ಹಾವೇರಿ: ಉಪ್ಪಿಟ್ಟು ತಿನ್ನುವಾಗ ಅಜ್ಜಿಯೊಬ್ಬರು 3 ಸೆಂಮೀ ಸೂಜಿಯನ್ನೇ ನುಂಗಿದ್ದು, ವೈದ್ಯರು ಒಂದು ತಿಂಗಳ ನಂತರ ಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ ಬಳಿಯ ಬಸಾಪುರ ಗ್ರಾಮದ ಅಜ್ಜಿ ಪಾರವ್ವ ಬಾವಿಕಟ್ಟಿ (70) ಉಪ್ಪಿಟ್ಟು ತಿನ್ನುವಾಗ 3 ಸೆಂಮೀ. ಉದ್ದದ ಸೂಜಿ ಗಂಟಲಿನಲ್ಲಿ ಸಿಕ್ಕಾಕೊಂಡು ತೊಂದರೆ ಅನುಭವಿಸಿದ್ದಾಳೆ. ಕಳೆದ ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು ಏನೋ ಚುಚ್ಚಿರಬೇಕೆಂದು ಪಾರವ್ವ ಅದನ್ನು ನಿರ್ಲಕ್ಷ ಮಾಡಿದ್ದಾಳೆ.
Advertisement
ಸ್ವಲ್ಪ ದಿನಗಳ ನಂತರ ಅಜ್ಜಿ ಪಾರವ್ವಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹಾಗಾಗಿ ಹಾವೇರಿಯ ಮಲ್ಲಾಡದ ರುದ್ರಮ್ಮ ಮೆಮೋರಿಯಲ್ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯ ವೈದ್ಯ ಡಾ.ಗಿರೀಶ್ ಮಲ್ಲಾಡದ್ ಎಂಡೋಸ್ಕೋಪಿ ಚಿಕಿತ್ಸೆ ಮಾಡಿ 3 ಸೆಂಮೀ ಉದ್ದದ ಸೂಜಿಯನ್ನ ಪತ್ತೆಹಚ್ಚಿದ್ದಾರೆ. ಅಲ್ಲದೇ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಯಶಸ್ವಿಯಾಗಿ ಸೂಜಿಯನ್ನು ಹೊರತೆಗೆದಿದ್ದಾರೆ.
Advertisement
ಒಂದು ತಿಂಗಳ ಹಿಂದೆ ಮೂರು ಸೆಂ.ಮೀ. ಉದ್ದದ ಸೂಜಿ ಗಂಟಲಿನಲ್ಲಿ ಸಿಕ್ಕಿಕೊಂಡು ಅಜ್ಜಿ ಪಡಬಾರದ ಪಾಡು ಪಟ್ಟಿದ್ದರು. ಆದರೆ ವೈದ್ಯರು ಮಾಡಿದ ಚಮತ್ಕಾರಿ ಚಿಕಿತ್ಸೆಯಿಂದ ಪಾರವ್ವ ಗುಣಮುಖರಾಗಿ ತಮ್ಮ ಸ್ವಗ್ರಾಮಕ್ಕೆ ತೆರಳಿದಳು.