಡಿಯನ್ನು ನಿರ್ಮಿಸಲಾಗಿರುತ್ತದೆ. ಟೈಟಾನಿಯಂ, ಅಲ್ಯುಮಿನಿಯಂ, ಸೆರಾಮಿಕ್ಸ್ ಮಿಶ್ರಿತ ಲೋಕವನ್ನು ಸಹ ಬಳಸಲಾಗಿರುತ್ತದೆ. ಇಡೀ ಕಾರು ಗುಂಡು ನಿರೋಧಕ ವ್ಯವಸ್ಥೆ ಹೊಂದಿರುತ್ತದೆ. ಬೋಯಿಂಗ್ 757 ವಿಮಾನದಲ್ಲಿ ಬಳಸುವಂತಹ 8 ಇಂಚು ದಪ್ಪದ ಬಾಗಿಲುಗಳಿರುತ್ತವೆ. ಬಾಗಿಲು ಹಾಕಿಕೊಂಡಾಗ ಕಾರು ಶೇ.100ರಷ್ಟು ರಾಸಾಯನಿಕ ಆಯುಧ ನಿರೋಧಕ ವ್ಯವಸ್ಥೆ ಹೊಂದಿರುತ್ತದೆ.
ಇನ್ನು ಪಂಕ್ಚರ್ ನಿರೋಧಕ ಬಲಿಷ್ಠ ಟೈರ್ ಗಳನ್ನು ಅಳವಡಿಸಲಾಗಿರುತ್ತದೆ. ಟೈರ್ ಸ್ಫೋಟಗೊಂಡಾಗಲೂ ಕಾರು ಚಲಿಸಲಿದೆ, ಅಂತಹ ಸ್ಟೀಲ್ ರಿಮ್‍ಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಕಾರಿನ ಮುಂಭಾಗದಲ್ಲಿ ಅಶ್ರುವಾಯು ಗ್ರೆನೇಡ್ ಲಾಂಚರ್ ಇರುತ್ತದೆ. ರಾತ್ರಿ ವೇಳೆಯೂ ಸ್ವಷ್ಟವಾಗಿ ಕಾರ್ಯ ನಿರ್ವಹಿಸುವ ಕ್ಯಾಮೆರಾಗಳಿರುತ್ತವೆ. ಚಾಲಕನ ಕ್ಯಾಬಿನ್‍ನಲ್ಲಿ ಸಂವಹನ ವ್ಯವಸ್ಥೆ, ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಇರುತ್ತದೆ. ಹಿಂಬದಿ ಕಂಪಾರ್ಟ್‍ಮೆಂಟ್‍ನಲ್ಲಿ ಅಮೆರಿಕ ಅಧ್ಯಕ್ಷರಲ್ಲದೆ 4 ಜನ ಕೂರಬಹುದು, ಅಧ್ಯಕ್ಷರಿಗೆ ಗಾಜಿನ ಕ್ಯಾಬಿನ್ ಇರುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುತ್ತದೆ. ದೇಶದ ಉಪಾಧ್ಯಕ್ಷರು, ಪೆಂಟಗನ್ ಜೊತೆಗೆ ಅಧ್ಯಕ್ಷರಿಗೆ ನೇರವಾಗಿ ಸಂಪರ್ಕ ಸಂವಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಜಗತ್ತಿನ ದೊಡ್ಡ ಸ್ಟೇಡಿಯಂನ ವಿಶೇಷತೆ
ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ಮೊಟೆರಾ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದ್ದು, 64 ಎಕರೆ ಪ್ರದೇಶ, 700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 