ನವದೆಹಲಿ: ಅಹಮದಾಬಾದ್, ಆಗ್ರಾ ಪ್ರವಾಸದ ಬಳಿಕ ದೆಹಲಿ ತೆರಳಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ದಾರ್ ಪಟೇಲ್ ರಸ್ತೆಯಲ್ಲಿರುವ ಐಟಿಸಿ ಮೌರ್ಯ ಹೋಟೆಲ್‍ನಲ್ಲಿ ಟ್ರಂಪ್ ವಾಸ್ತವ್ಯ ಹೂಡಲಿದ್ದಾರೆ. ‘ಚಾಣಕ್ಯ’ ಹೆಸರಿನ ಎರಡು ಬೆಡ್‍ರೂಂಗಳ ಐಷಾರಾಮಿ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‍ನಲ್ಲಿ ಟ್ರಂಪ್ ತಂಗಲಿದ್ದು ಮಂಗಳವಾರ ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
Advertisement
‘ಚಾಣಕ್ಯ’ ಹೆಸರಿನ ಪ್ರೆಸಿಡೆನ್ಶಿಯಲ್ ಸೂಟ್ ಒಂದು ಖಾಸಗಿ ಡ್ರಾಯಿಂಗ್ ರೂಮ್, ಒಂದು ಖಾಸಗಿ ಟೆರೇಸ್, ಜಿಮ್, ಖಾಸಗಿ ಪ್ರವೇಶ ಭಾಗವಿರುವ 12 ಆಸನಗಳ ಭೋಜನ ಸ್ಥಳ, ಅತಿ ವೇಗದ ಎಲಿವೆಟರ್, ಬೃಹತ್ ಸ್ನಾನದ ಕೊಠಡಿ, ಮಿನಿ ಸ್ಪಾ ಮತ್ತು ವಿಶೇಷ ಪರಿಣತ ಬಾಣಸಿಗ ಹಾಗೂ ಅತ್ಯುನ್ನತ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.
Advertisement
Advertisement
ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಡೊನಾಲ್ಡ್ ಟ್ರಂಪ್, ಈ ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಳ್ಳಲಿರುವ ಅಮೆರಿಕದ ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್, ಬರಾಕ್ ಒಬಾಮ ಈ ಹೋಟೆಲ್‍ನಲ್ಲಿ ಆತಿಥ್ಯ ಸ್ವೀಕರಿಸಿದ್ದರು. ಸುಮಾರು 4,600 ಚದರ ಅಡಿ ವಿಸ್ತೀರ್ಣ ಇರುವ ಈ ಚಾಣಕ್ಯ ಸೂಟ್‍ನಲ್ಲಿ ಒಂದು ರಾತ್ರಿ ಕಳೆಯಲು 8 ಲಕ್ಷ ರೂಪಾಯಿ ವೆಚ್ಚವಾಗಲಿದೆ.
Advertisement
ಟ್ರಂಪ್ ವಾಸ್ತವ್ಯದ ಹಿನ್ನಲೆ ಎರಡು ವಾರಕ್ಕೂ ಮುಂಚಿನಿಂದಲೇ ಹೋಟೆಲ್ ನಲ್ಲಿ ಎನ್‍ಎಸ್‍ಜಿ ಕಮಾಂಡೋಗಳು ಭದ್ರತಾ ವ್ಯವಸ್ಥೆ ಮೇಲೆ ನಿಗಾ ವಹಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಾಸ್ತವ್ಯದ ಸಂದರ್ಭದಲ್ಲಿ ಇಲ್ಲಿ ಇತರೆ ಅತಿಥಿಗಳ ವಾಸ್ತವ್ಯಕ್ಕೆ ಅವಕಾಶ ನೀಡದೇ ಹೋಟೆಲ್‍ನಲ್ಲಿರುವ ಎಲ್ಲ 438 ಕೊಠಡಿಗಳನ್ನು ಕೂಡ ಟ್ರಂಪ್ ಅವರಿಗಾಗಿಯೇ ಕಾಯ್ದಿರಿಸಲಾಗಿದೆ.
ಬಿಲ್ ಕ್ಲಿಂಟನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಶೇಷವಾಗಿ ಕ್ಲಿಂಟನ್ ಪ್ಲಾಟರ್ ಮತ್ತು ಚೆಲ್ಸಾ ಪ್ಲಾಟರ್ ಹೆಸರಿನ ವಿಶೇಷ ಆಹಾರವನ್ನು ಈ ಹೋಟೆಲ್ ಸಿದ್ದಪಡಿಸಿತ್ತು. ಬರಾಕ್ ಒಬಾಮ ಭಾರತಕ್ಕೆ ಎರಡು ಬಾರಿ ಭೇಟಿ ವೇಳೆ ಕೂಡ ಹೋಟೆಲ್ ‘ಒಬಾಮ ಪ್ಲಾಟರ್’ ಸಿದ್ಧಪಡಿಸಿತ್ತು. ಸದ್ಯ ಟ್ರಂಪ್ ಗಾಗಿ ‘ಟ್ರಂಪ್ ಪ್ಲಾಟರ್’ ಹೆಸರಿನ ವಿಶೇಷ ಸಸ್ಯಾಹಾರ ತಯಾರಿ ಮಾಡಲಾಗಿದೆ.
ಮೌರ್ಯ ಹೋಟೆಲಿನ 14ನೇ ಅಂತಸ್ತಿನಲ್ಲಿ ಟ್ರಂಪ್ ಉಳಿದುಕೊಳ್ಳಲಿದ್ದಾರೆ. ಸದ್ಯಕ್ಕೆ ವಿಶ್ವಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಗುಣಮಟ್ಟದ ಶುದ್ಧಗಾಳಿ ಒದಗಿಸುವ ಏಕೈಕ ಹೋಟೆಲ್ ಐಟಿಸಿ ಮೌರ್ಯ ಆಗಿದ್ದು, ಈ ಹಿಂದೆ ಟಿಬೆಟ್ ಧರ್ಮ ಗುರು ದಲೈ ಲಾಮಾ, ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾ ಸಹ ಈ ಹೋಟೆಲಿನಲ್ಲೇ ತಂಗಿದ್ದರು.