ಶ್ರಾವಣ ಮಾಸದ ಶುಕ್ಲಪಕ್ಷದ 5ನೇ ಇಡೀ ಭಾರತದಾದ್ಯಂತ ನಾನಾ ಕಡೆ ನಾನಾ ರೀತಿಯಲ್ಲಿ ನಾಗರ ಪಂಚಮಿಯ (Naga Panchami) ಮನೆ ಮಾಡಿರುತ್ತದೆ. ಈ ದಿನ ಮನೆಮಂದಿ ಮುಂಜಾನೆ ನಾಗನ ಗುಡಿಗೆ ಹೋಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ, ನಾಗದೇವರ ಕಲ್ಲಿಗೆ ಹಾಲೆರೆಯುತ್ತಾರೆ. ನಾಗಪೂಜೆಯ ದಿನ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಎಂಬ ಒಂಬತ್ತು ನಾಗದೇವತೆಗಳನ್ನು ಆರಾಧಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಆಚರಣೆ ಸಂಭ್ರಮದಿಂದಲೇ ಕೂಡಿರುತ್ತದೆ. ಬೆಳ್ಳಂ ಬೆಳಗ್ಗೆ ಜನ ಹುತ್ತಕ್ಕೆ ತನಿ ಎರೆಯುವ ಮೂಲಕ ಆಚರಣೆ ಮಾಡುತ್ತಾರೆ.
Advertisement
ಹೌದು. ಭಾರತೀಯ ಪುರಾಣಗಳಲ್ಲಿ ನಾಗಗಳಿಗೆ ದೈವಿಕ ಸ್ಥಾನ ಇದೆ. ಬ್ರಹ್ಮನ ಮಗ ಕಶ್ಯಪ ದಕ್ಷ ಪ್ರಜಾಪತಿಯ ಹದಿನಾರು ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದ. ಇವರಲ್ಲಿ ಅದಿತಿಯ ಮಕ್ಕಳು ದೇವತೆಗಳು, ದಿತಿಯ ಮಕ್ಕಳು ದೈತ್ಯರು ಮತ್ತು ಕದ್ರುವಿಗೆ ಜನಿಸಿದ್ದ ಸಾವಿರ ಮಕ್ಕಳು ನಾಗಗಳು. ಹೀಗಾಗಿ ನಾಗಗಳು ದೇವತೆಗಳ ಸಂಬಂಧಿಗಳಾಗಿದ್ದಾರೆ ಎಂದು ಜನರ ನಂಬಿಕೆ. ಪುರಾಣಗಳ ಪ್ರಕಾರ, ನಾಗಕುಲದವರು ಪಾತಾಳ ಲೋಕವನ್ನು ಆಳುತ್ತಿದ್ದರು. ಶೇಷ, ತಕ್ಷಕ, ವಾಸುಕಿ, ಅನಂತ, ಪದ್ಮ, ಕಂಬಲ, ಕಾರ್ಕೋಟ, ಅಶ್ವತ್ಥ, ಧೃತರಾಷ್ಟ್ರ, ಶಂಖಪಾಲ, ಕಾಲಿಯಾ, ಪಿಂಗಳ ಎಂಬ 12 ನಾಗಗಳ ಉಲ್ಲೇಖ ಪುರಾಣಗಳಲ್ಲಿ ಬರುತ್ತದೆ. ಮಹಾಭಾರತದ ಪ್ರಕಾರ ರಾಜ ಪರೀಕ್ಷಿತನನ್ನು ನಾಗರಾಜ ತಕ್ಷಕ ಕಚ್ಚಿ ಕೊಂದಿದ್ದ. ಇದಕ್ಕೆ ಪ್ರತಿಕಾರವಾಗಿ ಪರೀಕ್ಷಿತನ ಮಗ ಜನಮೇಜಯ ಸರ್ಪಗಳ ಸಂತಾನವನ್ನೇ ನಿರ್ಮೂಲ ಮಾಡಲು ಮಹಾ ಸರ್ಪಯಜ್ಞವನ್ನೇ ನಡೆಸಿದ್ದ. ನಾಗಕುಲವೇ ನಾಶವಾಗುತ್ತದೆ ಎನ್ನುವಾಗ ಆಸ್ತಿಕ ಎಂಬ ಋಷಿ ಯಾಗಶಾಲೆಗೆ ಬಂದು ಈ ಯಜ್ಞವನ್ನು ತಡೆದಿದ್ದ. ಆಸ್ತಿಕ ನಾಗಯಜ್ಞ ನಿಲ್ಲಿಸಿದ ದಿನವನ್ನೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.
