ಗದಗ: ಎಡ ಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ನವಲಗುಂದ ಪ್ರದೇಶದ ಬೆಣ್ಣೆಹಳ್ಳದ ಬಳಿ ಶ್ವಾನಗಳು ನೀರಿನ ಮಧ್ಯೆ ಸಿಲುಕಿಕೊಂಡು ರಕ್ಷಣೆಗಾಗಿ ಪರದಾಡುತ್ತಿದೆ.
ಮಳೆಗೆ ಬೆಣ್ಣೆಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಸುತ್ತಮುತ್ತಲ ಜಮೀನುಗಳು ನಡುಗಡ್ಡೆಯಂತಾಗಿದೆ. ಈ ನಡುವೆ ಶ್ವಾನಗಳೆರಡು ಪ್ರವಾಹದಲ್ಲಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಮೊರೆ ಇಡುತ್ತಿವೆ. ಜಮೀನಿನಲ್ಲಿ ಉಂಟಾದ ಪ್ರವಾಹಕ್ಕೆ ಬುಧವಾರ ರಾತ್ರಿಯಿಂದಲೂ ಶ್ವಾನಗಳು ನೀರಿನ ಮಧ್ಯೆ ಸಿಲುಕಿಕೊಂಡಿದೆ. ಎತ್ತ ನೋಡಿದರು ನೀರೇ ಕಾಣುತ್ತಿರುವ ಕಾರಣಕ್ಕೆ ಎತ್ತರದ ಪ್ರದೇಶಲ್ಲಿ ನಿಂತು ಪ್ರಾಣ ರಕ್ಷಿಸಿಕೊಂಡಿದೆ. ಆದರೆ ಸುತ್ತಲು ತುಂಬಿರುವ ನೀರಿನಿಂದ ಸುರಕ್ಷಿತ ಜಾಗಕ್ಕೆ ಬರಲು ಆಗದೆ ಆಹಾರ ಸಿಗದೆ ರೋಸಿಹೋಗಿವೆ.
ಶ್ವಾನಗಳ ಪರದಾಟ ನೋಡಿದ ಸ್ಥಳೀಯರು ಮಮ್ಮಲ ಮರುಗಿದ್ದು, ಪ್ರಾಣಿಗಳನ್ನು ರಕ್ಷಣೆ ಮಾಡಿ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶ್ವಾನಗಳು ಜೀವ ರಕ್ಷಣೆಗಾಗಿ ಪರದಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
ಪ್ರವಾಹ ಸೃಷ್ಟಿ ಮಾಡಿರುವ ಅವಾಂತರಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಎತ್ತ ನೋಡಿದರು ಬರೀ ನೀರು ಮಾತ್ರ ಕಾಣಸಿಗುತ್ತಿದೆ. ಅಲ್ಲದೆ ಅಲ್ಲಿನ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡಿದೆ. ಒಂದೆಡೆ ರಕ್ಷಣಾ ತಂಡಗಳು ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ, ಪ್ರವಾಹ ಸಂತ್ರಸ್ತರು ಆಹಾರ, ಆಶ್ರಯ ಸಿಗದೇ ತತ್ತರಿಸಿ ಹೋಗಿದ್ದಾರೆ. ಇನ್ನೊಂದೆಡೆ ಮೂಕ ಪ್ರಾಣಿಗಳು ಜೀವ ರಕ್ಷಣೆಗಾಗಿ ಪರದಾಡುತ್ತಿವೆ. ಸರಿಯಾಗಿ ಆಹಾರ ಸಿಗದೆ ಮೂಕರೋದನೆ ಪಡುತ್ತಿವೆ.