ನವದೆಹಲಿ: ಗರ್ಭಿಣಿಯೊಬ್ಬರು ತುರ್ತು ಸರ್ಜರಿಗಾಗಿ ಆಪರೇಷನ್ ಟೇಬಲ್ ಮೇಲೆ ಮಲಗಿದ್ದ ವೇಳೆಯೇ ವೈದ್ಯರು ಜೋರು ಧ್ವನಿಯಲ್ಲಿ ಜಗಳವಾಡಿರೋ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಈ ಘಟನೆ ಮಂಗಳವಾರದಂದು ಜೋಧ್‍ಪುರ್‍ನ ಉಮೇಯ್ದ್ ಆಸ್ಪತ್ರೆಯಲ್ಲಿ ನಡೆದಿದೆ. ಆಪರೇಷನ್ ಟೇಬಲ್ ಬದಿಯಲ್ಲೇ ವೈದ್ಯರಿಬ್ಬರು ಒಬ್ಬರ ಹೆಸರನ್ನೊಬ್ಬರು ಹಿಡಿದು ಜೋರಾಗಿ ಜಗಳವಾಡಿದ್ದಾರೆ. ಇದನ್ನ ಅಲ್ಲಿನ ಸಿಬ್ಬಂದಿಯೊಬ್ಬರು ಮಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಕೊನೆಗೆ ವೈದ್ಯರಲ್ಲೊಬ್ಬರು ಹೆರಿಗೆ ಮಾಡಿಸಿದರಾದ್ರೂ ಮಗು ಬದುಕುಳಿಯಲಿಲ್ಲ.
ಮಗುವಿನ ಹೃದಯ ಬಡಿತ ಕ್ಷೀಣವಾಗಿದ್ದರಿಂದ ಗರ್ಭಿಣಿಗೆ ತುರ್ತು ಸಿಜೇರಿಯನ್‍ಗೆ ಏರ್ಪಡಿಸಲಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯರಾದ ಅಶೋಕ್ ನೈನ್ವಾಲ್ ಹಾಗೂ ಎಮ್‍ಎಲ್ ತಕ್ ನಡುವೆ ಆಪರೇಷನ್ ರೂಮಿನಲ್ಲೇ ಜಗಳ ಶುರುವಾಗಿದೆ.
ಗರ್ಭಿಣಿ ಶಸ್ತ್ರಚಿಕಿತ್ಸೆಗೂ ಮುನ್ನ ಏನಾದರೂ ತಿಂದಿದ್ದಾರೆಯೇ ಎಂದು ಪ್ರಸೂತಿತಜ್ಞರಾದ ಡಾ ನೈನ್ವಾಲ್ ಪ್ರಶ್ನಿಸಿದಾಗ ಜಗಳ ಶುರುವಾಗಿದೆ. ಅರವಳಿಕೆ ತಜ್ಞರಾದ ಡಾ ತಕ್ ಕಿರಿಯ ವೈದ್ಯರೊಬ್ಬರಿಂದ ಪರೀಕ್ಷೆ ನಡೆಸಲು ಮುಂದಾಗಿದ್ದು, ಡಾ ನೈನ್ವಾಲ್ ಇದನ್ನ ವಿರೋಧಿಸಿದ್ದಾರೆ. “ನೀನು ನಿನ್ನ ಮಿತಿಯಲ್ಲಿರು” ಅಂತ ಡಾ. ನೈನ್ವಾಲ್ ಅರವಳಿಕೆ ತಜ್ಞರ ಮೇಲೆ ಕಿರುಚಾಡೋದನ್ನ ವಿಡಿಯೋದಲ್ಲಿ ನೋಡಬಹುದು.
ನಂತರ ವಾಗ್ವಾದ ತಾರಕಕ್ಕೇರಿದ್ದು, ಬೀದಿ ಜಗಳದಂತೆ ಆಪರೇಷನ್ ಥಿಯೆಟರ್‍ನಲ್ಲೇ ವೈದ್ಯರು ಹೆಸರು ಹಿಡಿದು ಜಗಳವಾಡಿದ್ದಾರೆ. ಒಬ್ಬ ನರ್ಸ್ ಹಾಗೂ ಮತ್ತೊಬ್ಬ ವೈದ್ಯರು ಅವರನ್ನ ತಡೆಯಲು ಯತ್ನಿಸಿದ್ದು, ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂದು ವೈದ್ಯರಿಗೆ ಮನವರಿಕೆ ಮಾಡಿಕೊಡೋದನ್ನ ಕಾಣಬಹುದು.
ಸದ್ಯ ಡಾ ನೈನ್ವಾಲ್ ಹಾಗೂ ಡಾ ತಕ್ ರನ್ನ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.