ಬ್ಯಾಂಕ್ ಜನಾರ್ಧನ್ ಬಹಳ ಶಿಸ್ತಿನ ವ್ಯಕ್ತಿ – ಸಾಧು ಕೋಕಿಲ ಭಾವುಕ
ಕನ್ನಡ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಬ್ಯಾಂಕ್ ಜನಾರ್ಧನ್. ಅವರ ನಿಧನದ ಬಗ್ಗೆ ಕಲಾವಿದರಾದ ದೊಡ್ಡಣ್ಣ (Doddanna), ಡಿಂಗ್ರಿ ನಾಗರಾಜ್, ಸಾಧು ಕೋಕಿಲ, ವಿನೋದ್ ರಾಜ್ ಸಂತಾಪ ಸೂಚಿಸಿದ್ದಾರೆ. ಅವರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಬ್ಯಾಂಕ್ ಜನಾರ್ಧನ್ ನಿಧನಕ್ಕೆ ಟೆನ್ನಿನ್ ಕೃಷ್ಣ, ನಟಿ ಅಭಿನಯ ಭಾವುಕ
ಪಬ್ಲಿಕ್ ಟಿವಿಗೆ ದೊಡ್ಡಣ್ಣ ಮಾತನಾಡಿ, ನಾನು ಚಿತ್ರರಂಗಕ್ಕೆ ಬಂದು 46 ವರ್ಷಗಳಾಯ್ತು. ನನಗೆ 40 ವರ್ಷಗಳಿಂದ ಜನಾರ್ಧನ್ ಪರಿಚಿತರು. ಅವರೊಂದಿಗೆ ನಾನು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರೊಂದಿನ ಒಡನಾಟ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಜನಾರ್ಧನ್ ಒಬ್ಬ ಒಳ್ಳೆಯ ಪೋಷಕ ನಟನಾಗಿದ್ದರು. ಅವರು ಮುಂಚೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೆ ಅವರ ಹೆಸರೊಂದಿಗೆ ಬ್ಯಾಂಕ್ ಪದ ಸೇರಿಕೊಂಡಿದೆ. ಇದನ್ನೂ ಓದಿ: ಬ್ಯಾಂಕ್ ಜನಾರ್ಧನ್ ಅದ್ಭುತ ಅಭಿನಯದಿಂದ ನನ್ನ ಸಿನಿಪಯಣದಲ್ಲಿ ಯಶಸ್ವಿ ಹೆಜ್ಜೆ ಇಟ್ಟೆ: ಉಪೇಂದ್ರ
2 ವರ್ಷಗಳ ಹಿಂದೆ ನಟ ಮಂದೀಪ್ ರಾಯ್ ತೀರಿಕೊಂಡಾಗ ಅವರ ಅಂತಿಮ ದರ್ಶನಕ್ಕೆ ಬ್ಯಾಂಕ್ ಜನಾರ್ಧನ್ ಬಂದಿದ್ದರು. ಈ ವೇಳೆ ಅವರನ್ನು ಕಡೆಯದಾಗಿ ಭೇಟಿಯಾಗಿದ್ದೆ. ಆಗ ಸ್ವಲ್ಪ ಸೋತಂಗೆ ಕಂಡಿದ್ದರು. ಆಗ ಹುಷರಿಲ್ವಾ ಎಂದು ಕೇಳಿದ್ದೆ, ಸಣ್ಣ ಪುಟ್ಟ ಏನಾದರೂ ಇರುತ್ತೆ ಅಲ್ವಾ ಎಂದಿದ್ದರು. ಒಂದೂವರೆ ವರ್ಷದ ಬಳಿಕ ಅವರು ಸಿಗಲಿಲ್ಲ. ಇಂದು ಬೆಳಗ್ಗೆ ಅವರ ಸಾವಿನ ಸುದ್ದಿ ತಿಳಿದು ಆಘಾತವಾಯ್ತು. ಏನು ಮಾಡೋಕೆ ಆಗಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ. ಹುಟ್ಟಿದ್ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು ಎಂದು ಭಾವುಕವಾಗಿ ದೊಡ್ಡಣ್ಣ ಮಾತನಾಡಿದ್ದಾರೆ.
