ವಿಜಯಪುರ: ಚುನಾವಣೆಯಲ್ಲಿ ನಾನು ಇಂತಹವರಿಗೆ ಮತ ಹಾಕಿ ಎಂದು ಹೇಳಲ್ಲ. ಆದರೆ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳುತ್ತೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಜಿಲ್ಲೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮುಕ್ತ ಮಾಡಿ ಎಂದು ಹೇಳುತ್ತಾರೆ. ಹೀಗೆ ಹೇಳಲು ಇವರು ಯಾರು ಎಂದು ಪ್ರಶ್ನಿಸಿದ ರೈ, ಬಿಜೆಪಿ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದರೆ ನನ್ನ ಹೋರಾಟ ಇನ್ನೂ ತೀವ್ರಗೊಳಿಸುತ್ತೇನೆ ಎಂದು ಹೇಳಿದರು.
Advertisement
Advertisement
ರಾಜಕೀಯ ಪ್ರವೇಶ ಇಲ್ಲ: ಇದೇ ವೇಳೆ ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದ ರೈ, ನನಗೆ ರಾಜಕೀಯ ಬೇಡ. ನಾನು ಹಲವು ಭಾಷೆಗಳಲ್ಲಿ ಸಿನಿಮಾ ಮಾಡುತ್ತೇನೆ. ಸಾಕಷ್ಟು ಹಣ, ಹೆಸರು ಮಾಡಿದ್ದೇನೆ. ಸದ್ಯ ಪ್ರಜೆಗಳಿಗೆ ಧ್ವನಿ ಇಲ್ಲ. ರಾಜಕೀಯ ಬಿಟ್ಟು ಅವರ ಧ್ವನಿಯಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
Advertisement
ಕಾವೇರಿ ಒಂದು ಜೀವನದಿ, ಒಂದೇ ದೇಶದಲ್ಲಿರುವ ಎರಡು ರಾಜ್ಯಗಳು ಸರಿಯಾಗಿ ಹಂಚಿಕೊಳ್ಳಲು ಆಗುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳಿಗೆ ಸಮಸ್ಯೆ ಬಗೆಹರಿಯುವುದು ಬೇಕಾಗಿಲ್ಲ. ಕಾವೇರಿ ನದಿಯ ಮೂಲವನ್ನು ರಕ್ಷಿಸುವ ಕೆಲಸ ಯಾರೂ ಮಾಡುತ್ತಿಲ್ಲ. ಕಾವೇರಿಯ ಕಾಡನ್ನು ರಕ್ಷಿಸುತ್ತಿಲ್ಲ, ಕಾವೇರಿ ತಟದಲ್ಲಿ ನಡೆಯುವ ಮರಳುಗಾರಿಕೆ ನಿಲ್ಲಿಸುವ ಕೆಲಸ ಯಾರೂ ಮಾಡುತ್ತಿಲ್ಲ ಎಂದು ಹೇಳಿ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದರು.
Advertisement
ಕಾವೇರಿಯ ವಿಚಾರವಾಗಿ ತಜ್ಞರು ಚರ್ಚಿಸ ಬೇಕಾದ ವಿಚಾರವನ್ನು ಇಂದು ಯಾರೂ ಬೇಕಾದರು ಮಾತನಾಡುವಂತಾಗಿದೆ. ಕಾವೇರಿ ನದಿಯ ವಿಚಾರವಾಗಿ ತಜ್ಞರೊಂದಿಗೆ ಮಾತನಾಡಿದ್ದೇನೆ. ನದಿಯ ಪಾತ್ರ ಎಷ್ಟಿದೆ. ಎಷ್ಟು ಟಿಎಂಸಿ ನೀರು ಸಿಗುತ್ತೆ. ಟಿಎಂಸಿ ಅಂದರೆ ಏನು? ಎಲ್ಲದರ ಬಗ್ಗೆ ಒಂದೂವರೆ ತಿಂಗಳೊಳಗೆ 20 ನಿಮಿಷದ ಸಾಕ್ಷ್ಯ ಚಿತ್ರವನ್ನು ಮಾಡಿಕೊಡಿ ಎಂದು ಹೇಳಿರುವುದಾಗಿ ತಿಳಿಸಿದ್ದೇನೆ. ನದಿ ಜೋಡಣೆ ಹಾಗೂ ನದಿ ತಿರುವು ಯೋಜನೆಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಎಂದರು. ಅಲ್ಲದೇ ಪರ ಭಾಷಾ ಸಿನಿಮಾಗಳನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದರು.