Advertisement
Advertisement
ಅದಕ್ಕಾಗಿಯೇ ಈ ದಿನ ಭಾರತದಂತಹ ದೇಶದಲ್ಲಿ ಹಳ್ಳಿ ಹಳ್ಳಿಗಳಲ್ಲೂ ನಾಗರ ಕಲ್ಲುಗಳು, ನಾಗದೇವರ ಗುಡಿಗಳು, ಶಿವ ಮತ್ತು ವಿಷ್ಣುವಿನ ದೇವಾಲಗಳಲ್ಲೂ ನಾಗದೇವರಿಗಾಗಿ ಗುಡಿಗಳು ಕಾಣುತ್ತೇವೆ. ಅಲ್ಲದೇ ಕೆಲ ದೇವಾಲಯಗಳಲ್ಲಿ ಕಾಲಸರ್ಪ ಬಾಧೆ, ಸರ್ಪದೋಷ ಪರಿಹಾರಕ್ಕಾಗಿ ಪೂಜಾ ವಿಧಿವಿಧಾನಗಳನ್ನೂ ನೆರವೇರಿಸಲಾಗುತ್ತದೆ. ಕರ್ನಾಟಕದಲ್ಲಿ ನಾಗದೈವಾರಾಧನೆ ಹೆಚ್ಚಾಗಿಯೇ ಇದೆ. ಇನ್ನೂ ಕರ್ನಾಟಕ ಹೊರತುಪಡಿಸಿ ನೋಡುವುದಾದರೇ ದೇಶದ ವಿವಿಧ ಭಾಗಗಳಲ್ಲಿ ಜನರಿಂದ ಅಗಾಧ ನಂಬಿಕೆ ಗಳಿಸಿರುವ ದೇವಾಲಯಗಳು ಇವೆ. ಅವುಗಳ ವಿಶೇಷತೆ ಏನೆಂದು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ.
Advertisement
ಕಾಶ್ಮೀರದ ಶೇಷನಾಗ ದೇವಾಲಯ
ಕಾಶ್ಮೀರದಲ್ಲಿ ಹಿಂದಿನ ಕಾಲದಲ್ಲಿ 700ಕ್ಕೂ ಹೆಚ್ಚು ನಾಗಾರಾಧನೆಯ ಕೇಂದ್ರಗಳಿದ್ದವು. ಇಂದಿಗೂ ಸಹ ಇಲ್ಲಿನ ಮನ್ಸಾರ್ ಸರೋವರದ ಪರಿಸರದಲ್ಲಿ ಶೇಷನಾಗಿಗಳು ಎಂಬ ಅಲೆಮಾರಿ ಜನರಿದ್ದಾರೆ. ಇವರು ನಾಗಪೂಜಕರು, ಮನ್ಸಾರ್ ಸರೋವರದ ಪೂರ್ವ ತೀರದ ಸಮೀಪದಲ್ಲಿ ಒಂದು ಸುಪ್ರಸಿದ್ಧ ಶೇಷನಾಗ ದೇವಾಲಯ (Sheshnag Temple) ಇದೆ. ಈ ದೇವಾಲಯ 5 ಶತಮಾನಗಳಷ್ಟು ಪುರಾತನ ಎಂದು ಇಲ್ಲಿನ ಜನ ಹೇಳುತ್ತಾರೆ.
ಈ ದೇವಾಲಯ ನೆಲದಿಂದ ಸುಮಾರು 200 ಅಡಿ ಎತ್ತರದಲ್ಲಿದೆ. ಈ ದೇವಾಲಯದಲ್ಲಿ 6 ತಲೆಗಳ ಶೇಷನಾಗನ ವಿಗ್ರಹ ಇದೆ. ಇವನ ಸುತ್ತ ಹಲವಾರು ಚಿಕ್ಕ ನಾಗಗಳಿವೆ. ವಧು-ವರರು ಇಲ್ಲಿ ಪೂಜೆ ಸಲ್ಲಿಸಿದರೇ ಅವರಿಗೆ ನಾಗರಾಜನ ಆಶೀರ್ವಾದ ಸಿಗುತ್ತದೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಇಲ್ಲಿನವರ ನಂಬಿಕೆ. ಹೀಗಾಗಿ ಕಾಶ್ಮೀರದ ದೂರ ದೂರದ ಭಾಗಗಳಿಂದ ನವವಿವಾಹಿತರು ಶೇಷನಾಗನ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ.
