ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸುಂಕ ಅಸ್ತçವನ್ನು ಪ್ರಯೋಗಿಸಿರುವುದು ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಇದು ‘ವಿಶ್ವ ವ್ಯಾಪಾರ ಯುದ್ಧ’ ಎನ್ನುವಂತೆಯೇ ಬಿಂಬಿತವಾಗಿದೆ. ವಿವಿಧ ದೇಶಗಳಲ್ಲಿ ಉತ್ಪನ್ನಗಳನ್ನು ತಯಾರಿಸಿ ಅಮೆರಿಕಗೆ ರಫ್ತು ಮಾಡುತ್ತಿದ್ದ ದೈತ್ಯ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ತಮ್ಮ ಉತ್ಪನ್ನಗಳ ಮೇಲೆ ಬೀಳುವ ಹೆಚ್ಚಿನ ಸುಂಕದಿಂದ ತಪ್ಪಿಸಿಕೊಳ್ಳಲು ಪರಿಹಾರ ಮಾರ್ಗವನ್ನು ಹುಡುಕುತ್ತಿವೆ. ಟ್ರಂಪ್ ಕಡಿಮೆ ಟ್ಯಾರಿಫ್ ಹಾಕಿರುವ ರಾಷ್ಟ್ರಗಳತ್ತ ಈ ಕಂಪನಿಗಳು ತಮ್ಮ ದೃಷ್ಟಿ ನೆಟ್ಟಿವೆ.
ಟ್ರಂಪ್ ಪ್ರತಿಸುಂಕ ನೀತಿಯು ಉದ್ಯಮ ವಲಯದಲ್ಲಿ ಕೆಲವು ರಾಷ್ಟ್ರಗಳಿಗೆ ವಿಫುಲ ಅವಕಾಶಗಳಿಗೆ ದಾರಿ ಮಾಡಿಕೊಡಲಿದೆ ಎಂಬುದು ಉದ್ಯಮ ತಜ್ಞರ ಅಭಿಪ್ರಾಯವಾಗಿದೆ. ತನ್ನ ನೆಲದಲ್ಲಿ ಐಫೋನ್ ಉತ್ಪಾದನಾ ಕೇಂದ್ರವಾಗಬೇಕೆಂಬ ಆಸೆಯನ್ನು ಭಾರತ ಹೊಂದಿತ್ತು. ಭಾರತದ ಈ ಮಹತ್ವಾಕಾಂಕ್ಷೆಗೆ ಟ್ರಂಪ್ ನೀತಿ ನೀರೆರೆದು ಪೋಷಿಸುವಂತಿದೆ. ಭಾರತವು ತನ್ನನ್ನು ತಾನು ಚೀನಾಕ್ಕೆ ಪರ್ಯಾಯವಾಗಿ ಪ್ರಸ್ತುತಪಡಿಸಲು ಇದೊಂದು ಸದಾವಕಾಶ ಎಂಬುದು ತಜ್ಞರ ಮಾತಾಗಿದೆ.
‘ಆಪಲ್’ಗೆ ಟ್ಯಾರಿಫ್ ಪೆಟ್ಟು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ಯಾರಿಫ್ ನೀತಿಯು ಆಪಲ್ ಐಫೋನ್ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ತನ್ನ ಉತ್ಪಾದನಾ ಕೇಂದ್ರ ರಾಷ್ಟçದ ಮೇಲೆ ಹೆಚ್ಚಿನ ಸುಂಕ ವಿಧಿಸಿರುವುದು ಆಪಲ್ ಕಂಪನಿಗೆ ತಲೆನೋವಾಗಿ ಪರಿಣಮಿಸಿದೆ. ಪರಿಣಾಮವಾಗಿ ತನ್ನ ಐಫೋನ್ ರಫ್ತಿಗೆ ಹೆಚ್ಚಿನ ಸುಂಕ ತೆರಬೇಕಾದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ತಾತ್ಕಾಲಿಕವಾಗಿ ಅಮೆರಿಕದ ಪೆಟ್ಟಿನಿಂದ ಪಾರಾಗಲು 5 ವಿಮಾನಗಳಷ್ಟು ಐಫೋನ್ ಮತ್ತು ಇತರೆ ಉತ್ಪನ್ನಗಳನ್ನು ಭಾರತದ ಮೂಲಕ ಆಪಲ್ ಕಂಪನಿ ರಫ್ತು ಮಾಡಿದೆ.
ಭಾರತದತ್ತ ಆಪಲ್ ಚಿತ್ತ?
ಐಫೋನ್ ಉತ್ಪಾದನೆ ಮೇಲೆ ಯುಎಸ್ ಸುಂಕದ ಹೊಡೆತ ಬಿದ್ದಿದೆ. ಹೀಗಾಗಿ, ಆಪಲ್ ತನ್ನ ಪೂರೈಕೆ ಸರಪಳಿಯನ್ನು ಚೀನಾದಿಂದ ಕಳಚಿಕೊಂಡು ಭಾರತ ಮತ್ತು ವಿಯೆಟ್ನಾಂ ಜೊತೆ ಜೋಡಿಸಿಕೊಳ್ಳಲು ಯೋಜಿಸಿದೆ. ಜಾಗತಿಕ ಐಫೋನ್ ಉತ್ಪಾದನೆಯ ಶೇ.14 ರಷ್ಟನ್ನು ಹೊಂದಿರುವ ಭಾರತಕ್ಕೆ ಯುಎಸ್ ಶೇ.26 ಸುಂಕ ವಿಧಿಸಿದೆ. ಚೀನಾಗೆ ವಿಧಿಸಿರುವ 142%, ವಿಯೆಟ್ನಾಂನ 46%ಗಿಂತ ಕಡಿಮೆಯಿದೆ. ಆದರೆ, ಭಾರತೀಯ ಉದ್ಯಮ ಸಂಸ್ಥೆಗಳು ಎಲೆಕ್ಟಾçನಿಕ್ ರಫ್ತು ಮತ್ತು ಉತ್ಪಾದನೆಯ ಮೇಲೆ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಿವೆ. ಚೀನಾ ಮತ್ತು ಭಾರತದಲ್ಲಿ ಆಪಲ್ ಐಫೋನ್ ಮೇಲೆ ಅಮೆರಿಕ ಸುಂಕದ ಪರಿಣಾಮ ಏನು? ಈ ಬೆಳವಣಿಗೆ ಭಾರತದ ಪರವಾಗಿ ಹೇಗೆ ಕೆಲಸ ಮಾಡಬಹುದು?
ಭಾರತಕ್ಕೆ ಹೇಗೆ ಹೊಡೆತ ಬಿದ್ದಿದೆ?
ಯುಎಸ್ ಭಾರತದ ಏಕೈಕ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದು, ಒಟ್ಟು ಸರಕುಗಳ ರಫ್ತಿನ 18% ರಷ್ಟನ್ನು ಹೊಂದಿದೆ. 26% ಟ್ಯಾರಿಫ್ ಎಲೆಕ್ಟ್ರಾನಿಕ್ಸ್ ಸಾಗಣೆಗಳ ಮೇಲೆ ಪರಿಣಾಮ ಬೀರಬಹುದು. ಲಾಭದಾಯಕತೆಯನ್ನು ಕಡಿಮೆ ಮಾಡುತ್ತದೆ. ಪೂರೈಕೆ ಸರಪಳಿಗಳನ್ನು ಅಸ್ಥಿರಗೊಳಿಸಬಹುದು. ಯುಎಸ್ ವಿಧಿಸಿರುವ 26% ಸುಂಕಗಳು ಭಾರತದ ರಫ್ತಿಗೆ ಗಮನಾರ್ಹ ಸವಾಲನ್ನು ಒಡ್ಡುತ್ತದೆ. ಭಾರತವು ಇತರ ಅನೇಕ ಆರ್ಥಿಕತೆಗಳಿಗಿಂತ ಉತ್ತಮ ಸ್ಥಾನದಲ್ಲಿದ್ದರೂ, ಈ ಸುಂಕಗಳು ದೇಶೀಯ ಕೈಗಾರಿಕೆಗಳ ಮೇಲೆ ಪ್ರಭಾವ ಬೀರಬಹುದು. ವ್ಯಾಪಾರದ ಹರಿವಿಗೆ ಅಡ್ಡಿಪಡಿಸಬಹುದು. ಲಾಭದ ಪ್ರಮಾಣವನ್ನು ತಗ್ಗಿಸಬಹುದು ಎಂದು ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಚಂದಕ್ ಹೇಳಿದ್ದಾರೆ.
ಆಪಲ್ ಲಾಭಕ್ಕೆ ಪೆಟ್ಟು?
