ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ-2017ನ್ನು ವಿರೋಧಿಸಿ ಇಂದು ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತೀಯ ವೈದ್ಯಕೀಯ ಪರಿಷತ್ ಮುಷ್ಕರಕ್ಕೆ ಕರೆ ನೀಡಿದೆ.
ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸತತ 12 ಗಂಟೆಗಳ ಕಾಲ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಇರಲಿದೆ. ಇನ್ನು ರಾಜ್ಯದಲ್ಲೂ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ. ಆದ್ರೆ ತುರ್ತು ಚಿಕಿತ್ಸಾ ವಿಭಾಗ, ಮೆಡಿಕಲ್ ಸ್ಟೋರ್ ಗಳು ಮತ್ತು ಒಳರೋಗಿಗಳ ವಿಭಾಗ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
Advertisement
Advertisement
ಈ ವಿಚಾರವಾಗಿ ಸೋಮವಾರ ಕೇಂದ್ರ ವೈದ್ಯಕೀಯ ಸಚಿವ ಜೆಪಿ ನಡ್ಡಾರೊಂದಿಗೆ ವೈದ್ಯಕೀಯ ಸಂಘ ನಡೆಸಿದ ಮಾತುಕತೆಯೂ ವಿಫಲವಾಗಿದೆ. ಈ ಹಿಂದೆ ವೈದ್ಯಕೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಭಾರತೀಯ ವೈದ್ಯಕೀಯ ಪರಿಷತ್ ಮೇಲಿತ್ತು. ಆದ್ರೆ ಎಂಸಿಐ ಮೇಲೆ ಭ್ರಷ್ಟಾಚಾರ ಆರೋಪವಿದ್ದು, ಈ ಹಿಂದೆ ಚೇರ್‍ಮನ್ ಆಗಿದ್ದ ಕೇತನ್ ದೇಸಾಯಿಯವರನ್ನು ಸಿಬಿಐ ಬಂಧಿಸಿತ್ತು. ಅಂದಿನಿಂದಲೂ ಈ ಸಂಸ್ಥೆಯ ಜಾಗದಲ್ಲಿ ಹೊಸ ಸಂಸ್ಥೆ ಸ್ಥಾಪನೆಗೆ ಬೇಡಿಕೆ ಇತ್ತು. ಹೀಗಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರ ಮತ್ತು ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ಮುಂದಾಗಿದೆ.
Advertisement
Advertisement
ಡಿಸೆಂಬರ್ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಬೆಂಬಲ ದೊರೆತಿದ್ದು, ಕಳೆದ ಡಿಸೆಂಬರ್ 19ರಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇನ್ನು ಇಂದು ಈ ಮಸೂದೆ ಸಂಬಂಧ ಚರ್ಚೆ ನಡೆಯಲಿದ್ದು, ಖಾಸಗಿ ವೈದ್ಯರು ಕರಾಳ ದಿನ ಆಚರಣೆಗೆ ಕರೆ ಕೊಟ್ಟಿದ್ದಾರೆ.