ಬೆಂಗಳೂರು: ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಲು ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಕರವೇ ಕಾರ್ಯಕರ್ತರು-ವೈದ್ಯರ ವಾಗ್ವಾದ ಇಂಗ್ಲಿಷ್-ಕನ್ನಡ ಹೋರಾಟದ ರೂಪ ಪಡೆದಿತ್ತು. ಅಲ್ಲದೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಮಿಂಟೋ ಆಸ್ಪತ್ರೆ ಸಿಬ್ಬಂದಿ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸಿದ್ದರು.
ಇತ್ತ ವೈದ್ಯರ ನಡೆಯನ್ನು ಖಂಡಿಸಿ ಕರವೇ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಲಿದ್ದಾರೆ. ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್ ವರೆಗೆ ಕರವೇ ರ‍್ಯಾಲಿ ನಡೆಸಲಿದ್ದಾರೆ. ರ‍್ಯಾಲಿ ಸಾಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿವೆ.
ಡಿಸಿಎಂ ಅಶ್ವಥ್ ನಾರಾಯಣ ಅವರ ಸಂಧಾನಕ್ಕೂ ವೈದ್ಯರು ಒಪ್ಪಿಲ್ಲ. ಇದೀಗ ರಾಜ್ಯವ್ಯಾಪಿ ಪ್ರತಿಭಟನೆಗೆ ಮುಂದಾಗಿದ್ದು ಇಂದು ಒಪಿಡಿ ಬಂದ್ ಮಾಡಿದ್ದಾರೆ. ಈ ಮಧ್ಯೆ ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ಪರಿಹಾರ ಘೋಷಿಸಿರುವ ಅಶ್ವಥ್ ನಾರಾಯಣ, ದೃಷ್ಟಿ ದೋಷ ಇರುವವರಿಗೆ ಸರ್ಕಾರದಿಂದಲೇ ಚಿಕಿತ್ಸೆ ನೀಡುತ್ತೇವೆ ಅಂದಿದ್ದಾರೆ. ಆಸ್ಪತ್ರೆಯಲ್ಲಿ ಹೆಚ್ಚಿನ ಸಿಸಿಟಿವಿ ಅಳವಡಿಕೆ, ವೈದ್ಯರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆಗಳಿಂದ ಭದ್ರತೆ ನೀಡಲು ಡಿಸಿಎಂ ಸೂಚಿಸಿದ್ದಾರೆ.