ಡಿಂಗ್ರಿ ನಾಗರಾಜ್ ಮಾತನಾಡಿ, ಬ್ಯಾಂಕ್ ಜನಾರ್ಧನ್ (Bank Janardhan) ಹಾಗೂ ನನ್ನದು ಸುಮಾರು 40 ವರ್ಷದ ಸ್ನೇಹವಾಗಿತ್ತು. ನನ್ನ ನಾಟಕದ ಟೀಮ್‌ನಲ್ಲಿ ಹಲವು ನಾಟಕಗಳನ್ನ ಅವರು ಮಾಡಿದ್ದರು. ಜಗ್ಗೇಶ್, ಕಾಶಿನಾಥ್ ಅವರ ಸಿನಿಮಾದಲ್ಲಿ ನಟಿಸಿ ಅವರು ಕೂಡ ತುಂಬಾ ಜನಪ್ರಿಯವಾದರು. ಬ್ಯಾಂಕ್ ಕೆಲಸದ ಜೊತೆಗೆ ನಟನೆ ತುಂಬಾ ಇಷ್ಟಪಡುತ್ತಿದ್ದರು. ಈ ಹಿಂದೆ ಹಾಸ್ಯ ಪೋಷಕನಟರ ಅಸೋಸಿಯೇಷನ್ ಮಾಡಿದ್ವಿ. ಅದಕ್ಕೆ ಬ್ಯಾಂಕ್ ಜನಾರ್ದನ್‌ರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ವಿ.
ಕಳೆದ 2 ವರ್ಷಗಳಿಂದ ನಿಲ್ಲೋದ್ದಕ್ಕೆ ಆಗ್ತಿರಲಿಲ್ಲ. ಹಾಗಾಗಿ ಸಿನಿಮಾದಿಂದ ದೂರವಾದರು. ಮಗನಿಗೆ ಡಬ್ಬಿಂಗ್ ಸ್ಟುಡಿಯೋ ಮಾಡಿ ಕೊಟ್ಟಿದ್ದರು. ಅದು ಅಷ್ಟೊಂದು ಸರಿಯಾಗಿ ನಡೆಯುತ್ತಿರಲಿಲ್ಲ. ಅವರಿಗೆ ಆ ಕೊರಗೂ ಇತ್ತು. ಪತ್ನಿ ತೀರಿ ಹೋದ ಮೇಲೆ ಸ್ವಲ್ಪ ಮಂಕಾಗಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಡಿಂಗ್ರಿ ನಾಗರಾಜ್ ಸ್ಮರಿಸಿದ್ದಾರೆ.
ಬ್ಯಾಂಕ್ ಜನಾರ್ಧನ್ ಬಹಳ ಶಿಸ್ತುವುಳ್ಳ ವ್ಯಕ್ತಿಯಾಗಿದ್ದರು. ಅವರು ಧ್ವನಿ ಅಂತೂ ಮರೆಯೋಕೆ ಆಗಲ್ಲ, ನಾವೆಲ್ಲಾ ಚಿತ್ರರಂಗಕ್ಕೆ ಜೊತೆ ಜೊತೆಯಲ್ಲಿ ಬಂದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಧು ಕೋಕಿಲ ಸಂತಾಪ ಸೂಚಿಸಿದ್ದಾರೆ.
ಈ ವೇಳೆ, ಬ್ಯಾಂಕ್ ಜನಾರ್ಧನ್ ಜೊತೆಗಿನ ಒಡನಾಟ ನೆನೆದು ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ. ಕನ್ನಡ ಚಿತ್ರರಂಗ ಕಂಡ ಒಬ್ಬ ಅದ್ಭುತ ಹಾಸ್ಯ ಕಲಾವಿದರಾಗಿದ್ರು. ಸಿನಿಮಾದಲ್ಲಿ ರಂಜಿಸಿದವರನ್ನ ನಾವು ಕಳೆದುಕೊಂಡಿದ್ದೇವೆ. ಬೆರಳೆಣಿಕೆಯ ಶ್ರೇಷ್ಠ ಕಲಾವಿದರಲ್ಲಿ ಬ್ಯಾಂಕ್ ಜನಾರ್ಧನ್ ಒಬ್ಬರು ಆಗಿದ್ದರು. ಅವರ ನಿಧನ ಕರ್ನಾಟಕ ಚಲನಚಿತ್ರ ರಂಗಕ್ಕೆ ಭಾರೀ ಆಘಾತ ತಂದಿದೆ. ಅವರಿಲ್ಲದೇ ಇರೋದು ತುಂಬಾ ನೋವು ತಂದಿದೆ. ಕೆಲವು ದಿನಗಳ ಹಿಂದೆ ನನ್ನ ಆರೋಗ್ಯ ವಿಚಾರಿಸಲು ಅವರು ಫೋನ್ ಮಾಡಿದ್ದರು. ಆರೋಗ್ಯ ಸರಿ ಇಲ್ವಂತೆ ನಿನಗೆ ನೀನು ಚೆನ್ನಾಗಿರಬೇಕು ಅಂದರು. ಈಗ ನೋಡಿದ್ರೆ ನಮ್ಮ ಜೊತೆ ಅವರು ಇಲ್ಲ ಅನ್ನೋದು ನೋವು ತಂದಿದೆ ಎಂದಿದ್ದಾರೆ.