ಬೆಂಗಳೂರು: ರಾಜ್ಯದಲ್ಲಿ ಹೊಸ ವಾಹನಗಳನ್ನು ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಕಳೆದ ಒಂದೆರಡು ತಿಂಗಳಿನಿಂದ ಹೊಸ ವಾಹನ ಖರೀದಿಸುವವರಿಗೆ ಆರ್‌ಟಿಒ ಶಾಕ್ ನೀಡಿದೆ. ಹೊಸ ವಾಹನದಲ್ಲಿ ಜಾಲಿ ರೈಡ್ ಮಾಡಬೇಕು ಎನ್ನುವವರಿಗೆ ಕಳೆದ ಒಂದೆರಡು ತಿಂಗಳಿಂದ ಡಿಎಲ್, ಆರ್‌ಸಿ ಬುಕ್ಕೇ ಸಿಗ್ತಿಲ್ಲ.
ಹೊಸ ವರ್ಷದ ಹೊತ್ತಲ್ಲಿ ಲಕ್ಷಾಂತರ ಜನ ಹೊಸ ವಾಹನಗಳನ್ನು ಖರೀದಿಸುತ್ತಾರೆ. ಬೈಕ್, ಕಾರು, ಆಟೋ, ಲಾರಿ.. ಹೀಗೆ ಜನರ ಅಗತ್ಯಕ್ಕೆ ತಕ್ಕಂತೆ ವಾಹನಗಳನ್ನು ಖರೀದಿಸುತ್ತಾರೆ. ಆದರೆ, ಕಳೆದ ಒಂದು ತಿಂಗಳಿಂದ ಖುಷಿಯಿಂದ ಹೊಸ ವಾಹನಗಳನ್ನ ಖರೀದಿಸಿದ ವಾಹನ ಸವಾರರಿಗೆ ಆ ಖುಷಿ ಉಳಿದಿಲ್ಲ. ಏಕೆಂದರೆ ಹೊಸ ವಾಹನಗಳು ಓಡಿಸೋಕೆ ಆಗತ್ತಿಲ್ಲ. ಅಂತೂ ಇಂತೂ ಸಾಹಸ ಮಾಡಿ ರಸ್ತೆಗಿಳಿದರೆ ದಂಡ ಖಚಿತ ಎನ್ನುವಂತಾಗಿದೆ.
Advertisement
ಹೊಸ ವಾಹನ ಖರೀದಿಸಿದವರಿಗೆ ಮತ್ತೊಂದು ಸಾರಿಗೆ ಇಲಾಖೆಯಿಂದ ಹೊಸ ತಲೆನೋವು ಎದುರಾಗಿದ್ದು, ವಾಹನ ಸವಾರರು ಪ್ರತಿದಿನ ಡಿಎಲ್ ಹಾಗೂ ಆರ್‌ಸಿ ಬುಕ್‌ಗಾಗಿ ಅಲೆದಾಡುವಂತಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಆರ್‌ಟಿಓ ಕಚೇರಿಗಳಲ್ಲಿ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ ಪತ್ರ (ಡಿಎಲ್) ಹಾಗೂ ವಾಹನ ನೊಂದಣಿಯ ಪ್ರಮಾಣಪತ್ರ (ಆರ್‌ಸಿ) ಸ್ಮಾರ್ಟ್ ಕಾರ್ಡ್ ವಿತರಣೆ ಆಗುತ್ತಿಲ್ಲ. ಕಳೆದ ಒಂದೂವರೆ ತಿಂಗಳಿಂದ ಸ್ಮಾರ್ಟ್ ಕಾರ್ಡ್ ಪ್ರಿಂಟ್ ಆಗದ ಕಾರಣ ವಾಹನಗಳ ರಿಜಿಸ್ಟ್ರೇಷನ್ ಹಾಗೂ ಡ್ರೈವಿಂಗ್ ಲೈಸನ್ಸ್ ವಿತರಣೆ ಆಗ್ತಿಲ್ಲ. ಆರ್‌ಟಿಒ ಕಚೇರಿಯಲ್ಲಿನ ಕಂಪನಿಯ ತಾಂತ್ರಿಕ ಸಿಬ್ಬಂದಿಗೆ ಅರ್ಜಿದಾರ ದತ್ತಾಂಶವೂ ವರ್ಗಾವಣೆಯಾಗ್ತಿಲ್ಲ. ಹೀಗಾಗಿ, ಜನ ಆರ್‌ಟಿಒ ಬಳಿ ಬಂದು ವಾಪಸ್ ಹೋಗುವ ಸ್ಥಿತಿ ಬಂದಿದೆ ಅಂತಾ ಏಜೆಂಟ್ ಹಾಗೂ ವಾಹನ ಸವಾರರು ಹೇಳುತ್ತಾರೆ.
Advertisement
ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳನ್ನು ರವಾನಿಸುವಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಅಂತಾ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದ ಡಿಎಲ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳ ಪೂರೈಕೆ ಗುತ್ತಿಗೆಯನ್ನು ಪಡೆದಿದ್ದ ರೋಸ್‌ಮೆರ್ಟಾ ಕಂಪನಿ ಟೆಂಡರ್ ಮುಕ್ತಾಯವಾಗಿದೆ. ಹೀಗಾಗಿ, ಸ್ಮಾರ್ಟ್ ಕಾರ್ಡ್‌ಗಳ ಪೂರೈಕೆಗಾಗಿ ಹೊಸ ಟೆಂಡರ್ ಆಹ್ವಾನಿಸಿದ್ದೇವೆ. ಪ್ರತಿದಿನ 20 ಸಾವಿರ ಡಿಎಲ್ ಕಾರ್ಡ್‌ಗಳು ಹೊಸದಾಗಿ ಬರ್ತಿದ್ದು, ಪೇಡಿಂಗ್ ಉಳಿಯುತ್ತಿವೆ. 15 ದಿನದಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು.
Advertisement
ಆರ್‌ಸಿ ಕಾರ್ಡ್ ಹಾಗೂ ಡಿಎಲ್ ವಿಳಂಬ ಆಗುತ್ತಿರುವುದರಿಂದ ವಾಹನ ಮಾಲೀಕರಿಗೆ ತೊಂದರೆ ಆಗುತ್ತಿದೆ. ಹೊಸ ವಾಹನಗಳನ್ನ ಖರೀದಿ ಮಾಡಿದವರು ರಸ್ತೆಗೆ ವಾಹನ ತರಲು ಆಗುತ್ತಿಲ್ಲ. ಒಂದು ವೇಳೆ ತಂದರೂ ಪೋಲೀಸರು ಫೈನ್ ಹಾಕ್ತಾರೆ. ಹೀಗಾಗಿ, ವಾಹನ ತಂದು ಮನೆ ಮುಂದೆಯೇ ನಿಲ್ಲಿಸುವ ಹಾಗೆ ಆಗಿದೆ. ಈ ಬಗ್ಗೆ ಸಾರಿಗೆ ಇಲಾಖೆ ತಕ್ಷಣವೇ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲದಿದ್ದರೆ ಸಾವಿರಾರು ವಾಹನ ಸವಾರರು ಪರದಾಡಬೇಕಾಗುತ್ತದೆ.