ಚೀನೀ ಆಮದುಗಳ ಮೇಲೆ ಈಗ 124% ಸುಂಕದ ಪರಿಣಾಮ ಎದುರಿಸುತ್ತಿರುವ ಆಪಲ್‌ಗೆ ಅಸ್ತಿತ್ವದ ಬಿಕ್ಕಟ್ಟು ಎದುರಾಗಿದೆ. 799 ಡಾಲರ್ ಬೆಲೆಯೊಂದಿಗೆ ಯುಎಸ್‌ನಲ್ಲಿ ಬಿಡುಗಡೆ ಮಾಡಲಾದ ಅಗ್ಗದ ಐಫೋನ್ 16 ಮಾದರಿಗೆ ಪ್ರತಿಸುಂಕದಿಂದ 1,142 ಡಾಲರ್ ವೆಚ್ಚವಾಗಬಹುದು. ರೋಸೆನ್‌ಬ್ಲಾಟ್ ಸೆಕ್ಯುರಿಟೀಸ್‌ನ ಲೆಕ್ಕಾಚಾರಗಳ ಪ್ರಕಾರ, ವೆಚ್ಚವು 43% ರಷ್ಟು ಹೆಚ್ಚಾಗಬಹುದು. 599 ಡಾಲರ್ ಬೆಲೆಯ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾದ ಅಗ್ಗದ ಐಫೋನ್ 16ಇ ಮಾದರಿಯು ಪ್ರತಿಸುಂಕದ ಕಾರಣದಿಂದಾಗಿ 856 ಡಾಲರ್‌ನೊಂದಿಗೆ 43% ಹೆಚ್ಚಳ ಆಗಬಹುದು. ಇತರ ಆಪಲ್ ಉತ್ಪನ್ನಗಳ ಬೆಲೆಗಳು ಕೂಡ ಹೆಚ್ಚಾಗಬಹುದು. ಟ್ರಂಪ್ ಟ್ಯಾರಿಫ್ ಘೋಷಣೆ ಬಳಿಕ ಕಳೆದ ವಾರ ಆಪಲ್‌ನ ಷೇರುಗಳು ಸುಮಾರು 9% ರಷ್ಟು ಕುಸಿತ ಕಂಡಿತು.
ಸಿಎಫ್‌ಆರ್‌ಎ ರಿಸರ್ಚ್‌ನ ಇಕ್ವಿಟಿ ವಿಶ್ಲೇಷಕ ಏಂಜೆಲೊ ಝಿನೋ, ಆಪಲ್ ತನ್ನ ವೆಚ್ಚದ 5% ರಿಂದ 10% ರಷ್ಟುನ್ನು ಗ್ರಾಹಕರಿಗೆ ವರ್ಗಾಯಿಸುತ್ತದೆ ಎಂದು ಅಂದಾಜಿಸಿದ್ದಾರೆ. ಆಪಲ್ ಈಗಾಗಲೇ ಯುಎಸ್ ಹೂಡಿಕೆಯಲ್ಲಿ 500 ಡಾಲರ್ ಶತಕೋಟಿಯನ್ನು ಬದ್ಧವಾಗಿದೆ. ಟೆಕ್ಸಾಸ್‌ನಲ್ಲಿ ಎಐ ಸರ್ವರ್ ಸೌಲಭ್ಯವನ್ನು ತೆರೆಯಿತು. ಕೆಲವು ಪೂರೈಕೆ ಸರಪಳಿಗಳನ್ನು ಸ್ಥಳಾಂತರಿಸಿದೆ. ಆದರೆ ಎವರ್‌ಕೋರ್ ಐಎಸ್‌ಐ ಪ್ರಕಾರ, ಅದರ ಸುಮಾರು 90% ಐಫೋನ್‌ಗಳು ಇನ್ನೂ ಚೀನಾದಲ್ಲಿ ತಯಾರಾಗ್ತಿವೆ. ಟ್ಯಾರಿಫ್‌ನಿಂದಾಗಿ ಐಫೋನ್ ಬೆಲೆಗಳಲ್ಲಿ ಸಂಭಾವ್ಯ ಹೆಚ್ಚಳ ಕಂಡುಬರುವುದರಿAದ ಐಫೋನ್‌ಗಳ ಬೇಡಿಕೆಯನ್ನು ಕುಗ್ಗಿಸಬಹುದು. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ಗೆ ಇದು ವರದಾನ ಆಗಬಹುದು.
ಭಾರತಕ್ಕೆ ವರದಾನ?