1.10 ಲಕ್ಷ ಆಸನಗಳ ಸಾಮರ್ಥ್ಯ ಹೊಂದಿದ್ದು, 76 ಕಾರ್ಪೊರೇಟ್ ಬಾಕ್ಸ್‍ಗಳು, 4 ಡ್ರೆಸ್ಸಿಂಗ್ ರೂಂ, 3 ಅಭ್ಯಾಸ ಮೈದಾನಗಳಿವೆ. ಅಲ್ಲದೆ ಕೆಂಪು, ಕಪ್ಪು ಮಣ್ಣು ಬಳಸಿ 3 ಮಾದರಿಯ ಪಿಚ್ ನಿರ್ಮಿಸಲಾಗಿದೆ. ಎಲ್‍ಇಡಿ ದೀಪಗಳನ್ನು ಹಾಕಲಾಗಿದ್ದು, 30 ಮೀಟರ್ ದೂರದ ಪ್ರದೇಶವನ್ನು ಕವರ್ ಮಾಡಲಿದೆ. ಮಳೆ ಬಂದರೆ ಸ್ಟೇಡಿಯಂ ಒಣಗಿಸಲು `ಸಬ್ ಏರ್ ಸಿಸ್ಟಂ’ ತಂತ್ರಜ್ಞಾನ ಬಳಸಲಾಗಿದೆ. ಸ್ವಿಮ್ಮಿಂಗ್‍ಪೂಲ್, ಸ್ಕ್ವಾಷ್ ಕೋರ್ಟ್, ಟೇಬಲ್ ಟೆನಿಸ್ ಕೋರ್ಟ್, ಟೆನ್ನಿಸ್‍ಕೋರ್ಟ್ ಇದೆ. ಎಲ್‍ಇಡಿ ದೀಪಗಳನ್ನೊಳಗೊಂಡ 3ಡಿ ಥಿಯೇಟರ್ ವ್ಯವಸ್ಥೆ ಸಹ ಇದೆ. 3,000 ಕಾರು, 10,000 ಬೈಕ್‍ಗಳ ಪಾರ್ಕಿಂಗ್ ವ್ಯವಸ್ಥೆ, ಮೈದಾನಕ್ಕೆ ಸಂಪರ್ಕ ಕಲ್ಪಿಸಲು 300 ಮೀಟರ್ ದೂರದಲ್ಲೇ ಮೆಟ್ರೋ ನಿಲ್ದಾಣ, ಮೆಟ್ರೋ ನಿಲ್ದಾಣದಿಂದ ಸ್ಟೇಡಿಯಂ ಸಂಪರ್ಕಕ್ಕೆ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ.
ಟ್ರಂಪ್ ಫುಡ್ ಮೆನು
ಟ್ರಂಪ್‍ಗೆ ಬೆಳಗ್ಗೆ ಮೊಟ್ಟೆ ಇರಲೇಬೇಕು, ಮ್ಯಾಕ್ ಮಫಿನ್ಸ್ (ಸ್ಯಾಂಡ್‍ವಿಜ್) ಹೆಚ್ಚು ಸೇವನೆ ಮಾಡುತ್ತಾರೆ. ಫಿಶ್ ಸ್ಯಾಂಡ್‍ವಿಜ್, ಚಾಕಲೇಟ್ ಹೆಚ್ಚು ಇಷ್ಟಪಡುತ್ತಾರೆ. ಟ್ರಂಪ್‍ಗೆ ಡಯಟ್ ಕೋಕ್ ಅಂದ್ರೆ ಇಷ್ಟ (ಒಂದೇ ಬಾರಿ 12 ಡಯಟ್ ಸೇವಿಸಿರೋದೂ ಉಂಟು), ಮ್ಯಾಕ್ ಡೊನಾಲ್ಡ್ ಮಾಂಸದ ಬ್ರೆಡ್ಡು ಇಷ್ಟ, ಮಧ್ಯಾಹ್ನ ಮೊಟ್ಟೆ, ಹಾಲು, ಸಿರಿಧಾನ್ಯ ಇರಬೇಕು. ಮದ್ಯ ಸೇವಿಸುವುದಿಲ್ಲ, ಚಹಾ ಕುಡಿಯುವುದೇ ಇಲ್ಲ. ಕೆಎಫ್‍ಸಿಯ ಪ್ರೈಯ್ಡ್ ಚಿಕನ್ ಫೆವರೇಟ್, ಲೇಸ್ ಆಲೂಗೆಡ್ಡೆ ಚಿಪ್ಸ್ ಜೊತೆ ಫಾಸ್ಟ್‍ಪುಡ್ ಇಷ್ಟಪಡುತ್ತಾರೆ. ಚೆರ್ರಿ ವೆನಿಲಾ ಐಸ್‍ಕ್ರೀಂ, ಚಾಕಲೇಟ್ ಕೇಸ್ ಕಂಡರೆ ಟ್ರಂಪ್‍ಗೆ ಪ್ರಾಣ.