ಈ ಸ್ಥಳದ ಇತಿಹಾಸದ ಪ್ರಕಾರ ಮನ್ಸಾರ್ ಸರೋವರವನ್ನು ನಾಗದೇವ ಶೇಷನಾಗ ಸ್ವತಃ ನಿರ್ಮಿಸಿದ್ದ. ವಿಶಾಲ ಮನ್ಸಾರ್ ಕೆರೆಯ ನಡುವೆ ಹಲವಾರು ದ್ವೀಪಗಳಿವೆ. ಇವುಗಳಲ್ಲಿ ಶೇಷನಾಗ ದ್ವೀಪವೂ ಒಂದಾಗಿದೆ. ಪ್ರವಾಸಿಗಳು ಇಲ್ಲಿಗೆ ದೋಣಿಗಳಲ್ಲಿ ಹೋಗಬಹುದು. ಈ ದ್ವೀಪದಲ್ಲಿ 14ನೇ ಶತಮಾನದ ಶೇಷನಾಗದೇವಿಯ ದೇವಾಲಯ ಇದೆ. ಜಮ್ಮು ವಿಮಾನ ನಿಲ್ದಾಣದಿಂದ ಮನ್ಸಾರ್ ಕೆರೆಗೆ 69 ಕಿಮೀ ದೂರವಿದ್ದು, ಉಧಮ್‌ಪುರದಿಂದ 25 ಕಿಮೀ ದೂರ. ಸಾಂಬಾ ಪಟ್ಟಣದಿಂದ ಇಲ್ಲಿಗೆ ನಡೆದುಕೊಂಡು ಹೋಗಬಹುದು.
ಉಜ್ಜಯಿನಿ ನಾಗಚಂದ್ರೇಶ್ವರ ದೇವಾಲಯ
ಉಜ್ಜಯಿನಿ ಬಾಬಾ ಮಹಾಕಾಲೇಶ್ವರನ ಪವಿತ್ರ ಸ್ಥಾನ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಪ್ರಧಾನಕ್ಷೇತ್ರ ಇದು. ಇಲ್ಲಿರುವ ಮಹಾಕಾಲ ಶಿವಲಿಂಗವನ್ನು ಸ್ವಯಂಭು ಎಂದು ಕರೆಯಲಾಗುತ್ತದೆ. ಉಜ್ಜಯಿನಿಯ ಭವ್ಯ ಮಹಾಕಾಲೇಶ್ವರ ದೇವಾಲಯವನ್ನು ಪರ್ಮಾರ್ ಮನೆತನದ ರಾಜಾ ಭೋಜ 1050ರ ಸುಮಾರಿಗೆ ನಿರ್ಮಿಸಿದ್ದ. ಈ ದೇವಾಲಯದಲ್ಲಿ ಐದು ಅಂತಸ್ತುಗಳಿವೆ. ಎಲ್ಲಕ್ಕಿಂತ ಕೆಳಗೆ ನೆಲಮಾಳಿಗೆ. ಅದರ ಮೇಲಿನ ಅಂತಸ್ತಿನಲ್ಲಿ ಮಹಾಕಾಲೇಶ್ವರ ಲಿಂಗ. ಮಧ್ಯದ ಅಂತಸ್ತಿನಲ್ಲಿರುವುದು ಓಂಕಾರೇಶ್ವರ. 3ನೇ ಮಾಳಿಗೆಯಲ್ಲಿ ನಾಗಚಂದ್ರೇಶ್ವರ (Nagchandreshwar Mandir) ಲಿಂಗವಿದೆ. ಇಲ್ಲಿ 10 ತಲೆಯ ನಾಗನ ಮೇಲೆ ಕುಳಿತಿರುವ ಶಿವನ ವಿಗ್ರಹ ಇದೆ.
