ಡಾಲಿ ಧನಂಜಯ್ (Dali Dhananjay) ನಟನೆಯ ‘ಗುರುದೇವ್ ಹೊಯ್ಸಳ’ (Gurudev Hoysala) ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೆ, ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎನ್ನುವ ಮಾತೂ ಕೇಳಿ ಬಂದಿತ್ತು. ಈ ಎಲ್ಲದರ ಕುರಿತು ಕೆ.ಆರ್.ಜಿ ನಿರ್ಮಾಣ ಸಂಸ್ಥೆ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದೆ. ಆ ಪತ್ರ ಹೀಗಿದೆ..
ಕಳೆದ ವಾರ ಬಿಡುಗಡೆಯಾದ ನಮ್ಮ ಸಂಸ್ಥೆ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಸಿಕ್ಕಿದ್ದು, ಚಿತ್ರ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ಚುನಾವಣೆಗಳ ಕಾವು ಮತ್ತು ಐಪಿಎಲ್ ಜ್ವರದ ನಡುವೆಯೂ ಚಿತ್ರಕ್ಕೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ನೋಡಿ ಗೆಲ್ಲಿಸಿದ್ದಾರೆ. ಈ ಪ್ರಶಂಸೆಯಿಂದ ನಮ್ಮ ತಂಡಕ್ಕೆ ಸಾರ್ಥಕ್ಯದ ಭಾವ ಮೂಡಿದೆ.
ನಮ್ಮ ಕೆ ಆರ್ ಜಿ ಸ್ಟುಡಿಯೋಸ್ ನ ಮೊದಲ ಚಿತ್ರ ‘ರತ್ನನ್ ಪ್ರಪಂಚ’, ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇದನ್ನೂ ಓದಿ:‘ಕೆಜಿಎಫ್’ ರೈಟರ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಬೋಲ್ಡ್ ಬ್ಯೂಟಿ
ಈಗ ನಮ್ಮ ಸಂಸ್ಥೆಯ ಎರಡನೆಯ ಚಿತ್ರಕ್ಕೂ ಜನಮನ್ನಣೆ ಸಿಕ್ಕಿರುವುದು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮರ್ಯಾದೆ ಹತ್ಯೆ ಎಂಬ ಗಹನವಾದ ಸಮಸ್ಯೆಯ ಕುರಿತ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ನಮಗೆ ಈ ತರಹದ ಇನ್ನಷ್ಟು ಸೂಕ್ಷ್ಮ ಸಂವೇದನೆಯ ಚಿತ್ರಗಳನ್ನು ನಿರ್ಮಿಸುವುದಕ್ಕೆ ಪ್ರೇರೇಪಿಸಿದೆ.
ಈ ಎರಡೂ ಚಿತ್ರಗಳ ಯಶಸ್ಸಿನಿಂದ ಸದ್ಯದಲ್ಲೇ ನಮ್ಮ ಸಂಸ್ಥೆಯ ಮೂರನೆಯ ಪ್ರಯತ್ನವಾದ ಉತ್ತರಕಾಂಡ ಚಿತ್ರವನ್ನು ಸದ್ಯದಲ್ಲೇ ಶುರು ಮಾಡಲಿದ್ದೇವೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಡೆಯುವ ಈ ಕಥೆಯಲ್ಲೂ ಧನಂಜಯ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನಷ್ಟು ಚಿತ್ರಗಳನ್ನು ನಮ್ಮ ಸಂಸ್ಥೆಯಡಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಘೋಷಣೆಯಾಗಲಿದೆ.
ನಮ್ಮ ಈ ಗೆಲುವಿನಲ್ಲಿ ಸಿನಿಮಾ ಪ್ರೇಮಿಗಳು ಮತ್ತು ಮಾಧ್ಯಮದವರ ಪಾತ್ರ ಮಹತ್ವದ್ದಾಗಿದ್ದು, ನಮ್ಮ ಮುಂದಿನ ಕನಸುಗಳಿಗೆ ಅವರೇ ಸ್ಫೂರ್ತಿ ಎಂದರೆ ತಪ್ಪಿಲ್ಲ. ಜತೆಗೆ ವಿಮರ್ಶಕರು, ಸೋಷಿಯಲ್ ಮೀಡಿಯಾದ ಇನ್ಫ್ಲೂಯೆನ್ಸ್ ಪ್ರೋತ್ಸಾಹ ಮತ್ತು ಸಿನಿಮಾ ಪ್ರೀತಿ ಮರೆಯುವುದಕ್ಕೆ ಸಾಧ್ಯವೇ ಇಲ್ಲ.
ನಮಗೆ ಸಲಹೆ, ಸೂಚನೆ ಮತ್ತು ಅಪರಿಮಿತ ಪ್ರೀತಿ ತೋರಿಸುತ್ತಾ ಬಂದಿರುವ ಸಹೋದರರಾದ ವಿಜಯ್ ಕಿರಗಂದೂರು ಮತ್ತು ನನ್ನ ಎಲ್ಲ ಹಿತೈಷಿಗಳಿಗೂ ನಾನು ಚಿರಋಣಿ. ಇಂದು ಕೆ ಆರ್ ಜಿ ಸ್ಟುಡಿಯೋಸ್ ಮತ್ತು ಕೆ ಆರ್ ಜಿ ಕನೆಕ್ಟ್ಸ್ ಈ ಹಂತಕ್ಕೆ ಬೆಳೆಯುತ್ತಿರುವುದಕ್ಕೆ ನಮ್ಮ ತಂಡದ ಪ್ರೀತಿ ಮತ್ತು ಪರಿಶ್ರಮ ಸಹ ಕಾರಣ. ಮುಂದಿನ ದಿನಗಳಲ್ಲಿ ನಿಮ್ಮನ್ನು ಇನ್ನಷ್ಟು ಮನರಂಜಿಸುವುದಕ್ಕೆ ಉತ್ಸುಕರಾಗಿದ್ದೇವೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ (Karthik Gowda) ಹಾಗೂ ಯೋಗಿ ಜಿ ರಾಜ್ (Yogi G Raj) ತಿಳಿಸಿದ್ದಾರೆ.