ಭಾರತ ಮೂಲದ ಅಮೆರಿಕ ಗಗನಯಾನಿ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಹೊತ್ತಲ್ಲೇ, ಬಾಹ್ಯಾಕಾಶದ ಬಗ್ಗೆ ಹಲವಾರು ಪ್ರಶ್ನೆಗಳು ಕೇಳಿಬರುತ್ತಿವೆ. ಕಳೆದ 9 ತಿಂಗಳಿಂದ ಗಗನಯಾತ್ರಿ ಸುನಿತಾ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಅಲ್ಲಿ ಅವರ ದಿನಚರಿ ಹೇಗಿರುತ್ತೆ? ಆರೋಗ್ಯ ಕಾಪಾಡಿಕೊಳ್ಳಲು ಏನೇನು ಕ್ರಮ ಅನುಸರಿಸುತ್ತಾರೆ? ಈಗ ಅವರು ಹೇಗಿದ್ದಾರೆ ಎಂಬುದು ಎಲ್ಲರ ಸದ್ಯದ ಕುತೂಹಲದ ಪ್ರಶ್ನೆಗಳು. ಕೆಲವು ದಿನಗಳ ಮಟ್ಟಿಗೆ ಸಂಶೋಧನೆಗೆಂದು ತೆರಳುವ ಗಗನಯಾತ್ರಿಗಳು, ಈ ರೀತಿ ದೀರ್ಘ ಸಮಯದ ವರೆಗೆ ಬಾಹ್ಯಾಕಾಶದಲ್ಲಿ ತಗಲಾಕಿಕೊಂಡರೆ ಹೇಗಿರುತ್ತೆ ಪರಿಸ್ಥಿತಿ?
ಗಗನಯಾತ್ರಿಗಳು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಇರಬೇಕಾದ ಪರಿಸ್ಥಿತಿ ಬಂದರೆ, ಅಲ್ಲಿ ಅವರು ತಿನ್ನುತ್ತಾರೆ, ಮಲಗುತ್ತಾರೆ, ಕೆಲಸ ಮಾಡುತ್ತಾರೆ, ವ್ಯಾಯಾಮ ಮಾಡುತ್ತಾರೆ ಮತ್ತು ಆಟಗಳನ್ನೂ ಆಡುತ್ತಾರೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಭೂಮಿಯಿಂದ ಹೊರಡುವಾಗಲೇ ಮಾಡಿಕೊಂಡಿರುತ್ತಾರೆ. ಆದರೆ ಕುತೂಹಲಕಾರಿ ಪ್ರಶ್ನೆಯೊಂದು ಹುಟ್ಟುಕೊಂಡಿದೆ. ಅವರು ಬಾಹ್ಯಾಕಾಶದಲ್ಲಿ ತಮ್ಮ ಬಟ್ಟೆಗಳನ್ನು ತೊಳೆಯುತ್ತಾರೆಯೇ? ಈ ಪ್ರಶ್ನೆಗೆ ಉತ್ತರ ಸರಳವಾಗಿದ್ದರೂ, ಅದರ ಹಿಂದಿನ ಕೌತುಕಗಳು ಎಲ್ಲರನ್ನೂ ಬೆರಗುಗೊಳಿಸುವಂತಿವೆ.
Advertisement
ಮೊದಲೆಲ್ಲ ಬಾಹ್ಯಾಕಾಶ ಕಾರ್ಯಾಚರಣೆಗಳು ಕೆಲವೇ ದಿನಗಳ ಕಾಲ ನಡೆಯುತ್ತಿದ್ದವು. ಆದ್ದರಿಂದ ಗಗನಯಾತ್ರಿಗಳು ಬಟ್ಟೆಗಳನ್ನು ತೊಳೆಯುವ ಬಗ್ಗೆ ಚಿಂತಿಸದೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಕಾರ್ಯಾಚರಣೆಗಳು ಮೂರರಿಂದ ಎಂಟು ತಿಂಗಳ ವರೆಗೆ ವಿಸ್ತರಿಸಿರುವುದರಿಂದ ಲಾಂಡ್ರಿ ಸೌಲಭ್ಯಗಳಿಲ್ಲದೆ ಅವರು ಹೇಗೆ ನಿಭಾಯಿಸುತ್ತಾರೆ?
Advertisement
ಬಾಹ್ಯಾಕಾಶದಲ್ಲಿ ಬಟ್ಟೆಗಳನ್ನು ತೊಳೆಯಬಹುದೇ?
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಬಟ್ಟೆಗಳನ್ನು ತೊಳೆಯಲು ಸಾಧ್ಯವಿಲ್ಲ. ತಮ್ಮ ಸಂಪೂರ್ಣ ಕಾರ್ಯಾಚರಣೆಗೆ ಸಾಕಷ್ಟು ಬಟ್ಟೆಗಳನ್ನು ಭೂಮಿಯಿಂದಲೇ ಕೊಂಡೊಯ್ಯುವುದು ಸರಳವಾದ ಪರಿಹಾರ ಮಾರ್ಗ. ಬಾಹ್ಯಾಕಾಶದ ಜಾಗದಲ್ಲಿ ನೀರು ಸಿಗಲ್ಲ. ಗಗನಯಾತ್ರಿಗಳು ಕುಡಿಯಲು ಬಳಸುವ ಪ್ರತಿಯೊಂದು ಹನಿ ನೀರನ್ನೂ ಮರುಬಳಕೆ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ ಅಲ್ಲಿ ಬಟ್ಟೆ ತೊಳೆಯುವುದು ಹೇಗೆ ಸಾಧ್ಯ?
