Connect with us

ಆಪರೇಷನ್ ಮಾಡದೆ 8 ತಿಂಗಳ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿ ಹೊರತೆಗೆದ ಕೊಪ್ಪಳದ ವೈದ್ಯರು

ಆಪರೇಷನ್ ಮಾಡದೆ 8 ತಿಂಗಳ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿ ಹೊರತೆಗೆದ ಕೊಪ್ಪಳದ ವೈದ್ಯರು

ಕೊಪ್ಪಳ: ಎಂಟು ತಿಂಗಳ ಮಗುವೊಂದು ಆಕಸ್ಮಿಕವಾಗಿ ನುಂಗಿದ್ದ ಮೆಂಥೋಪ್ಲಸ್ ಡಬ್ಬಿಯನ್ನ ಆಪರೇಷನ್ ಇಲ್ಲದೆ ಹೊರತೆಗೆಯುವಲ್ಲಿ ಕೊಪ್ಪಳದ ಕಿಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ.

ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಎಂಟು ತಿಂಗಳ ಮಗು ಮೆಂಥೋಪ್ಲಸ್ ಡಬ್ಬಿ ನುಂಗಿದ ಪರಿಣಾಮ ಸಾವು ಬದುಕಿನ ಮಧ್ಯೆ ಹೋರಾಡ್ತಿತ್ತು. ವೈದ್ಯರು ಶಸ್ತ್ರಚಿಕಿತ್ಸೆಯಿಲ್ಲದೆ ಫಾರಿನ್ ಬಾಡಿ ರಿಮೂವಲ್ ಫೋರ್ಸೆಪ್ಸ್ ಸಾಧನವನ್ನ ಬಳಸಿ ಡಬ್ಬಿಯನ್ನ ಹೊರತೆಗೆಯೋ ಮೂಲಕ ಮಗುವನ್ನ ಬದುಕುಳಿಸಿದ್ದಾರೆ.

ಯಲಬುರ್ಗಾ ತಾಲೂಕಿನ ಹುಣಿಸ್ಯಾಳ ಗ್ರಾಮದ ಶಿವಶರಣಪ್ಪ ಅವರ ಗಂಡು ಮಗು ಶುಕ್ರವಾರ ನಸುಕಿನ ಜಾವ ಆಟವಾಡ್ತಿದ್ದಾಗ ಮೆಂಥೋಪ್ಲಸ್ ಡಬ್ಬಿಯನ್ನ ನುಂಗಿತ್ತು. ನಿದ್ದೆ ಮಂಪರಿನಲ್ಲಿದ ಶಿವಶರಣಪ್ಪ ದಂಪತಿ ಮಗು ಅಳದಿದ್ದಾಗ, ಬಾಯಿಯಿಂದ ಜೋಲ್ಲು ಬರೋದನ್ನ ಗಮನಿಸಿ ಮಗು ಏನೋ ಪ್ಲಾಸ್ಟಿಕ್ ಡಬ್ಬಿಯನ್ನ ನುಂಗಿದೆ ಅಂತ ಕೈಯಿಂದ ತಗೆಯಲು ಪ್ರಯತ್ನಿಸಿದ್ರು. ಅದು ಮತ್ತಷ್ಟು ಒಳಗಡೆ ಹೋಗಿ ಸಿಲುಕಿಕೊಂಡಿತ್ತು. ಬಳಿಕ ಪೋಷಕರು ಕೊಪ್ಪಳದ ಜಿಲ್ಲಾಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಆಗ ಡಾ. ಮಲ್ಲಿಕಾರ್ಜುನ್ ಹಾಗೂ ವೈದ್ಯರ ತಂಡ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿಯನ್ನ ಫಾರಿನ್ ಬಾಡಿ ರಿಮೂವಲ್ ಫೋರ್ಸೆಪ್ಸ್ ಮೂಲಕ ಹೊರ ತಗೆದು ಮಗುವಿನ ಜೀವ ಉಳಿಸಿದ್ದು, ಸದ್ಯ ಮಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಮಗು ಮೆಂಥೋಪ್ಲಸ್ ಡಬ್ಬಿಯನ್ನು ನುಂಗಿದ್ದರಿಂದ ಅದು ಎಂಜಲನ್ನು ಕೂಡ ನುಂಗಾಲಾರದ ಸ್ಥಿತಿಯಲ್ಲಿತ್ತು. ಮಗು ಡಬ್ಬಿ ನುಂಗಿದ ನಂತರ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆಗೆ 3-4 ಗಂಟೆಗಳಾಗಿತ್ತು. ಇಷ್ಟು ಹೊತ್ತು ಎಂಜಲೂ ಕೂಡ ನುಂಗದೆ ಅದರ ದೇಹದಲ್ಲಿ ನಿರ್ಜಲೀಕರಣವಾಗಲು ಶುರುವಾಗಿತ್ತು. ಮೆಂಥೋಪ್ಲಸ್ ಡಬ್ಬಿ ಧ್ವನಿಪೆಟ್ಟಿಗೆಯ ಪಕ್ಕದಲ್ಲಿರುವ ಹೈಪೋಫ್ಯಾರಿಂಗ್ಸ್‍ನಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಮಗುವಿನ ಉಸಿರಾಟಕ್ಕೂ ತೊಂದರೆಯಾಗಿತ್ತು. ಗಂಟಲಿನಲ್ಲಿ ಮೆಂಥೋಪ್ಲಸ್ ಡಬ್ಬಿ ಅಡ್ಡವಿದ್ದರಿಂದ ಟ್ಯೂಬ್ ಹಾಕಲು ಕೂಡ ಆಗಿರಲಿಲ್ಲ. ನಂತರ ‘ಮ್ಯಾಕಿನ್‍ಟೊಶ್ ಲ್ಯಾರಿಂಗೋಸ್ಕೋಪ್’ ಸಾಧನವನ್ನ ಬಳಸಿ ಡಬ್ಬಿಯನ್ನು ಹೊರತೆಗೆಯಲಾಯ್ತು ಅಂತ ಮಗುವಿಗೆ ಚಿಕಿತ್ಸೆ ನೀಡಿದ ಡಾ. ಮಧುಸೂಧನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ವೈದ್ಯರ ಶ್ರಮದಿಂದ ನಮ್ಮ ಮಗು ಮತ್ತೆ ಹುಟ್ಟಿ ಬಂತು ಅಂತ ಪೋಷಕರು ಖುಷಿಯಲ್ಲಿದ್ದಾರೆ. ಕೊಪ್ಪಳದಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗೋಲ್ಲ ಅನ್ನೋ ಮಾತಿತ್ತು. ಆದ್ರೆ ಈಗ ಅಪರೂಪದ ಚಿಕಿತ್ಸೆ ನಡೆದು ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರ್ತಿವೆ.

Advertisement
Advertisement