ಅನಂತಕುಮಾರ್ ಹೆಗ್ಡೆ ವಿರುದ್ಧ ಕಿಡಿ: ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಆ ವೇಳೆ ಸಂವಿಧಾನ ಬದಲಾವಣೆ ಮಾಡಬೇಡಿ ಎಂದರೆ ತಂದೆ ತಾಯಿ, ರಕ್ತ, ಹುಟ್ಟಿನ ಬಗ್ಗೆ ಮಾತನಾಡಿದರೆ ನೋವು ಆಗುವುದಿಲ್ವಾ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಪ್ರಧಾನಿ ಮೋದಿ, ಅಮಿತ್ ಶಾ, ಅನಂತಕುಮಾರ ಹೆಗ್ಡೆ ಅಂಥವರನ್ನು ನಾನು ವಿರೋಧಿಸುತ್ತೇನೆ. ನಾನು ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ಇಂತಹ ರಾಕ್ಷಸರ ಬಗ್ಗೆ ಮಾತನಾಡುತ್ತೇನೆ ಎಂದು ಕಿಡಿ ಕಾರಿದರು.
ಇತಂಹವರ ಬಗ್ಗೆ ಮಾತನಾಡಿದರೆ ನನ್ನನ್ನು ಹಿಂದೂ ವಿರೋಧಿ ಎಂದು ಏಕೆ ತಿಳಿದುಕೊಳುತ್ತೀರಿ. ಅನಂತಕುಮಾರ್ ಅವರೇ ಧೈರ್ಯ ಇದ್ದರೆ ಎದುರಿಗೆ ಬನ್ನಿ. ಒಂದೇ ವೇದಿಕೆಯಲ್ಲಿ ಎದುರು ಬದುರು ಕುಳಿತು ಚರ್ಚೆ ಮಾಡೋಣ ಎಂದು ಸವಾಲು ಎಸೆದರು. ಇದೇ ವೇಳೆ ಜಿಎಸ್‍ಟಿ ಬಗ್ಗೆಯೂ ಕಿಡಿಕಾರಿದ ಅವರು, ಕೈಮಗ್ಗಕ್ಕೆ ಏಕೆ 15% ತೆರಿಗೆ ವಿಧಿಸಿದ್ದೀರಾ ಎಂದು ಮೋದಿ ಅವರನ್ನು ಪ್ರಶ್ನಿಸಿದರು.
ಅಮಿತ್ ಶಾ ವಿರುದ್ಧ ವಾಗ್ದಾಳಿ: ತಮ್ಮ ಪಕ್ಷದ ವಿರುದ್ಧ ನಾಯಿ, ಬೆಕ್ಕು, ಹಾವುಗಳು ಎಲ್ಲರೂ ಒಂದಾಗಿದ್ದಾರೆ ಎಂದು ದೇಶದ ಪ್ರಮುಖ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವವರು ಹೇಳುತ್ತಾರೆ. ಮೋದಿ ಹಾಗೂ ಅಮಿತ್ ಶಾ ಇಬ್ಬರು ಮಾತ್ರ ಮನುಷ್ಯರಾ? ಮೋದಿ ಎನ್ನುವ ಪ್ರಳಯ ಬಂದಿದೆ ಎಂದು ಅವರೇ ಹೇಳುತ್ತಾರೆ. ಪ್ರಳಯ ಬಂದರೆ ಎಲ್ಲಾ ಪ್ರಾಣಿಗಳು ಕೊಚ್ಚಿ ಹೋಗಬಾರದು ಎಂದು ಎಲ್ಲರೂ ಮೇಲೆ ಬರುತ್ತಾರೆ. ಜೀವಿಸುವ ಆಸೆ ಹಾಗೂ ಕನಸುಗಳು ಇರುವ ಪ್ರತಿಯೊಬ್ಬರು ಮೇಲೆ ಎದ್ದು ಬರುತ್ತಾರೆ ಎಂದು ಟಾಂಗ್ ನೀಡಿದರು.