-ಸರ್ಕಾರಿ ಸಂಬಳ ಬೇಕು ಆದ್ರೆ ಬಡವರ ಸೇವೆ ಬೇಡ
-ಯಾದಗಿರಿಯಲ್ಲಿದ್ದಾನೆ ಯಮಕಿಂಕರ ವೈದ್ಯ
ಯಾದಗಿರಿ: ಸರ್ಕಾರಿ ಸಂಬಳ ಬೇಕು ಆದರೆ ಬಡವರ ಸೇವೆ ಮಾಡಲ್ಲ, ಹಳ್ಳಿಗೆ ಬಂದು ಚಿಕಿತ್ಸೆ ನೀಡಲು ಆಗಲ್ಲ ಎಂದು ಯಾದಗಿರಿಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿಯ ವೈದ್ಯನೊಬ್ಬ ದರ್ಪ ಮೆರೆದಿದ್ದಾನೆ. ಗ್ರಾಮಸ್ಥರೊಬ್ಬರು ಕರೆ ಮಾಡಿ ಆಸ್ಪತ್ರೆಗೆ ಬನ್ನಿ ಎಂದಿದ್ದಕ್ಕೆ ಅವರಿಗೆ ಸಿಕ್ಕಾಪಟ್ಟೆ ಅವಾಜ್ ಹಾಕಿದ್ದಾನೆ.
ಹೌದು. ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯ ವೈದ್ಯ ಪ್ರಕಾಶ್ ರೋಗಿಗಳ ಮೇಲೆ ದರ್ಪ ಮೆರೆದಿದ್ದಾನೆ. ಈತನಿಗೆ ಹಳ್ಳಿಗೆ ಬಂದು ಚಿಕಿತ್ಸೆ ನೀಡಲು ಆಗಲ್ಲವಂತೆ. ಆದರೆ ತಿಂಗಳ ಸಂಬಳ ಮಾತ್ರ ಬೇಕಂತೆ. ಅಲ್ಲದೆ ಹುಣಸಗಿ ಪಟ್ಟಣದಲ್ಲಿ ವಾಸವಿರುವ ಡಾ.ಪ್ರಕಾಶ್ ಮೇಲೆ ಕಾನೂನು ಬಾಹಿರವಾಗಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಆರೋಪ ಸಹ ಕೇಳಿಬಂದಿದೆ. ಜೊತೆಗೆ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬಂದು ರೋಗಿಗಳಿಗೆ ಚಿಕಿತ್ಸೆ ಕೊಡಿ ಎಂದು ಗ್ರಾಮಸ್ಥರು ಕರೆ ಮಾಡಿದರೆ, ಆರೋಗ್ಯ ಸಚಿವರೇ ನನ್ನ ಏನು ಕೇಳಲ್ಲ, ಇನ್ನೂ ನಿಮಗೆ ಯಾಕೆ ಬೇಕು? ಹಳ್ಳಿಗೆ ಬಂದು ಅಲ್ಲಿಯ ವಾತಾವರಣದಲ್ಲಿ ಯಾರಾದರೂ ಕೆಲಸ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ದರ್ಪ ತೋರಿದ್ದಾನೆ.
ಡಾ. ಪ್ರಕಾಶ್ ಕಳೆದ 8 ವರ್ಷದ ಹಿಂದೆ ಕಲ್ಲದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಮುಖ್ಯ ವೈದ್ಯಾಧಿಕಾರಿಯಾಗಿ ನೇಮಕವಾಗಿದ್ದಾನೆ. ಆದರೆ ಇಷ್ಟು ವರ್ಷದಲ್ಲಿ ಅವರು ಆಸ್ಪತ್ರೆಗೆ ಬಂದು ಕೆಲಸ ಮಾಡಿದ್ದು ಬೆರಳೆಣಿಕೆಯಷ್ಟು ದಿನ ಮಾತ್ರ. ತಿಂಗಳಲ್ಲಿ ಒಂದು, ಹೆಚ್ಚೆಂದರೆ ಮೂರು ದಿನ ಬರುವ ಈತ, ಬರೀ ಫೋನ್ ಕಾಲ್‍ನಲ್ಲಿ ಎಲ್ಲಾ ಚಿಕಿತ್ಸೆ ನೀಡುತ್ತಾನೆ. ಆಸ್ಪತ್ರೆಗೆ ಬನ್ನಿ ಸಾರ್ ತುಂಬಾ ಸಿರಿಯಸ್ ಇದೆ ಎಂದು ಗ್ರಾಮಸ್ಥರು ಕರೆ ಮಾಡಿದರೆ ಸಾಕು, ಸಿಡಿಮಿಡಿಗೊಂಡು ಕರೆ ಮಾಡಿದವರ ಮೇಲೆ ಸಿಟ್ಟಿಗೇಳುತ್ತಾನೆ.
ಸರ್ಕಾರಿ ಆಸ್ಪತ್ರೆಗಳೆಂದರೆ ಜನರು ಮೂಗು ಮುರಿಯುತ್ತಾರೆ. ಅಂತದ್ರಲ್ಲಿ ಹಳ್ಳಿಯ ಸರ್ಕಾರಿ ಆಸ್ಪತ್ರೆಯಂದರೆ ಈತನಿಗೆ ಅಲರ್ಜಿಯುಂತೆ. ಒಂದು ವೇಳೆ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯವಿಲ್ಲದ ಪರಿಸ್ಥಿತಿ ಇದ್ದರೆ ವೈದ್ಯ ಆಸ್ಪತ್ರೆಗೆ ಬರೋದಿಲ್ಲ ಅನ್ನೊದಕ್ಕೆ ಕಾರಣವಾಗುತ್ತದೆ. ಆದರೆ ಈ ಊರಿನಲ್ಲಿ ಒಳ್ಳೆಯ ಕಟ್ಟಡ, ಚಿಕಿತ್ಸೆಗೆ ಬೇಕಾದ ಸೌಲಭ್ಯವಿದೆ. ಕಲ್ಲದೇವನಹಳ್ಳಿ ಹೆಬ್ಬಾಳ, ದೇವನೂರು, ಸಿದ್ದಾಪುರ, ಕಚ್ಚಕನೂರು ಸೇರಿದಂತೆ ಹತ್ತಾರು ಹಳ್ಳಿಯ ಗ್ರಾಮಸ್ಥರಿಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರವೇ ಆಸರೆಯಾಗಿದೆ. ನುರಿತ ವೈದ್ಯರು, ಸುಸಜ್ಜಿತವಾದ ಆಸ್ಪತ್ರೆ ಇದ್ದರೂ ಸಹ ವೈದ್ಯಾಧಿಕಾರಿ ಪ್ರಕಾಶ್ ನಿರ್ಲಕ್ಷ್ಯದಿಂದ ನೂರಾರು ಅಮಾಯಕ ಜೀವಗಳು ನಲುಗುವಂತಾಗಿದೆ.
ಪ್ರಕಾಶ್ ವಿರುದ್ಧ ಕೂಡಲೇ ಸರ್ಕಾರ ಕ್ರಮಕೈಗೊಳ್ಳಬೇಕು. ಜೊತೆಗೆ ಕಲ್ಲದೇವನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಒಳ್ಳೆಯ ವೈದ್ಯರನ್ನು ನೇಮಕ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.