ಕಲಬುರಗಿ: ಹೆಣ್ಣು ಮಗು ಹುಟ್ಟಿದರೂ ನಿಮಗೆ ಗಂಡು ಮಗು ಹುಟ್ಟಿದೆ ಎಂದು ವೈದ್ಯರು ದಂಪತಿಗೆ ಹೇಳಿ ಎಡವಟ್ಟು ಮಾಡಿಕೊಂಡಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಜೇವರ್ಗಿ ತಾಲೂಕಿನ ಕೋಣಶಿರಸಗಿ ಗ್ರಾಮದ ನಿವಾಸಿ ನಂದಮ್ಮ ಅವರನ್ನು ಎರಡು ದಿನಗಳ ಹಿಂದೆ ಹೆರಿಗೆಗೆಂದು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಗುರುವಾರ ರಾತ್ರಿ ನಂದಮ್ಮಗೆ ಹೆರಿಗೆಯಾಗಿದೆ. ಇದೇ ಸಂದರ್ಭದಲ್ಲಿ ಬೇರೊಬ್ಬ ಗರ್ಭಿಣಿಗೂ ಮಗು ಹುಟ್ಟಿದೆ. ವೈದ್ಯರು ಎರಡು ಮಗುವನ್ನು ಐಸಿಯುನಲ್ಲಿ ಇಟ್ಟಿದ್ದಾರೆ.
ಹೆರಿಗೆಯಾದ ಬಳಿಕ ನಂದಮ್ಮ ಕುಟುಂಬಸ್ಥರು ಮಗು ತೋರಿಸುವಂತೆ ಕೇಳಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ತಂದು ಕೊಟ್ಟಿದ್ದಾರೆ. ನಂತರ 15 ನಿಮಿಷ ಬಿಟ್ಟು ಬಂದು ಮಗು ನಿಮ್ಮದಲ್ಲ ಟೋಕನ್ ನಂಬರ್ ಬದಲಾಗಿದೆ ಎಂದು ತಿಳಿಸಿದ್ದಾರೆ. ಕುಟುಂಬಸ್ಥರು ತಕ್ಷಣ ನೀವು ಸುಳ್ಳು ಹೇಳುತ್ತಿದ್ದೀರಿ ನಮಗೆ ಗಂಡು ಮಗು ಜನಿಸಿರುವುದು ಎಂದು ಆಕ್ರೋಶಗೊಂಡು ಆಸ್ಪತ್ರೆಯ ಸಿಬ್ಬಂದಿ ಜೊತೆ ಜಗಳವಾಡಿದ್ದಾರೆ. ಇಬ್ಬರ ನಡುವೆ ಕೆಲ ಸಮಯ ವಾಗ್ವಾದ ನಡೆದಿದೆ.
ವೈದ್ಯರು ಬಂದು ಒಂದೇ ಸಮಯಕ್ಕೆ ಎರಡು ಹೆರಿಗೆಯಾಗಿದ್ದರಿಂದ ಗೊಂದಲವಾಗಿದೆ. ಈಗ ವೈದ್ಯಕೀಯ ಪರೀಕ್ಷೆ ನಡೆಸುತ್ತೇವೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಗೊಂದಲ ಬಗೆಹರಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಕುಟುಂಬಸ್ಥರು ಕೂಡ ಸಮ್ಮತಿಸಿದ್ದರು. ವೈದ್ಯರು ಪರೀಕ್ಷೆ ಮಾಡಿ ನಿಮಗೆ ಹೆಣ್ಣು ಮಗು ಜನಿಸಿರುವುದು ಎಂದು ಪೋಷಕರಿಗೆ ತಂದು ಕೊಟ್ಟಿದ್ದಾರೆ. ಆದರೆ ಪೋಷಕರು ನಮಗೆ ಹೆಣ್ಣು-ಗಂಡು ಎಂದು ಭೇದವಿಲ್ಲ ನಮ್ಮ ಮಗು ಯಾವುದು ಎಂದು ನಿರೂಪಿಸಿ ಎಂದು ಕೇಳಿಕೊಂಡಿದ್ದಾರೆ. ಸದ್ಯಕ್ಕೆ ಎರಡು ಮಕ್ಕಳನ್ನು ಚಿಕಿತ್ಸೆಗಾಗಿ ಐಸಿಯುನಲ್ಲಿ ಇಟ್ಟಿದ್ದಾರೆ.