ಟ್ರಂಪ್ ಸುಂಕಗಳು ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಚೀನಾದ ವಿರುದ್ಧ ಭಾರತವನ್ನು ಪ್ರಮುಖ ಆಯ್ಕೆಯನ್ನಾಗಿ ಮಾಡುತ್ತದೆ. ಆಪಲ್ ಜಾಗತಿಕವಾಗಿ ಎಲ್ಲಾ ಐಫೋನ್‌ಗಳಲ್ಲಿ ಸುಮಾರು 25% ರಷ್ಟನ್ನು ಭಾರತದಲ್ಲಿ ತಯಾರಿಸಲು ಗುರಿಯನ್ನು ಹೊಂದಿದೆ ಎಂದು ಸರ್ಕಾರದ ಸಚಿವರು 2023 ರಲ್ಲಿ ಹೇಳಿದ್ದರು. ಚೀನಾದ ಮೇಲಿರುವ 126% ಸುಂಕದ ಹೊತ್ತಲ್ಲಿ, ಆಪಲ್‌ಗೆ ಈಗ ಭಾರತ ಬಿಟ್ಟು ಬೇರೆ ಆಯ್ಕೆಯಿಲ್ಲ. ಇದು 2025 ರ ಅಂತ್ಯದ ವೇಳೆಗೆ ಭಾರತದ ಐಫೋನ್ ಉತ್ಪಾದನಾ ಸಾಮರ್ಥ್ಯವನ್ನು 15%-20% ಗೆ ಹೆಚ್ಚಿಸಬಹುದು ಎಂದು ಬರ್ನ್ಸ್ಟೈನ್ ವಿಶ್ಲೇಷಕರು ಅಂದಾಜಿಸಿದ್ದಾರೆ. ಎವರ್‌ಕೋರ್ ಐಎಸ್‌ಐ ಸುಮಾರು 10% ರಿಂದ 15% ರಷ್ಟು ಐಫೋನ್‌ಗಳನ್ನು ಪ್ರಸ್ತುತ ಭಾರತದಲ್ಲಿ ಜೋಡಿಸಲಾಗಿದೆ ಎಂದು ಹೇಳಿದೆ. ಭಾರತದ ನೆಲೆಯನ್ನು ಬಲಪಡಿಸಲು ಆಪಲ್, ಮೈಕ್ರೋಸಾಫ್ಟ್, ಗೂಗಲ್‌ನಂತಹ ನಿಗಮಗಳಿಂದ ಬೆಂಬಲ ಪಡೆಯಬಹುದು ಎಂದು ಉದ್ಯಮ ತಜ್ಞರು ಹೇಳುತ್ತಾರೆ.
ಆಪಲ್‌ನ ಗುತ್ತಿಗೆ ತಯಾರಕರಾದ ಫಾಕ್ಸ್ಕಾನ್, ಟಾಟಾ ಮತ್ತು ಪೆಗಾಟ್ರಾನ್ ನೇತೃತ್ವದಲ್ಲಿ ಭಾರತದ ಬೃಹತ್ ಸ್ಮಾರ್ಟ್ಫೋನ್ ರಫ್ತು ಚಾಲನೆಯು ಅದರ ಹೆಚ್ಚುತ್ತಿರುವ ಸಾಮರ್ಥ್ಯದ ಪುರಾವೆಯಾಗಿದೆ. ಭಾರತವು 2024ರ ಏಪ್ರಿಲ್ ಮತ್ತು 2025 ಜನವರಿಯ ನಡುವೆ ಸುಮಾರು 1 ಲಕ್ಷ ಕೋಟಿ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. 2023 ರಲ್ಲಿ ಅದೇ ಅವಧಿಯಲ್ಲಿ 60,000 ಕೋಟಿ ರೂ. ಮೌಲ್ಯದ ಐಫೋನ್ ರಫ್ತಾಗಿದೆ. ಆಪಲ್ ಪಾಲುದಾರರು ಆ ಸಬ್ಸಿಡಿಗಳಲ್ಲಿ 75% ಅನ್ನು ಪಡೆಯುವುದರೊಂದಿಗೆ ತನ್ನ ಪಿಎಲ್‌ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯಡಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಸರ್ಕಾರವು 8,700 ಕೋಟಿ ರೂ. ವಿತರಿಸಿದೆ.
ಭಾರತೀಯ ಉದ್ಯಮ ಸಂಸ್ಥೆಗಳು ಹೇಳೋದೇನು?
ಹಲವಾರು ಅಭಿವೃದ್ಧಿಶೀಲ ಆರ್ಥಿಕತೆಗಳು ಈಗ ಹೆಚ್ಚು ಆಕರ್ಷಕವಾದ ವ್ಯಾಪಾರ ಅವಕಾಶ ನೀಡುತ್ತಿವೆ ಎಂದು ಭಾರತೀಯ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ತಿಳಿಸಿದೆ. ಬ್ರೆಜಿಲ್, ಟರ್ಕಿ, ಸೌದಿ ಅರೇಬಿಯಾ, ಯುಎಇ-ಎಲ್ಲವೂ ಭಾರತಕ್ಕೆ ಹೋಲಿಸಿದರೆ ಕಡಿಮೆ ಸುಂಕದ ದರಗಳನ್ನು ಪಡೆದುಕೊಂಡಿವೆ. ಕೆಲವು ದೇಶಗಳಿಗೆ 10%, ಫಿಲಿಪೈನ್ಸ್ 17% ಟ್ಯಾರಿಫ್ ಹಾಕಲಾಗಿದೆ. ಸೌದಿ ಅರೇಬಿಯಾ ಮತ್ತು ಯುಎಇ ತಮ್ಮ ವಿಶೇಷ ಆರ್ಥಿಕ ವಲಯಗಳ ಕಾರಣದಿಂದಾಗಿ ಕಡಿಮೆ ಪ್ರತಿಸುಂಕಕ್ಕೆ ಒಳಗಾಗಿವೆ.
ಚೀನಾ ಟ್ಯಾರಿಫ್ ಹೊಡೆತ ಹೇಗೆ ತಡೆದುಕೊಂಡಿದೆ?
ಟ್ರಂಪ್ ಆಡಳಿತವು ಚೀನಾದ ಆಮದುಗಳ ಮೇಲೆ 125% ಸುಂಕವನ್ನು ವಿಧಿಸಿದೆ. ಹೆಚ್ಚುವರಿ 34% ಸುಂಕ ಮತ್ತು 20% ಪರಂಪರೆ ಸುಂಕವನ್ನು ಟ್ರಂಪ್ ವಿಧಿಸಿದ್ದಾರೆ. ಅದು ಕೇವಲ ಐಫೋನ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಗ್ರಾಹಕ ಎಲೆಕ್ಟ್ರಾನಿಕ್ಸ್ ಶ್ರೇಣಿಯ ಮೇಲೂ ಪರಿಣಾಮ ಬೀರುತ್ತದೆ. ಸುಂಕಗಳ ಹಿಂದಿನ ತಾರ್ಕಿಕತೆಯು ನ್ಯಾಯಸಮ್ಮತವಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ‘ಸುಂಕಗಳು ನಮಗೆ ಮಾತುಕತೆ ನಡೆಸಲು ಹೆಚ್ಚಿನ ಶಕ್ತಿಯನ್ನು ನೀಡುತ್ತವೆ’ ಎಂದು ತಿಳಿಸಿದ್ದಾರೆ.
ಎವರ್‌ಕೋರ್ ಐಎಸ್‌ಐ ಅಂದಾಜಿನ ಪ್ರಕಾರ, ಆಪಲ್‌ನ ಉತ್ಪಾದನಾ ಸಾಮರ್ಥ್ಯದ ಸುಮಾರು 80% ರಷ್ಟು ಚೀನಾವನ್ನು ಹೊಂದಿದೆ. ಸುಮಾರು 90% ಐಫೋನ್‌ಗಳನ್ನು ಚೀನಾದಲ್ಲಿ ಜೋಡಿಸಲಾಗಿದೆ. ಆಪಲ್‌ನ 55% ಮ್ಯಾಕ್ ಉತ್ಪನ್ನಗಳು ಮತ್ತು 80% ಐಪ್ಯಾಡ್‌ಗಳನ್ನು ಚೀನಾದಲ್ಲಿ ಜೋಡಿಸಲಾಗಿದೆ ಎಂದು ತಿಳಿಸಿದೆ. ಆಪಲ್‌ನ 2017 ಮತ್ತು 2020 ರ ಆರ್ಥಿಕ ವರ್ಷದ ನಡುವೆ ಚೀನಾದಲ್ಲಿ ಉತ್ಪಾದನೆ ಸಂಖ್ಯೆ ಕಡಿಮೆಯಾಗಿತ್ತು. ನಂತರ ಮತ್ತೆ ಹೆಚ್ಚಾಯಿತು. ಚೀನೀ ಪೂರೈಕೆದಾರರು ಆಪಲ್‌ನ ಒಟ್ಟು 40% ರಷ್ಟಿದ್ದಾರೆ ಎಂದು ಬರ್ನ್ಸ್ಟೈನ್ ಹೇಳಿದ್ದಾರೆ.