ನಾಗನ ಮೇಲೆ ವಿಷ್ಣುವಿನ ಬದಲು ಶಿವನನ್ನು ತೋರಿಸುವ ಏಕಮಾತ್ರ ದೇವಾಲಯ ಇದು. ಈ ಏಕಶಿಲಾ ಮೂರ್ತಿಯಲ್ಲಿ ಶಿವ, ಪಾರ್ವತಿ ಗಣೇಶ, ಭೈರವ ಮತ್ತು ನಂದಿಯನ್ನೂ ಕಾಣಬಹುದು. ಈ ವಿಗ್ರಹವನ್ನು ಶತಮಾನಗಳ ಹಿಂದೆ ನೇಪಾಳದಿಂದ ತರಲಾಗಿತ್ತು ಎನ್ನುತ್ತದೆ ಪುರಾಣ. ದೇವಾಲಯದ ಬಾಗಿಲನ್ನು ವರ್ಷಕ್ಕೆ ಒಮ್ಮೆ ನಾಗರ ಪಂಚಮಿಯ ದಿನ ಮಾತ್ರ ತೆರೆಯಲಾಗುತ್ತದೆ. ಆ ದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ನಾಗಚಂದ್ರೇಶ್ವರ ದೇವಾಲಯದಲ್ಲಿ ಸರ್ಪಶಯನ ಶಿವನನ್ನು ಆರಾಧಿಸುವುದರಿಂದ ಎಲ್ಲ ಸರ್ಪದೋಷಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬಿದ್ದಾರೆ. ಈ ದಿನ ಸ್ವಯಂ ನಾಗರಾಜ ತಕ್ಷಕನೇ ಇಲ್ಲಿಗೆ ಬಂದು ಭಕ್ತರ ಪೂಜೆ ಸ್ವೀಕರಿಸುತ್ತಾನೆ, ನಮ್ಮನ್ನು ಆಶೀರ್ವಧಿಸುತ್ತಾನೆ ಎಂಬುದು ಸಹ ಭಕ್ತರ ನಂಬಿಕೆ.
ಗುಜರಾತ್‌ನ ಭುಜಂಗ ನಾಗ ದೇವಾಲಯ:
ಗುಜರಾತ್‌ನ ಕಛ್ ಜಿಲ್ಲೆಯಲ್ಲಿರುವ ಭುಜ್ ಪಟ್ಟಣದ ಹೊರಗೆ ಭುಜಿಯಾ ಡುಂಗರ್ ಎಂಬ ಬೆಟ್ಟ ಇದೆ. ಈ ಬೆಟ್ಟದ ಮೇಲೆ ಒಂದು ಪ್ರಾಚೀನ ಕೋಟೆ ಇದೆ. ಸುಪ್ರಸಿದ್ದ ಭುಜಂಗ ನಾಗ ದೇವಾಲಯ (Bhujang Naga Temple) ಇರುವುದು ಇಲ್ಲಿಯೇ. ಪುರಾಣದ ಪ್ರಕಾರ ಹಿಂದೆ ಕಛ್ ಪ್ರಾಂತ್ಯವನ್ನು ದೈತ್ಯವಂಶದ ರಾಕ್ಷಸರು ಆಳುತ್ತಿದ್ದರು. ಕಾಠೇವಾಡದಿಂದ ಬಂದಿದ್ದ ಭುಜಂಗ ನಾಗ ಎಂಬ ರಾಜ ಜನರನ್ನು ರಾಕ್ಷಸರ ಆಳ್ವಿಕೆಯಿಂದ ಬಿಡುಗಡೆ ಮಾಡಿ ತನ್ನ ರಾಜ್ಯ ಸ್ಥಾಪಿಸಿದ್ದ.
ಭುಜಂಗನನ್ನು ಜನರು ನಾಗರಾಜ ಎಂದು ಪೂಜಿಸಲು ಆರಂಭಿಸಿದರು. ಈತನನ್ನು ಶೇಷನಾಗನ ಸಹೋದರ ಎಂದು ನಂಬಲಾಯಿತು. ಅವನ ಪೂಜೆಗಾಗಿ ಭುಜಂಗ ದೇವಾಲಯವನ್ನು ನಿರ್ಮಿಸಲಾಗಿತ್ತು. 1715ರಲ್ಲಿ ಜಡೇಜಾ ಮನೆತನದ ರಾಜರು ಇಲ್ಲಿ ಭುಜಿಯಾ ಕೋಟೆಯನ್ನು ನಿರ್ಮಿಸಿದ್ದರು. ಈ ಕೋಟೆಯ ನಡುವೆ ಭುಜಂಗ ನಾಗ ದೇವಾಲಯ ಇದೆ. ನಾಗಾ ಸಾಧುಗಳು ಈ ದೇವಾಲಯದಲ್ಲಿ ನಾಗದೇವತೆಯನ್ನು ಆರಾಧಿಸುತ್ತಿದ್ದರು. ದೇಶಾಲ್ಜೀ ಎಂಬ ರಾಜ 1723ರಲ್ಲಿ ಈ ದೇವಾಲಯದ ಮೇಲೆ ಮಂಟಪ ನಿರ್ಮಿಸಿದ್ದ. ಅಂದಿನಿಂದ ಇಲ್ಲಿ ಶ್ರಾವಣ ಮಾಸದಲ್ಲಿ ನಾಗರಪಂಚಮಿಯ ಉತ್ಸವ ಸಂಭ್ರಮದಿಂದ ಆಚರಿಸಲಾಗುತ್ತದೆ.