ನಮೋಸ್ತೆ ಟ್ರಂಪ್ ಟೂರ್ ಪ್ಲಾನ್
ಅಮೆರಿಕಾದಿಂದ ಅಹಮದಾಬಾದ್‍ಗೆ 17 ಗಂಟೆ ಯಾನ, ಬೆಳಗ್ಗೆ 11.55ಕ್ಕೆ ಅಹಮದಾಬಾದ್‍ಗೆ ಟ್ರಂಪ್ ಆಗಮನ. ಸರ್ದಾರ್ ಪಟೇಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದ್ದು, ವಿಮಾನ ನಿಲ್ದಾಣದಲ್ಲಿ ಮೋದಿಯಿಂದ ಟ್ರಂಪ್‍ಗೆ ಸ್ವಾಗತ. ಏರ್‍ಪೋರ್ಟ್ ನಿಂದ ಮೊಟೇರಾ ಸ್ಟೇಡಿಯಂವರೆಗೂ ರೋಡ್ ಶೋ ನಡೆಯಲಿ9ದೆ. 22 ಕಿ.ಮೀ. ಅದ್ಧೂರಿ ರೋಡ್ ಶೋ ನಡೆಯಲಿದ್ದು, ಇದರ ಮಧ್ಯದಲ್ಲೇ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.
ಸಾಬರಮತಿ ಆಶ್ರಮದಲ್ಲಿ 15 ನಿಮಿಷ ಕಾಲಕಳೆಯುವ ಟ್ರಂಪ್, 12.45 -1 ಗಂಟೆ ಸುಮಾರಿಗೆ ಮೊಟೇರಾ ಸ್ಟೇಡಿಯಂಗೆ ಆಗಮಿಸುತ್ತಾರೆ. ನಂತರ ವಿಶ್ವದಲ್ಲೇ ಅತಿ ದೊಡ್ಡ ಮೊಟೇರಾ ಸ್ಟೇಡಿಯಂ ಉದ್ಘಾಟನೆ ನೆರವೇರಿಸಲಿದ್ದಾರೆ. ಮೊಟೇರಾ ಸ್ಟೇಡಿಯಂನಲ್ಲೇ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದ್ಧೂರಿ ಕಾರ್ಯಕ್ರಮಕ್ಕೆ ಸುಮಾರು 1.25ಲಕ್ಷ ಜನ ಸಾಕ್ಷಿಯಾಗಲಿದ್ದಾರೆ. ಕಾರ್ಯಕ್ರಮ ನಂತರ ಮೋದಿ ಜೊತೆ ವಿಶೇಷ ಭೋಜನ ಕೂಟ ಏರ್ಪಡಿಸಿದ್ದಾರೆ. ಭೋಜನದ ನಂತರ 3 ಗಂಟೆಗೆ ಕುಟುಂಬ ಸಮೇತ ಆಗ್ರಾಕ್ಕೆ ಟ್ರಂಪ್ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 5ಕ್ಕೆ ತಾಜ್ ಮಹಲ್‍ಗೆ ಟ್ರಂಪ್ ಫ್ಯಾಮಿಲಿ ಭೇಟಿ ನೀಡಲಿದ್ದು, 30- 45 ನಿಮಿಷ ತಾಜ್ ಮಹಲ್ ವೀಕ್ಷಣೆ ಮಾಡಲಿದ್ದಾರೆ. ನಂತರ ಸಂಜೆ 6ಕ್ಕೆ ನವದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ರಾತ್ರಿ 10ಕ್ಕೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಕಾರ್ಯಕ್ರಮ ಕೋರಲಾಗಿದೆ. ನಂತರ ದೆಹಲಿಯ ಐಟಿಸಿ ಮೌರ್ಯ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.