ದಾವಣಗೆರೆ: ವೈದ್ಯನೊಬ್ಬ ಆಸ್ಪತ್ರೆಯ ಸಿಬ್ಬಂದಿಗೆ ಹಾಗೂ ರೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆಯ ಎಸ್.ಎಂ.ಕೃಷ್ಣ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವೈದ್ಯ ಪ್ರಭುಗೌಡ ಪಾಟೀಲ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬರುತ್ತಿದೆ. ಈತ ಚಿಕಿತ್ಸೆಗೆ ಬರುವ ರೋಗಿಗಳ ಮೈ ಮುಟ್ಟುವುದು ಮತ್ತು ಅಸಭ್ಯವಾಗಿ ಮಾತನಾಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೇ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಎಲ್ಲಿ ಇದೀಯಾ, ರೂಮ್‍ಗೆ ಬಾ ಎಂದು ಕರೆಯುತ್ತಾನಂತೆ. ಅಲ್ಲದೇ ಅಶ್ಲೀಲ ಸಿಡಿಗಳನ್ನು ಕೊಟ್ಟು ನೋಡು ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಕೊನೆಗೆ ವೈದ್ಯನ ಕಿರುಕುಳಕ್ಕೆ ತಾಳಲಾರದೇ ಬೇಸತ್ತ ಸಿಬ್ಬಂದಿ, ಸಾರ್ವಜನಿಕರು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿ ತರಾಟೆಗೆ ತೆಗೆದುಕೊಂಡು ಸರಿಯಾಗಿ ಗೂಸ ಕೊಟ್ಟಿದ್ದಾರೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಮಹಿಳೆಯರು ಆಸ್ಪತ್ರೆಗೆ ಆಗಮಿಸಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮುಕ ವೈದ್ಯನನ್ನು ನಮಗೆ ಒಪ್ಪಿಸಿ ನಾವು ಅಂತವರಿಗೆ ತಕ್ಕ ಶಿಕ್ಷೆ ನೀಡುತ್ತೇವೆ. ಇಂತವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಕಲ್ಲಿನಿಂದ ಹೊಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಸಿಪಿಐ ಶ್ರೀನಿವಾಸ್, ಗಾಂಧಿನಗರ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನೊಂದ ಮಹಿಳೆಯರನ್ನು ಹಾಗೂ ವೈದ್ಯರನ್ನು ಮಹಿಳಾ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ದಾಖಲು ಮಾಡಿಸಿದ್ದಾರೆ.