Advertisement
ಒಂದು ಬಟ್ಟೆಯನ್ನು ಎಷ್ಟು ಸಮಯ ಧರಿಸಬಹುದು?
ಬಾಹ್ಯಾಕಾಶದಲ್ಲಿ ಒಂದು ಬಟ್ಟೆಯನ್ನು ಹಲವು ದಿನಗಳು ಅಥವಾ ಒಂದು ವಾರದ ವರೆಗೆ ಧರಿಸಬಹುದು. ಭೂಮಿಯಂತೆ ಬಾಹ್ಯಾಕಾಶದಲ್ಲಿ ಧೂಳು ಇರುವುದಿಲ್ಲ. ಆದ್ದರಿಂದ ಬಟ್ಟೆಗಳು ಬಹುಬೇಗ ಕೊಳೆ ಆಗುವುದಿಲ್ಲ. ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಐಎಸ್‌ಎಸ್) ನಿಯಂತ್ರಿತ ತಾಪಮಾನವನ್ನು ಸಹ ನಿರ್ವಹಿಸುತ್ತದೆ. ಆದ್ದರಿಂದ ಆಗಾಗ್ಗೆ ಬಟ್ಟೆ ಬದಲಾಯಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ.
Advertisement
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಬೆವರುತ್ತಾರಾ?
ಬಾಹ್ಯಾಕಾಶದಲ್ಲಿ ಗುರುತ್ವಾರ್ಷಣೆ ಬಲ ಇರಲ್ಲ ಎಂಬುದು ನಿಮಗೆಲ್ಲ ತಿಳಿದೇ ಇದೆ. ಗಗನಯಾತ್ರಿಗಳು ಮೈಕ್ರೊಗ್ರಾವಿಟಿಯಲ್ಲಿ ನಿತ್ಯದ ಚಟುವಟಿಕೆಯಲ್ಲಿ ಹೆಚ್ಚು ಶ್ರಮವಹಿಸುವ ಅಗತ್ಯವಿರುವುದಿಲ್ಲ. ಹೀಗಾಗಿ, ಅವರು ಬೆವರುವ ಸಾಧ್ಯತೆ ತುಂಬಾ ಕಡಿಮೆ. ಆದರೆ, ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚಿನ ವ್ಯಾಯಾಮ ಮಾಡಬೇಕಾಗುತ್ತದೆ. ಈ ತೀವ್ರವಾದ ದೈಹಿಕ ಚಟುವಟಿಕೆಯು ಅವರನ್ನು ಹೆಚ್ಚು ಬೆವರುವಂತೆ ಮಾಡುತ್ತದೆ. ಪರಿಣಾಮ ಅವರ ಬಟ್ಟೆಗಳು ಕೊಳೆಯಾಗುತ್ತವೆ.
ಬಳಸಿದ ಬಟ್ಟೆಗಳ ಕಥೆಯೇನು?
ಗಗನಯಾತ್ರಿಗಳು ಬಳಸುವ ಬಟ್ಟೆಗಳನ್ನು ಕೊಳಕಾಯಿತು ಎಂದರೆ, ಅಲ್ಲಿಗೆ ಅವುಗಳ ಕಥೆ ಮುಗಿಯಿತು ಎಂದೇ ಅರ್ಥ. ಅವುಗಳನ್ನು ಮರುಬಳಕೆ ಮಾಡುವಂತಿಲ್ಲ. ಬಟ್ಟೆಗಳನ್ನು ತೊಳೆಯಬೇಕು ಎಂದರೆ ಭೂಮಿಗೆ ವಾಪಸ್ ತರಬೇಕಾಗುತ್ತದೆ. ಗಗನಯಾತ್ರಿಗಳು ಕಾರ್ಯಾಚರಣೆ ಮುಗಿಸಿ ವಾಪಸ್ ಆಗುವಾಗ ಸರಕು ವಾಹನಗಳಲ್ಲಿ ಬಟ್ಟೆಗಳನ್ನೂ ಪ್ಯಾಕ್ ಮಾಡಿ ತರಲಾಗುತ್ತದೆ. ಬಾಹ್ಯಾಕಾಶದಲ್ಲಿ ತ್ಯಾಜ್ಯ ಉಂಟಾಗುವಂತೆ ಮಾಡಬಾರದು ಎಂಬುದು ಇದರ ಉದ್ದೇಶ. ಭೂಮಿಗೆ ಹಿಂತಿರುಗಿ ತಂದ ಮೇಲೆ ಅವುಗಳನ್ನು ಸುಡಲಾಗುತ್ತದೆ.
