-ಸಂಬಳ ಆಗದ್ದಕ್ಕೆ ಹಣ ಪಡೆದರಂತೆ ವೈದ್ಯರು
ತುಮಕೂರು: ವೃದ್ಧೆಯೊಬ್ಬರು ಹಣವಿಲ್ಲ ಎಂದು ಎಷ್ಟೇ ಬೇಡಿಕೊಂಡರೂ ವೈದ್ಯರು ಅವರ ಬಳಿ ಲಂಚ ಪಡೆಯುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಇದನ್ನು ಸ್ಥಳಿಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನಾಗೇಶ್ ರೋಗಿಗಳಿಂದ ಲಂಚ ಪಡೆಯುತ್ತಿರುವ ದೃಶ್ಯಗಳು ಸೆರೆಯಾಗಿವೆ.
Advertisement
ವಿಡಿಯೋದಲ್ಲಿ ಏನಿದೆ?
ಡಾಕ್ಟರ್ ಚಿಕಿತ್ಸೆ ನೀಡುವಾಗ ವ್ಯಕ್ತಿಯೊಬ್ಬ ಯಾಕೆ ಹಣ ಪಡಿತೀರಿ ಎಂದು ಪ್ರಶ್ನೆ ಮಾಡ್ತಾರೆ. ನೀನು ಹಣ ಕೊಟ್ಟಿದ್ದರೆ ಬಂದು ಕೇಳು ಎಂದು ಅಹಂಕಾರದಿಂದ ಡಾಕ್ಟರ್ ಹೇಳ್ತಾರೆ. ಹೌದು, ನಾನು ಕೊಟ್ಟಿದ್ದೇನೆ ಅಂದಾಗ ವೈದ್ಯ ನಾಗೇಶ್, ಯಾವ ಊರಿನವನು ನೀನು ಎಂದು ಪ್ರಶ್ನೆ ಮಾಡಿದ್ದಾರೆ. ವ್ಯಕ್ತಿ ಇದೇ ಊರಿನವನು ಅಂದಾಗ, ಕಳೆದ 10 ತಿಂಗಳಿನಿಂದ ನನ್ನನು ಸೇರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಂಬಳ ಅಗಿಲ್ಲ. ಈ ಬಗ್ಗೆ ಕಳೆದ 5 ತಿಂಗಳಿನಿಂದ ನಮ್ಮ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅದ್ರೂ ಏನು ಪ್ರಯೋಜನ ಅಗಿಲ್ಲ. ಊರಿನಲ್ಲಿ ಜ್ವರ ಹರಡುತ್ತಿದೆ. ಆಸ್ಪತ್ರೆಯ ಕೆಲವು ಸಿಬ್ಬಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದರೂ ನಾವು ಜನರಿಗೆ ಚಿಕಿತ್ಸೆ ನೀಡುತ್ತೇವೆ. ಅವರು ಹಣ ಕೊಡುತ್ತಾರೆ ನಾವು ತೆಗೆದುಕೊಳ್ಳುತ್ತೇವೆ ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಡಾಕ್ಟರ್ ನಾಗೇಶ್ ದುಡ್ಡು ಪಡೆದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
ವೃದ್ಧೆಯೊಬ್ಬರಿಂದ 50 ರೂ. ಪಡೆದು ಜೇಬಿಗಿಳಿಸಿಕೊಳ್ಳುತಿದ್ದ ದೃಶ್ಯವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ ಎಂಬ ದೂರುಗಳು ಕೇಳಿಬಂದಿವೆ. ರೋಗಿಗಳಿಗೆ ಮಾತ್ರೆ, ಗ್ಲೂಕೋಸ್, ಇಂಜೆಕ್ಷನ್ ಸೇರಿದಂತೆ ಇನ್ನಿತರೆ ಯಾವುದೇ ಸೌಲಭ್ಯ ಒದಗಿಸಬೇಕಾದಲ್ಲಿ ವೈದ್ಯರಿಗೆ ರೋಗಿಗಳು ಲಂಚದ ರೂಪದಲ್ಲಿ ಹಣ ನೀಡಬೇಕಾಗಿದೆ.
Advertisement
Advertisement
ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ಲಂಚಾವತಾರದಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ. ವೃದ್ಧೆಯ ಬಳಿಯೇ ಲಂಚ ಪಡೆದಿರುವುದು ಸ್ಥಳೀಯರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.