ಮತ್ತೊಂದು ಹೊಸಬರ ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದೆ. ನವ ಪ್ರತಿಭೆಗಳು ಸೇರಿ ರೂಪಿಸಿರುವ ‘ಕಪಟ ನಾಟಕ ಸೂತ್ರಧಾರಿ’ ಚಿತ್ರದ (Kapata Nataka Soothradaari) ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಧೀರಜ್ ಎಂ.ವಿ ನಿರ್ದೇಶನ ಹಾಗೂ ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಪಾದಾರ್ಪಣೆ ಮಾಡುತ್ತಿರುವ ಈ ಚೊಚ್ಚಲ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಡಾಲಿ ಧನಂಜಯ (Daali Dhananjay), ಸಂಗೀತಾ ಭಟ್, ನಿರ್ದೇಶಕರಾದ ಮಂಸೋರೆ, ಕೆ.ಎಂ ಚೈತನ್ಯ ಮುಂತಾದವರು ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಪೋಸ್ಟರ್ ಮೂಲಕವೇ ಒಟ್ಟಾರೆ ಕಥನದ ಬಗ್ಗೆ ಕುತೂಹಲ ಮೂಡಿಕೊಳ್ಳುತ್ತಲೇ ಮತ್ತೊಂದಷ್ಟು ವಿಚಾರಗಳು ಜಾಹೀರಾಗಿವೆ. ಇದನ್ನೂ ಓದಿ:ನಾನ್ಯಾಕೆ 2ನೇ ಮದುವೆಯಾಗಿಲ್ಲ: ಸೀಕ್ರೆಟ್ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ
‘ಕಪಟ ನಾಟಕ ಸೂತ್ರಧಾರಿ’ ಈ ಸಮಾಜಕ್ಕೆ ಕನ್ನಡಿ ಹಿಡಿದಂಥಾ ಕಥೆಯನ್ನೊಳಗೊಂಡಿರುವ ಚಿತ್ರ. ಇಲ್ಲಿ ಹಾಸುಹೊಕ್ಕಾಗಿರುವ ತಾರತಮ್ಯ, ಶೋಷಣೆಗಳ ಕಥಾ ಎಳೆಯನ್ನೊಳಗೊಂಡಿರುವ ಈ ಸಿನಿಮಾ ಸಾಮಾಜಿಕ, ರಾಜಕೀಯ ವಿಡಂಬನಾತ್ಮಕ ಡ್ರಾಮಾ ಜಾನರಿಗೆ ಒಗ್ಗಬಹುದಾದ ಸಿನಿಮಾ. ಇದರ ಚಿತ್ರೀಕರಣ ನಡೆದ ಸ್ಥಳ ಮತ್ತು ರೀತಿಯ ವಿವರ ನೋಡಿದರೆ, ಕಥೆಯ ಬಗೆಗೊಂದು ಕುತೂಹಲ ಮೂಡಿಕೊಳ್ಳುತ್ತೆ. ಇದರ ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. 25 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಅಂತಿಮ ಹಂತದಲ್ಲಿದೆ. ಇದನ್ನೂ ಓದಿ:ಕೋರ್ಟ್‌ಗೆ ಗೈರು, ಸಿನಿಮಾ ವೀಕ್ಷಣೆಗೆ ದರ್ಶನ್ ಹಾಜರ್
ನಿಮ್ಮ ಹೊಸ ಪ್ರಯತ್ನಕ್ಕೆ ಒಳ್ಳೆದಾಗಲಿ @mvdhiraj @Kannadafilmclub @muralishankark And all the best to the entire team of #kapatanatakasoothradaari pic.twitter.com/2sF5fp8yBk
— Dhananjaya (@Dhananjayaka) April 6, 2025
ವಿಶೇಷವೆಂದರೆ, 100ಕ್ಕೂ ಹೆಚ್ಚು ಮಂದಿ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಒಂದಷ್ಟು ಹೂಡಿಕೆದಾರರು ಸೇರಿ ವಿ ಎಸ್ ಕೆ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ಅಭಿರಾಮ ಅರ್ಜುನ ಈ ಸಿನಿಮಾದ ಬ್ಯುಸಿನೆಸ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಭಿನ್ನ ಧಾಟಿಯ, ಚೆಂದದ ಸಿನಿಮಾಗಳನ್ನು ರೂಪಿಸುವ, ಪ್ರತಿಭಾನ್ವಿತ ತಂಡಕ್ಕೆ ಸಾಥ್ ಕೊಡುವ ಮಹತ್ವಾಕಾಂಕ್ಷೆಯೊಂದಿಗೆ ಅಭಿರಾಮ ಚಿತ್ರರಂಗಕ್ಕೆ ಅಡಿಯಿರಿಸಿದ್ದಾರೆ.
ಮೂಲತಃ ಇಂಜಿನಿಯರ್ ಆಗಿರುವ ಧೀರಜ್ ಎಂ.ವಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸುನಿಲ್ ಕುಮಾರ್ ದೇಸಾಯಿ, ಮಠ ಗುರುಪ್ರಸಾದ್ ಮುಂತಾದವರ ಗರಡಿಯಲ್ಲಿ ಕಾರ್ಯನಿರ್ವಹಿಸಿರುವ ಧೀರಜ್ ಈಗಾಗಲೇ ಒಂದು ಕಿರುಚಿತ್ರಗಳನ್ನೂ ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ. ವೀರೇಶ್ ಎನ್ ಟಿ ಎ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಹಾಗೂ ಮುರಳಿ ಶಂಕರ್ ಸಹ ನಿರ್ದೇಶನವಿರುವ ಈ ಚಿತ್ರದಲ್ಲಿ ಹರೀಶ್ ರಂಗರಾವ್ ಕ್ರಿಯೇಟಿವ್ ಹೆಡ್ ಆಗಿ, ವರುಣ್ ಗುರುರಾಜ್ ಪ್ರೊಡಕ್ಷನ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ತಾರಾಗಣದ ಬಗೆಗಿನ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ.