ಭಾರತ ಸೇನೆಗೆ ಅಪಾಚೆ, ಸೀಹಾಕ್ ಬಲ- ಬರಲಿದೆ ನೈಸರ್ಗಿಕ ಅನಿಲ: ಏನೇನು ಒಪ್ಪಂದ ನಡೆದಿದೆ? ಇಲ್ಲಿದೆ ಪೂರ್ಣ ವರದಿ

Public TV
5 Min Read
Trum Modi

– ಭಾರತ, ಅಮೆರಿಕ ಮಧ್ಯೆ 3 ಶತಕೋಟಿ ಡಾಲರ್ ಒಪ್ಪಂದ
– ಗ್ಯಾಸ್, ಔಷಧ, 5ಜಿ ಸ್ಪೆಕ್ಟ್ರಂ ಬಗ್ಗೆ ಚರ್ಚೆ
– ಔಷಧ, ವೈದ್ಯಕೀಯ ಉಪಕರಣಗಳ ಅಕ್ರಮ ಸರಬರಾಜಿಗೆ ತಡೆ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2 ದಿನಗಳ ಭಾರತ ಪ್ರವಾಸವನ್ನು ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿತ್ತು. ಟ್ರಂಪ್ ಪ್ರವಾಸದ ಭಾಗವಾಗಿ ಇಂದು ಮಹಾ ಮಾತುಕತೆಯೂ ನಡೆದಿದೆ. ಅಮೆರಿಕ ಹಾಗೂ ಭಾರತದ ಮಧ್ಯೆ ಭಾರೀ ಒಪ್ಪಂದ ನಡೆದಿದ್ದು, 21,625 ಕೋಟಿ ರೂ. ಒಪ್ಪಂದಕ್ಕೆ ಎರಡು ದೇಶಗಳು ಸಹಿ ಹಾಕಿವೆ.

ದೆಹಲಿಯ ಹೈದ್ರಾಬಾದ್ ಹೌಸ್‍ನಲ್ಲಿ ಇಂದು ಬೆಳಗ್ಗೆ ಒಂದೂವರೆ ತಾಸು ನಡೆದ ಮಾತುಕತೆಯಲ್ಲಿ ರಕ್ಷಣೆ, ಇಂಧನ ಹಾಗೂ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ 3 ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ ಬಲಪಡಿಸುವಿಕೆಯೇ ಇವತ್ತಿನ ಮಾತುಕತೆ ಪ್ರಮುಖ ಅಂಶವಾಗಿದೆ.

ವಿಶ್ವದ ಅತ್ಯಾಧುನಿಕ ಎಂಹೆಚ್ 60 ಸೀಹಾಕ್ ರೋಮಿಯೋ ಹೆಲಿಕಾಪ್ಟರ್‌ನಿಂದ ನೌಕಾಪಡೆಗೆ ಆನೆಬಲ ಬಂದಂತಾಗಿದೆ. ಮಾತುಕತೆ ವೇಳೆ ಸಿಎಎ ಬಗ್ಗೆ ನೇರವಾಗಿ ಪ್ರಸ್ತಾಪವಾಗದಿದ್ದರೂ, ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆದಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಕೈಗೊಂಡಿರುವ ಕ್ರಮಗಳನ್ನು ಟ್ರಂಪ್ ಪ್ರಶಂಸಿದ್ದಾರೆ. ಪಾಕಿಸ್ತಾನ ನೆಲದಿಂದ ಉಂಟಾಗುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಯಂತ್ರಿಸಲು ಉಭಯ ದೇಶಗಳು ಸಂಕಲ್ಪ ಮಾಡಿವೆ.

ಮೂರು ಒಪ್ಪಂದಗಳು:
ನೌಕಾಪಡೆಗೆ ಆನೆಬಲ ನೀಡಲಿರುವ ‘ಅಮೆರಿಕದ ರೋಮಿಯೋ’ ಭಾರತದ ಬತ್ತಳಿಕೆ ಸೇರಿದೆ. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಸಬ್ ಮೆರೀನ್ ನಿರೋಧಕ ಹಾಗೂ ಬಹುವಿಧ ಕಾರ್ಯವೈಖರಿಯ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್‌ಗಳ ಸೇರ್ಪಡೆ ಭಾರತ ಇನ್ನಷ್ಟು ಬಲಿಷ್ಠವಾಗಿದೆ.

