ಮಂಡ್ಯ: ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಹೆಚ್ಚು ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ವೈದ್ಯನ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೂಲತಃ ಮಂಡ್ಯದ ಪಾಂಡವಪುರದ ಡಾ.ಸತೀಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವೈದ್ಯ. ಕುಶಾಲನಗರ ತಾಲೂಕಿನ ಆನೆಕಾಡು ಬಳಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಕಾರಿನಲ್ಲಿ ವೈದ್ಯನ ಮೃತದೇಹ ಸಿಕ್ಕಿದೆ.
Advertisement
ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ ಆಲೆಮನೆಯಲ್ಲಿ ನಡೆಯುತ್ತಿದ್ದ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣವನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಭೇದಿಸಿ 9 ಮಂದಿಯನ್ನು ಬಂಧಿಸಿದ್ದಾರೆ. ಭ್ರೂಣ ಲಿಂಗ ಪತ್ತೆ, ಹತ್ಯೆಯ ಸಂಬಂಧ ದಿನಕ್ಕೊಂದು ಅಂಶಗಳು ಹೊರಬೀಳುತ್ತಿವೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸದ್ಯ ರಾಜ್ಯ ಸರ್ಕಾರ ಸಿಬಿಐಗೆ ನೀಡಿದೆ.
Advertisement
ನಿನ್ನೆ ಸಚಿವ ದಿನೇಶ್ ಗುಂಡೂರಾವ್ ಹುಳ್ಳೇನಹಳ್ಳಿ ಆಲೆಮನೆಗೆ ಭೇಟಿ ನೀಡಿದ್ದ ವೇಳೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದರು. ಈ ಪ್ರಕರಣದಲ್ಲಿ ಡಾ.ಸತೀಶ್ ಎಂಬವರು ಸಹ ಭಾಗಿಯಾಗಿದ್ದಾರೆ ಎಂದು ಸಚಿವರು ಆರೋಪ ಮಾಡಿದ್ದರು. ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಡಾ.ಸತೀಶ್ ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಮೈಸೂರಿನ ಪಿರಿಯಾಪಟ್ಟಣದ ಕೋಣನೂರಿನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂತು. ಈ ವೇಳೆ ದಿನೇಶ್ ಗುಂಡೂರಾವ್, ಸತೀಶ್ ಬಗ್ಗೆ ಮಾಹಿತಿ ಕಲೆ ಹಾಕಿ ನೋಟಿಸ್ ನೀಡಿ ಆತನ ಬಗ್ಗೆಯೂ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
Advertisement
ಡಾ.ಸತೀಶ್ ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರಾಗಿ ಕೆಲಸ ಮಾಡುವುದರ ಜೊತೆಗೆ ಮಂಡ್ಯದ ಶಿವಳ್ಳಿಯಲ್ಲಿ ವೆಂಕಟೇಶ್ವರ ಎಂಬ ಖಾಸಗಿ ಕ್ಲಿನಿಕ್‌ನ್ನು ಇಟ್ಟುಕೊಂಡಿದ್ದರು. ಪ್ರತಿದಿನ ಸಂಜೆ 7 ಗಂಟೆಯ ನಂತರ ಈ ಕ್ಲಿನಿಕ್‌ನಲ್ಲೂ ಕೆಲಸ ಮಾಡುತ್ತಿದ್ದರು. ಕ್ಲಿನಿಕ್‌ಗೆ ಬರುತ್ತಿದ್ದ ಗರ್ಭಿಣಿಯರ ಪೈಕಿ ಭ್ರೂಣ ಪತ್ತೆ, ಹತ್ಯೆಯ ಆಸಕ್ತರಿಗೆ ಈ ಕರಾಳ ದಂಧೆ ನಡೆಸುತ್ತಿದ್ದವರನ್ನು ಸಂರ್ಪಕ ಮಾಡಲು ರೆಫರ್ ಮಾಡುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್‌ಗೆ ಹೇಳಿದ್ದಾರೆ. ಹೀಗಾಗಿಯೇ ಸತೀಶ್‌ಗೆ ನೋಟಿಸ್ ನೀಡಿ ತನಿಖೆ ನಡೆಸುವಂತೆ ಹೇಳಲಾಗಿತ್ತು. ಇದರ ಬೆನ್ನಲ್ಲೇ ಡಾ.ಸತೀಶ್ ಕುಶಾಲನಗರದ ಆನೆಕಾಡು ಬಳಿ ತಮ್ಮ ಕಾರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.