ಡಾಲಿ ಧನಂಜಯ್ ಈಗ ‘ಕೋಟಿ’ ಸರದಾರ

Public TV
2 Min Read
Dhananjay

ನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಡಾಲಿ ಧನಂಜಯ (Dhananjay) ಅವರ ಹೊಸ ಕನ್ನಡ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪರಮ್‌ ನಿರ್ದೇಶನದ ಈ ಸಿನಿಮಾ ಹೆಸರು ಕೋಟಿ (Kotee). ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದವರು ಪರಮ್.‌ ಕಲರ್ಸ್‌ ಕನ್ನಡ ವಾಹಿನಿಯನ್ನು ಅವರು ಮುನ್ನಡೆಸುತ್ತಿದ್ದಾಗ ಅತಿ ಹೆಚ್ಚು ಕನ್ನಡ ಮೂಲದ ಕತೆಗಳನ್ನು ಅವರು ಕೊಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅಪ್ಪಟ ಕನ್ನಡದ ಕತೆಯೊಂದಿಗೆ ಅವರು ಮೊದಲ ಬಾರಿ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದಾರೆ.

Dolly Dhananjay 1

ಯುಗಾದಿ ಹಬ್ಬದ ದಿನವಾದ ಇಂದು ಕೋಟಿ ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ. ಐದುನೂರು ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷ. ತೀಕ್ಷ್ಣ ಕಣ್ಣುಗಳಿಂದ ಈ ಪೋಸ್ಟರ್‌ ಗಮನ ಸೆಳೆಯುತ್ತಿರುವುದಂತೂ ಹೌದು.‌

Parameshwar Gundkal 6

ಕೋಟಿ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕತೆ ಇದು ಎನ್ನುವುದನ್ನು ಶೀರ್ಷಿಕೆ ಹೇಳುವಂತಿದೆ. ದುಡ್ಡಿಗಾಗಿ ಒದ್ದಾಡುವ ಒಬ್ಬ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಈ ಸಿನಿಮಾ ಹೇಳಬಹುದು ಎಂಬ ಸೂಚನೆಯನ್ನು ಧನಂಜಯ ಆಗಲೇ ಕೊಟ್ಟಿದ್ದಾರೆ. ಹೊಯ್ಸಳ ನಂತರ ಬರುತ್ತಿರುವ ಅವರ ಮೊದಲ ಕನ್ನಡ ಚಿತ್ರ ಇದು. ಅಲ್ಲಿಗೆ ಡಾಲಿ ಧನಂಜಯ ಅವರ ಚಿತ್ರ ವರ್ಷದ ಅಂತರದ ನಂತರ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

Kotee

ಈ ಸಿನಿಮಾಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದು ಸ್ವತಃ ಪರಮ್‌ (Parameshwar Gundkal) ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ನೆರವೇರಿದಂತಾಗಿದೆ. ಕಳೆದ ವರ್ಷ ಟೆಲಿವಿಷನ್‌ ಚಾನೆಲ್ಲಿನಿಂದ ಹೊರಗೆ ಬಂದಾಗ ತಾನು ಹಿರಿತೆರೆಯಲ್ಲಿ ಕತೆಗಳನ್ನು ಹೇಳಬೇಕು ಎಂದು  ಅವರು ಆಸೆ ಪಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

 

ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿಯೋ ಸ್ಟುಡಿಯೋಸ್‌ ನ ಜ್ಯೋತಿ ದೇಶಪಾಂಡೆ. ಈ ವರ್ಷ ಒಂದಾದ ಮೇಲೆ ಒಂದು ಹಿಟ್‌ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ಜ್ಯೋತಿ ಮತ್ತು ಜಿಯೋ ಸ್ಟುಡಿಯೋಸ್ ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಸುಕಿ ವೈಭವ್‌ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್‌ ಬ್ರಹ್ಮನ್‌ ಛಾಯಾಗ್ರಹಣವಿದೆ. ಸಿನಿಮಾ ಶೀರ್ಷಿಕೆ ಅನಾವರಣ ಮಾಡುತ್ತಲೇ ಇದೇ ಶನಿವಾರ ಟೀಸರ್‌ ಬಿಡುಗಡೆಯಾಗಲಿದೆ ಎಂದು ತಂಡ ಹೇಳಿದೆ.‌

Share This Article