ಮಂಗಳೂರು: ಕೊಡಗಿನ ಜೋಡುಪಾಲದಲ್ಲಿಯೂ ದುರಂತ ಸಂಭವಿಸುವ ಮುನ್ನ ಮೂಕ ಪ್ರಾಣಿಗಳು ವಿಚಿತ್ರವಾಗಿ ವರ್ತಿಸಿದ್ದವು ಎಂಬ ಮಾಹಿತಿಯನ್ನು ಜೋಡಪಾಲದ ಸಂತ್ರಸ್ತರು ಹಂಚಿಕೊಂಡಿದ್ದಾರೆ.
ಸಾಕು ನಾಯಿಗಳು, ತೋಟದಲ್ಲಿದ್ದ ಮಂಗಗಳು ವಿಲಕ್ಷಣವಾಗಿ ಕೂಗು ಹಾಕಿದ್ದವು. ಈ ಬಗ್ಗೆ ದೂರದ ಮಂಗಳೂರಿಗೆ ಬಂದು ಸಂಬಂಧಿಕರ ಮನೆಯಲ್ಲಿ ನೆಲೆಸಿರುವ ಜೋಡುಪಾಲದ ಸಂತ್ರಸ್ತರಾದ ಶಿಶಿರ್ ಅವರು ತಮ್ಮ ಅನುಭವವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.
Advertisement
ಆಗಸ್ಟ್ 16ರ ಬೆಳಗ್ಗೆಯಿಂದಲೇ ನಾಯಿ ವಿಚಿತ್ರವಾಗಿ ಬೊಗಳುವುದು ಮತ್ತು ತಮ್ಮ ಮನೆಯ ಸುತ್ತಮುತ್ತ ಇದ್ದ ಮಂಗಗಳೆಲ್ಲವೂ ಕೂಗಾಡುತ್ತಿದ್ದವು. ರಾತ್ರಿಯ ವೇಳೆ ಆನೆಗಳು ಕೂಡ ಘೀಳಿಡುತ್ತಿದ್ದವು. ಕೊಡಗಿನಲ್ಲಿ ಪ್ರಾಣಿಗಳು ಕೂಗುವುದು ಸಹಜವಾಗಿರುವ ಕಾರಣ ನಾವು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದರು.
Advertisement
Advertisement
ಪ್ರಾಣಿಗಳು ಕೂಗಾಟ ಜಾಸ್ತಿಯಾಗುತ್ತಿದ್ದಂತೆ ಮನೆಯ ಹೊರಗಡೆ ಬಂದಾಗ ಭೂಮಿ ಒಳಭಾಗದಿಂದ ರೈಲು ಹೋಗುವ ಹಾಗೇ, ದೊಡ್ಡ ದೊಡ್ಡ ಬೆಟ್ಟ ಗುಡ್ಡಗಳೆಲ್ಲ ಕೊಚ್ಚಿಕೊಂಡು ಹೋಗುವ ಹಾಗೇ ಶಬ್ದಗಳು ಕೇಳಿಬರುತ್ತಿತ್ತು. ಅಲ್ಲಿದ್ದ ಸಣ್ಣ ಹೊಳೆಯೊಂದು ನೋಡ ನೋಡುತ್ತಲೇ 10 ಪಟ್ಟು ಹೆಚ್ಚಾಗಿ ಹರಿದು ತೋಟಗಳೆಲ್ಲ ನಾಶವಾಯಿತು. ಆದರೂ ಧೈರ್ಯ ಮಾಡಿ ನಮ್ಮ ಕುಟುಂಬ ಮನೆಯಲ್ಲೇ ತಂಗಿತ್ತು. ಮಾರನೇ ದಿನ 17 ರಂದು ಬೆಟ್ಟದಲ್ಲಿ ಸುಮಾರು 5 ರಿಂದ 6 ಬಾರಿ ಭಾರೀ ಸ್ಫೋಟ ಸಂಭವಿಸಿದ ಕೂಡಲೇ ನಾವು ಭಯಗೊಂಡು ಮಂಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದೇವೆ ಎಂದು ಶಿಶಿರ್ ವಿವರಿಸಿದರು.
Advertisement
ಜೋಡುಪಾಲದ ಸುತ್ತಮುತ್ತ ಒಟ್ಟು 700 ಮನೆಗಳಿದ್ದು, 3 ಸಾವಿರ ಜನರಿದ್ದಾರೆ. ಈ ದುರಂತ ನಡೆದ ಬಳಿಕ 150, 200 ಜನ ಬೆಟ್ಟ ಹತ್ತಿ ಮಡಿಕೇರಿಗೆ ತಲುಪಿದ್ದಾರೆ. 500 ರಿಂದ 1000 ಜನರು ದಕ್ಷಿಣ ಕನ್ನಡದ ಕಲ್ಲುಗುಂಡಿ, ಸಂಪಾಜೆ, ಅರಂತೋಡಿಗೆ ಬಂದು ನೆಲೆಸಿದ್ದಾರೆ ಎಂದು ವಿವರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv