ಕೋಲ್ಕತ್ತಾ: ಮನೆಯೊಂದಕ್ಕೆ ನುಗ್ಗಿದ ಚಿರತೆಯೊಂದು ಒಡತಿಯ ಮೇಲೆ ದಾಳಿ ನಡೆಸಿದ್ದಾಗ, ನಾಯಿ ಅದರ ಜೊತೆ ಹೋರಾಡಿ ಒಡತಿಯ ಜೀವ ಉಳಿಸಿದ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ನಡೆದಿದೆ.
ಡಾರ್ಜಿಲಿಂಗ್ ಜಿಲ್ಲೆಯ ಸೋನಾಡಾದಲ್ಲಿ ಬುಧವಾರದಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಾಯಿ ತನ್ನ ಪ್ರಾಣವನ್ನು ಲೆಕ್ಕಿಸದೆ ಒಡತಿಯ ರಕ್ಷಣೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿರತೆ ಜೊತೆ ಹೋರಾಡಿ ಗೆಲುವು ಸಾಧಿಸಿದ ನಾಯಿಯ ಸಾಹಸ ಎಲ್ಲರ ಮನ ಗೆದ್ದಿದೆ.
ಸೋನಾಡಾ ನಿವಾಸಿ ಅರುಣಾ ಲಾಮಾ ಅವರ ಮೇಲೆ ಚಿರತೆ ದಾಳಿ ನಡೆಸಿತ್ತು. ಅವರ ಮನೆಯಲ್ಲಿದ್ದ ಸ್ಟೋರ್ ರೂಮಿನಲ್ಲಿ ಶಬ್ಧ ಬಂದ ಕಾರಣಕ್ಕೆ ಮಹಿಳೆ ಬಾಗಿಲು ತೆರೆದು ನೋಡಿದ್ದಾರೆ. ಆದರೆ ಅಲ್ಲಿ ಚಿರತೆಯೊಂದು ಸೇರಿಕೊಂಡಿದ್ದ ವಿಚಾರ ಅವರಿಗೆ ತಿಳಿದಿರಲಿಲ್ಲ. ರೂಮ್ ಬಾಗಿಲು ತೆರೆಯುತ್ತಿದ್ದಂತೆ ಒಳಗಿದ್ದ ಚಿರತೆ, ಮಹಿಳೆ ಮೇಲೆ ದಾಳಿ ಮಾಡಿದೆ.
WB:A pet dog saved life of its owner,Aruna Lama who was attacked by a leopard on Aug 14 in Darjeeling.Aruna's daughter says,"as my mother was making her way to ground floor of our house she noticed a pair of glowing eyes,then the leopard attacked her but Tiger(pet dog) saved her" pic.twitter.com/JedUyCjGPd
— ANI (@ANI) August 17, 2019
ಈ ವೇಳೆ ಮಹಿಳೆಯ ಕಿರುಚಾಟ ಕೇಳಿ ಮನೆಯಲ್ಲಿ ಸಾಕಿದ್ದ ನಾಯಿ(ಟೈಗರ್) ಮಹಿಳೆಯ ರಕ್ಷಣೆಗೆ ಬಂದಿದೆ. ಮಹಿಳೆ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯನ್ನು ಓಡಿಸಲು ಯತ್ನಿಸಿದೆ. ದೊಡ್ಡದಾಗಿ ಬೊಗಳುತ್ತ ಚಿರತೆಯನ್ನು ಹೆದರಿಸಿದೆ. ನಾಯಿ ಬೊಗಳೋದನ್ನ ಕೇಳಿ ಚಿರತೆ ಭಯಗೊಂಡು ಮನೆಯಿಂದ ಪರಾರಿಯಾಗಿದೆ.
ದಾಳಿ ಪರಿಣಾಮ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಪ್ರಾಣವನ್ನು ಪಣಕ್ಕಿಟ್ಟು ಪ್ರೀತಿಯಿಂದ ಸಾಕಿದ ಒಡತಿಯ ಪ್ರಾಣ ಉಳಿಸಿ ನಾಯಿ ಭೇಷ್ ಎನಿಸಿಕೊಂಡಿದೆ. ಅನ್ನ ಹಾಕಿದ ಒಡತಿಯನ್ನು ರಕ್ಷಿಸಿದ ನಾಯಿಯ ಪ್ರಾಮಾಣಿಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.