roving helicopter
ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್‌

‘ರೋಮಿಯೋ’ ವೈಶಿಷ್ಟತೆ:
24 ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಖರೀದಿಸಲು ಒಪ್ಪಂದ ನಡೆದಿದೆ. ಈಗ ಲಭ್ಯವಿರುವ ನೌಕಾ ಹೆಲಿಕಾಪ್ಟರ್‌ಗಳಲ್ಲೇ ಇದು ಅತ್ಯಂತ ಆಧುನಿಕವಾಗಿರುವುದು ವಿಶೇಷ. ಭಾರತೀಯ ನೌಕಾಪಡೆಯಲ್ಲಿ ಈಗ ಇಂಗ್ಲೆಂಡಿನ ಹಳೆಯ ಮಾದರಿ ಹೆಲಿಕಾಪ್ಟರ್‌ಗಳಿವೆ. ಸೀಹಾಕ್ ಖರೀದಿ ಸಂಬಂಧ 2.6 ಬಿಲಿಯನ್ ಡಾಲರ್ (18,683 ಕೋಟಿ ರೂ.) ಮೊತ್ತದ ವ್ಯವಹಾರ ನಡೆದಿದ್ದು, ಸಾಗರದಾಳದ ಸಬ್ ಮೆರೀನ್‍ಗಳನ್ನು ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯ ಈ ಹೆಲಿಕಾಪ್ಟರ್ ಗಳಿಗಿವೆ. ಸಮುದ್ರದಲ್ಲಿ ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಲಿರುವುದರಿಂದ ಭಾರತದ ಜಲ ಪ್ರದೇಶ ಇನ್ನಷ್ಟು ಬಲಿಷ್ಠವಾಗಲಿದೆ. ವಿಶೇಷವಾಗಿ ಚೀನಾ ಯುದ್ಧನೌಕೆಗಳ ಮೇಲೆ ಕಣ್ಗಾವಲು ಇಡಲಿದೆ. ಅಮೆರಿಕದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿ ಮತ್ತು ಮಾರಾಟ ಸಂಸ್ಥೆ ಲಾಕ್ ಹೀಡ್ ಮಾರ್ಟಿನ್ ಈ ಹೆಲಿಕಾಪ್ಟರ್ ನಿರ್ಮಾಣ ಮಾಡುತ್ತಿದೆ.

ಅಪಾಚೆ ಹೆಲಿಕಾಪ್ಟರ್:
ನೌಕಾಪಡೆಯಂತೆ ಭಾರತೀಯ ವಾಯುಪಡೆಗೂ ಆನೆಬಲ ಬಂದಿದೆ. `ಹಾರುವ ಯುದ್ಧ ಟ್ಯಾಂಕ್‍ಗಳೆಂದೇ’ ಪ್ರಸಿದ್ಧಿ ಪಡೆದಿರುವ ಅಪಾಚೆ ಹೆಲಿಕಾಪ್ಟರ್‌ಗಳು ಖರೀದಿಗೆ ಒಪ್ಪಂದ ನಡೆಯಿತು. ಶತ್ರು ರಾಷ್ಟ್ರಗಳನ್ನು ನಡುಗಿಸುವ ಅಪಾಚೆ ಹೆಲಿಕಾಪ್ಟರ್ ಅನ್ನು ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ನಿರ್ಮಾಣ ಮಾಡಿದೆ.

Apache
ಅಪಾಚೆ ಹೆಲಿಕಾಪ್ಟರ್

ಅಪಾಚೆ ವಿಶೇಷತೆಗಳು:
ಭಾರತದ ಮೊದಲ ಪೂರ್ಣ ಪ್ರಮಾಣದ ಅಟ್ಯಾಕ್ ಹೆಲಿಕಾಪ್ಟರ್ ಇದಾಗಿದ್ದು, 2015ರಲ್ಲಿ 1.4 ಶತಕೋಟಿ ಡಾಲರ್ ಮೊತ್ತದ 22 ಅಪಾಚೆ ಹೆಲಿಕಾಪ್ಟರ್‌ಗಳಿಗಾಗಿ ಒಪ್ಪಂದ ನಡೆದಿದೆ. ಈಗಾಗಲೇ ಭಾರತೀಯ ವಾಯುಸೇನೆಯಲ್ಲಿ 17 ಅಪಾಚೆ ಹೆಲಿಕಾಪ್ಟರ್‌ಗಳ ಬಳಕೆ ಆಗುತ್ತಿದ್ದು, ಇದೇ ಮಾರ್ಚ್ ನಲ್ಲಿ ಉಳಿದ 5 ಹೆಲಿಕಾಪ್ಟರ್‌ಗಳು ಭಾರತಕ್ಕೆ ರವಾನೆ ಆಗಲಿದೆ.

ಭೂ ಸೇನೆಗಾಗಿ 6 ಹೆಲಿಕಾಪ್ಟರ್‌ಗಳ ಖರೀದಿಗೆ 6,680 ಕೋಟಿ ರೂ. ಒಪ್ಪಂದ ನಡೆದಿದೆ. 30 ಎಂಎಂ ಚೈನ್‍ಗನ್, ಎಐಎಂ- 92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್, ಸ್ಟೈಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಹೆಲಿಕಾಪ್ಟರಿಗೆ ಇದೆ. ನಿಖರ, ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡಬಹುದಾಗಿದೆ. ಬಿರುಗಾಳಿ, ಮಳೆ ಸೇರಿದಂತೆ ಯಾವುದೇ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆ ಮಾಡಬಲ್ಲದು. ಗುಡ್ಡಗಾಡು, ಕಿರಿದಾದ ಪ್ರದೇಶಗಳಲ್ಲೂ ಸುಲಭವಾಗಿ ಇಳಿಯಬಲ್ಲದು. ಯುದ್ಧಭೂಮಿಯಿಂದ ನಿಯಂತ್ರಣ ಭೂಮಿಗೆ ನೇರವಾಗಿ ಚಿತ್ರಗಳನ್ನು ಕಳುಹಿಸುವ ಸಾಮಥ್ರ್ಯ ಈ ಹೆಲಿಕಾಪ್ಟರ್‌ಗೆ ಇದೆ.

AH 64D Apache Longbow

ದ್ರವೀಕೃತ ನೈಸರ್ಗಿಕ ಅನಿಲ ಖರೀದಿ
ಮೂರನೇ ಒಪ್ಪಂದ ಇದಾಗಿದ್ದು, ಅಮೆರಿಕದ ಎಕ್ಸಾನ್ ಮೊಬಿಲ್-ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಡುವೆ ಈ ಒಪ್ಪಂದ ನಡೆದಿದೆ. ಪೈಪ್‍ಲೈನ್, ರಸ್ತೆ, ರೈಲು ಮಾರ್ಗ, ಸಮುದ್ರ ಮಾರ್ಗಗಳಲ್ಲಿ ಕಂಟೈನರ್‍ಗಳ ಮೂಲಕ ದ್ರವೀಕೃತ ನೈಸರ್ಗಿಕ ಅನಿಲ(ಎಲ್‍ಎನ್‍ಜಿ) ಸರಬರಾಜು ಆಗಲಿದೆ. ಅಮೆರಿಕದಿಂದ ಅತೀ ಹೆಚ್ಚು ಇಂಧನ ಖರೀದಿ ಮಾಡುತ್ತಿರುವ 6ನೇ ದೇಶ ಭಾರತವಾಗಿದ್ದು 2018ರಲ್ಲಿ 609 ದಶಲಕ್ಷ ಡಾಲರ್ ಮೌಲ್ಯದ ಕಚ್ಚಾತೈಲವನ್ನು ಭಾರತ ಖರೀದಿಸಿದೆ. ಜಗತ್ತಿನಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಖರೀದಿಸುತ್ತಿರುವ ನಾಲ್ಕನೇ ಅತೀ ದೊಡ್ಡ ರಾಷ್ಟ್ರ ಭಾರತವಾಗಿದ್ದು, ಸುವರ್ಣ ಚತುಷ್ಪತ ರಸ್ತೆಯಲ್ಲಿ ಎಲ್‍ಎನ್‍ಜಿ ಕೇಂದ್ರ ಸ್ಥಾಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಡೀಸೆಲ್ ಬದಲು ಭವಿಷ್ಯದಲ್ಲಿ ಟ್ರಕ್ ವಾಹನಗಳು ಎಲ್‍ಎನ್‍ಜಿ ಬಳಸಲು ಸರ್ಕಾರ ಉತ್ತೇಜಿಸಲಿದ್ದು, ಇಂಧನ ಬಳಕೆಯಲ್ಲಿ ಎಲ್‍ಎನ್‍ಜಿ ಪಾಲು 10 ವರ್ಷಗಳಲ್ಲಿ ಈಗಿರುವ ಶೇ.6.2ರಿಂದ ಶೇ 15 ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. -168 ಡಿಗ್ರಿ ಸೆಲ್ಸಿಯಸ್‍ನಲ್ಲಿ ದ್ರವೀಕೃತ ನೈಸರ್ಗಿಕ ಅನಿಲವನ್ನ ಪೂರೈಸಲಾಗುತ್ತದೆ.