ಬಾಹ್ಯಾಕಾಶದಲ್ಲೂ ಬಟ್ಟೆ ತೊಳೆಯಲು ನಡೆದಿದ್ಯಾ ಸಂಶೋಧನೆ?
ಭವಿಷ್ಯದಲ್ಲಿ ಮಂಗಳ ಗ್ರಹದ ಮೇಲೆ ಹಲವಾರು ಕಾರ್ಯಾಚರಣೆಗಳನ್ನು ನಡೆಸಲು ವಿಜ್ಞಾನಿಗಳು ಯೋಜಿಸಿದ್ದಾರೆ. ಹೆಚ್ಚಿನ ಪ್ರಮಾಣದ ಬಟ್ಟೆಗಳನ್ನು ಒಯ್ಯುವುದು ಬಾಹ್ಯಾಕಾಶ ನೌಕೆಗೆ ಅನಗತ್ಯ ಭಾರವನ್ನು ಸೇರಿಸಿದಂತೆಯೇ ಅರ್ಥ. ಆದ್ದರಿಂದ, ಹೆಚ್ಚಿನ ಪ್ರಮಾಣದ ನೀರನ್ನು ಬಳಸದೇ ಬಾಹ್ಯಾಕಾಶದಲ್ಲಿ ಪರಿಣಾಮಕಾರಿಯಾಗಿ ಬಟ್ಟೆಗಳನ್ನು ತೊಳೆಯುವ ಮಾರ್ಗ ಕಂಡುಕೊಳ್ಳಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
2023ರಲ್ಲಿ ‘ಟೈಡ್ ಇನ್ಫಿನಿಟಿ’ ಎಂಬ ವಿಶೇಷ ಡಿಟರ್ಜೆಂಟ್ ಅನ್ನು ಅಭಿವೃದ್ಧಿಪಡಿಸಲಾಯಿತು. ಸಾಮಾನ್ಯ ಪ್ರಮಾಣಕ್ಕಿಂತ ಅರ್ಧ ನೀರಿನಿಂದ ಬಟ್ಟೆಗಳನ್ನು ತೊಳೆಯಲು ಇದನ್ನು ವಿನ್ಯಾಸಗೊಳಿಸಲಾಯಿತು. ಆದರೆ, ನಾಸಾ ಇದನ್ನು ಇನ್ನೂ ಜಾರಿಗೆ ತಂದಿಲ್ಲ. ಅಷ್ಟೇ ಅಲ್ಲ, ಸಂಶೋಧಕರು ‘ವಾಷರ್-ಡ್ರೈಯರ್’ ಸಂಯೋಜನೆಯ ಮೇಲೆ ರಿಸರ್ಚ್ ಮಾಡುತ್ತಿದ್ದಾರೆ. ಅದು ಚಂದ್ರ ಮತ್ತು ಮಂಗಳದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಭೂಮಿಯ ಮೇಲಿನ ಶುಷ್ಕ ಪ್ರದೇಶಗಳಲ್ಲಿ ಸಹ ಪ್ರಯೋಜನಕಾರಿಯಾಗಿದೆ.
ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಯಾವಾಗ?
ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಮಾರ್ಚ್ ತಿಂಗಳಲ್ಲಿ ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ. 2024ರ ಜೂ.5 ರಂದು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಸುನಿತಾ ಮತ್ತು ವಿಲ್ಮೋರ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ (ಐಎಸ್‌ಎಸ್) ಪ್ರಯಾಣ ಬೆಳೆಸಿದ್ದರು. 8 ದಿನಗಳ ಕಾರ್ಯಾಚರಣೆ ಅದಾಗಿತ್ತು. ಎಂಟು ದಿನಗಳ ಬಳಿಕ ಅವರು ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದ ಅವರು ಹಿಂತಿರುಗಲು ಸಾಧ್ಯವಾಗಿಲ್ಲ.
ಈ ಹಿಂದೆಯೇ ಏಪ್ರಿಲ್‌ನಲ್ಲಿ ಇಬ್ಬರನ್ನೂ ಕರೆತರುವುದಾಗಿ ನಾಸಾ ತಿಳಿಸಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಇಬ್ಬರೂ ಗಗನಯಾತ್ರಿಗಳನ್ನು ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ಕ್ಯಾಪ್ಲ್ಯುಯಲ್‌ನಲ್ಲಿ ವಾಪಸ್ ಭೂಮಿಗೆ ಕರೆತರಲು ನಾಸಾ ಸಿದ್ಧತೆ ನಡೆಸಿದೆ. ಕಳೆದ 8 ತಿಂಗಳಿಂದ ಇಬ್ಬರೂ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಈ ಹಿಂದೆ ಅಲ್ಲಿಂದಲೇ ಬಿಡುಗಡೆ ಮಾಡಿದ ವೀಡಿಯೋಗಳಲ್ಲಿ, ‘ನಾವು ಆರೋಗ್ಯವಾಗಿದ್ದೇವೆ’ ಸ್ಪಷ್ಟಪಡಿಸಿದ್ದಾರೆ.