Connect with us

Latest

ವಿಡಿಯೋ: ಮಂಚದ ಸಮೇತ 8 ಕಿ.ಮೀ ದೂರ ಬಾಣಂತಿಯನ್ನು ಹೊತ್ತು ಸಾಗಿದ ಡಾಕ್ಟರ್

Published

on

ಭುವನೇಶ್ವರ: ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೆ, ಸೂಕ್ತ ಚಿಕಿತ್ಸೆ ನೀಡದೆ ಅಥವಾ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳು ಬಲಿಯಾದ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ವೈದ್ಯರು ಸುಮಾರು 8 ಕಿ.ಮೀ ದೂರ ಬಾಣಂತಿಯೊಬ್ಬರನ್ನು ಮಂಚದ ಸಮೇತ ಹೊತ್ತೊಯ್ದು ಮಾದರಿಯಾಗಿದ್ದಾರೆ.

ಈ ಘಟನೆ ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಸರಿಗೆಟಾ ಎಂಬ ಕುಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಪಾಪ್ಲುರ್ ಆಸ್ಪತ್ರೆಯಲ್ಲಿ ವೈದ್ಯರಾಗಿರೋ ಡಾ. ಓಂಕಾರ್ ಹೋಟಾ ಅವರು ಬಾಣಂತಿಯನ್ನ 8 ಕಿ.ಮೀ ದೂರದ ಗ್ರಾಮದಿಂದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಸರಿಗೇಟಾ ಗ್ರಾಮದ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ತಿಳಿದ ತಕ್ಷಣ ಓಂಕಾರ್ ಅವರು ಅಟೆಂಡೆಂಟ್‍ವೊಬ್ಬರ ಜೊತೆ ಸರಿಗೆಟಾ ಗ್ರಾಮಕ್ಕೆ ದೌಡಾಯಿಸಿದ್ದರು. ಗರ್ಭಿಣಿಗೆ ಅದಾಗಲೇ ಅತಿಯಾದ ರಕ್ತಸ್ರಾವವಾಗಿದ್ದರಿಂದ ಗ್ರಾಮದಲ್ಲೇ ವೈದ್ಯರು ಆಕೆಗೆ ಹೆರಿಗೆ ಮಾಡಿಸಿದ್ರು. ಆದರೆ ಹೆರಿಗೆ ನಂತರ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿದ್ದರು. ಆದರೆ ಗ್ರಾಮಸ್ಥರು ಮಹಿಳೆಯನ್ನು ಕರೆದೊಯ್ಯಲು ನಿರಾಕರಿಸಿದ್ದರು.

ರಸ್ತೆ ಸರಿ ಇಲ್ಲದ ಕಾರಣ ವೈದ್ಯರು ಹಾಗೂ ಕೆಲವು ಗ್ರಾಮಸ್ಥರು ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಬಾಣಂತಿಯನ್ನು ಆಸ್ಪತ್ರೆಗೆ ರವಾನಿಸಲು ನಿರ್ಧರಿಸಿದ್ದ ಡಾ. ಓಂಕಾರ್ ಹಾಗೂ ಮಹಿಳೆಯ ಪತಿ ಬಾಣಂತಿಯನ್ನು ಮಂಚದಲ್ಲಿ ಮಲಗಿಸಿಕೊಂಡು ಸುಮಾರು 8 ಕಿ.ಮೀ ದೂರದವರೆಗೆ ಕಾಲ್ನಡಿಗೆಯಲ್ಲೇ ಹೊತ್ತೊಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಈ ಮೂಲಕ ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಡಾ.ಓಂಕಾರ್ ಸಾಬೀತು ಪಡಿಸಿದ್ದಾರೆ.

ಚಿಕಿತ್ಸೆ ಹಾಗೂ ಆರೈಕೆಯ ನಂತರ ಬಾಣಂತಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

 

 

 

 

Click to comment

Leave a Reply

Your email address will not be published. Required fields are marked *