ಬೇರೆ ಏನು ಒಪ್ಪಂದ ನಡೆದಿದೆ?
ಮೇಲೆ ತಿಳಿಸಿದ ಮೂರು ಒಪ್ಪಂದಗಳ ಜೊತೆಗೆ ಹಲವು ವಿಷಯಗಳೂ ಚರ್ಚೆ ಆಗಿವೆ. ಭಾರತ-ಅಮೆರಿಕ ನಡುವೆ ಔಷಧ ಸಹಕಾರ ಒಪ್ಪಂದ ನಡೆದಿದೆ. ಈ ಮೂಲಕ ಭಾರತದಿಂದ ಅಕ್ರಮವಾಗಿ ಔಷಧ, ವೈದ್ಯಕೀಯ ಉಪಕರಣಗಳ ಸರಬರಾಜು ತಡೆಗೆ ಉಭಯ ದೇಶಗಳು ಸಹಿ ಹಾಕಿವೆ. ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಹಾಗೂ ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಜೊತೆ ಒಡಂಬಡಿಕೆ ನಡೆದಿದೆ.

ಬೇರೊಂದು ರಾಷ್ಟ್ರದ ಮೂಲಕ ಅಕ್ರಮವಾಗಿ ಭಾರತದಿಂದ ಅಮೆರಿಕಕ್ಕೆ ಔಷಧ, ವೈದ್ಯಕೀಯ ಉಪಕರಣಗಳ ಪೂರೈಕೆ ಆಗುತ್ತಿದೆ. 2019ರಲ್ಲಿ ಈ ರೀತಿಯ 50 ಬಗೆಯ ಔಷಧಗಳು, ಉಪಕರಣಗಳ ಅಕ್ರಮ ಸಾಗಾಟ ನಡೆದಿದೆ. ಹೆಚ್‍ಐವಿ, ಕ್ಯಾನ್ಸರ್ ಮುಂತಾದ ರೋಗಗಳಿಗೆ ಅಮೆರಿಕ ನಿಗದಿಪಡಿಸಿದ ಗುಣಮಟ್ಟಕ್ಕಿಂತ ಕಡಿಮೆ ಗುಣಮಟ್ಟದ ಔಷಧ, ವೈದ್ಯಕೀಯ ಉಪಕರಣಗಳ ಮಾರಾಟ ನಡೆದಿದೆ.

5ಜಿ ಚರ್ಚೆ:
5ಜಿ ತರಂಗಾಂತರದ ಬಗ್ಗೆಯೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಭಾರತದಲ್ಲಿ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಬಾಕಿ ಇದ್ದು ಚೀನಾ ಮೂಲದ ಹುವಾವೇ ಕಂಪನಿಗೆ ಉಪಕರಣಗಳ ಬಳಕೆ ಅನುಮತಿ ನೀಡಲಾಗಿದೆ. ವಿಶ್ವದಲ್ಲಿ ಅತೀ ಹೆಚ್ಚು 5ಜಿ ಉಪಕರಣಗಳನ್ನು ಉತ್ಪಾದಿಸುತ್ತಿರುವ ಹುವವೇ ಒಟ್ಟು 60 ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಅಮೆರಿಕದಲ್ಲಿ ಹುವಾವೇ ಕಂಪನಿಗೆ ಟ್ರಂಪ್ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಭಾರತ ಸರ್ಕಾರ ಹುವಾವೇ ಕಂಪನಿಯನ್ನು 5ಜಿ ವ್ಯವಹಾರ ನಿಷೇಧಿಸಬೇಕೆಂದು ಟ್ರಂಪ್ ಪ್ರಸ್ತಾಪ ಮಾಡಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *